Popular Posts

ಕುತೂಹಲ ಹೆಚ್ಚಿಸಿದ ಮಲ್ಟಿಸ್ಟಾರರ್ “45” ಟ್ರೇಲರ್

ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಿಸಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಚಿತ್ರ “45” ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಡಿ.25 ರಂದು ತೆರೆಗೆ ಬರುತ್ತಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಟ್ರೇಲರ್ ವೈರಲ್ ಆಗಿದೆ.‌ ಬೆಂಗಳೂರಿನ ವಿದ್ಯಾಪೀಠ ಬಳಿಯ ಡೊಂಕಣ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಬೆಂಗಳೂರು ಸೇರಿದಂತೆ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಈ ಚಿತ್ರದ ಟ್ರೇಲರ್ ಅನಾವರಣವಾಗಿದ್ದು ವಿಶೇಷ. ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಸುಧಾರಾಣಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಅವರು ಸಮಾರಂಭದ ಉಪಸ್ಥಿತರಿದ್ದರು.

ನಾನು ಮೂವರು ನಾಯಕರ ಅಭಿಮಾನಿಯಾಗಿ ಈ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಹಾಗಾಗಿ ನನಗೆ ನಿರ್ದೇಶನ ಅಷ್ಟು ಕಷ್ಟವಾಗಲಿಲ್ಲ. ನಾನು ನಿರ್ದೇಶಕನಾಗಲು ಶಿವರಾಜಕುಮಾರ್ ಅವರೆ ಕಾರಣ, ಈ ಚಿತ್ರದ ನಾಲ್ಕನೇ ಹೀರೋ ನಿರ್ಮಾಪಕ ರಮೇಶ್ ರೆಡ್ಡಿ. ಅವರು ಯಾವುದೇ ಕೊರತೆ ಬಾರದ ಹಾಗೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಾನು ಚಿತ್ರ ನಿರ್ದೇಶನಕ್ಕೂ ಮುನ್ನ ಅನಿಮೇಶನ್ ನಲ್ಲಿ ಸಿನಿಮಾ ಮಾಡಿ ಶಿವಣ್ಣ ಹಾಗೂ ರಮೇಶ್ ರೆಡ್ಡಿ ಅವರಿಗೆ ತೋರಿಸಿದ್ದೆ. ಅವರು ಅದನ್ನು ನೋಡಿ ಮೆಚ್ಚಿಕೊಂಡಿದ್ದರು. ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟಿರುವ ಅನೇಕ ಸಂಸ್ಕೃತಿಯನ್ನು ನಾವು ಮರೆತಿದ್ದೇವೆ. ಅಂಥಾ ವಿಷಯದ ಬಗ್ಗೆ ಒಂದೆಳ್ಳೆ ಸಂದೇಶ ಇಟ್ಟುಕೊಂಡು ಈ ಕಥೆ ಹೆಣೆದಿದ್ದೇನೆ.‌ ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ ಎಂದರು.

ನಟ ಶಿವರಾಜಕುಮಾರ್ ಮಾತನಾಡಿ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಬಹಳ ಖುಷಿಯಾಗಿದೆ. ಸುಧಾರಾಣಿ ಅವರು ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಮೋದ್ ಶೆಟ್ಟಿ ಕೂಡ ಇದ್ದಾರೆ. ರಮೇಶ್ ರೆಡ್ಡಿ ಅವರ ನಿರ್ಮಾಣದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅಷ್ಟು ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಾನು ಮೊದಲು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಈ ಚಿತ್ರ ಬಿಡುಗಡೆ ಆದ ಮೇಲೆ ಅರ್ಜುನ್ ಜನ್ಯ ಎಲ್ಲಿಗೋ ಹೋಗುತ್ತಾರೆ‌ ಎಂದರು.

ತೆರೆಯ ಮೇಲೆ ಮೂವರು ಸ್ಟಾರ್ ಗಳು ಕಾಣಿಸಿದ್ದೇವೆ. ಅದರೆ, ತೆರೆಯ ಹಿಂದೆಯೂ ಮೂವರು ಸ್ಟಾರ್ ಗಳು‌ ಇದ್ದಾರೆ. ಮೊದಲ ಸ್ಟಾರ್ ನಿರ್ಮಾಪಕ ರಮೇಶ್ ರೆಡ್ಡಿ. ಅವರು ದುಡಿದಿದ್ದನ್ನೆಲ್ಲಾ ಈ ಚಿತ್ರಕ್ಕೆ ಸುರಿದಿದ್ದಾರೆ. ಎರಡನೇ ಸ್ಟಾರ್ ನಿರ್ದೇಶಕ ಅರ್ಜುನ್ ಜನ್ಯ, ಎರಡು ವರ್ಷದಿಂದ ಶ್ರಮ ಹಾಕಿದ್ದಾರೆ. ಮೂರನೇ ಸ್ಟಾರ್ ಛಾಯಾಗ್ರಾಹಕ ಸತ್ಯ ಹೆಗಡೆ. ಇನ್ನೂ, ಇಪ್ಪತ್ತರ ಯುವಕನನ್ನು ನಾಚಿಸುವ ಉತ್ಸಾಹವಿರುವ ಶಿವಣ್ಣ ಹಾಗು “ಸು ಫ್ರಮ್ ಸೋ” ಮೂಲಕ ಬಹುಬೇಡಿಕೆಯ ನಟರಾಗಿರುವ ರಾಜ್ ಬಿ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದು ನಟ ಉಪೇಂದ್ರ ಹೇಳಿದರು.

ನಟ ರಾಜ್ ಬಿ ಶೆಟ್ಟಿ ಮಾತನಾಡಿ, ನಾನು ಶಿವರಾಜಕುಮಾರ್ ಹಾಗು ಉಪೇಂದ್ರ ಅವರ ಅಭಿಮಾನಿ. ಈ ಚಿತ್ರ ಮುಗಿದ ಮೇಲೆ ಎಷ್ಟೋ ಜನ ನನ್ನನ್ನು ಅಂತಹ ದೊಡ್ಡ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೀರಿ. ಏನನಿಸಿತು? ಎಂದು ಕೇಳಿದರು. ಅದಕ್ಕೆ ನಾನು ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೀನಿ ಅಂತ ಅನಿಸಲೇ ಇಲ್ಲ ಎಂದೆ. ಅವರಿಬ್ಬರೂ ಅಷ್ಟು ಸರಳವಾಗಿದ್ದರು. ಇನ್ನೂ, ನಾವು ಪರಭಾಷಾ ಹಾವಳಿ ಅನ್ನುತ್ತೇವೆ. ನಾವು ಕೂಡ ಹಾವಳಿ ಕೊಡುವ ಚಿತ್ರ ಮಾಡಬೇಕು. ಆ ರೀತಿಯ ಚಿತ್ರ “45” ಆಗಲಿದೆ ಎನ್ನುವ ಭರವಸೆ ನನಗಿದೆ ಎಂದರು.

ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ನಿರ್ಮಾಪಕ ರಮೇಶ್ ರೆಡ್ಡಿ ಅವರು ಮಾತನಾಡುತ್ತ ಡಿಸೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ತುಂಬಾ ಕಷ್ಟಪಟ್ಟು ಕನ್ನಡ ಚಿತ್ರರಂಗಕ್ಕೊಂದು ಕೊಡುಗಡಯಾಗಿ ಈ ಚಿತ್ರ ಮಾಡಿದ್ದೇವೆ. ಜನರಿಗೆ ನಮ್ನ ಚಿತ್ರ ಖಂಡಿತ ಇಷ್ಟವಾಗುತ್ತೆ, ತುಂಬಾ ಪಾಸಿಟಿವ್ ಅಂಶಗಳು ಚಿತ್ರದಲ್ಲಿವೆ ಎಂದು ಹೇಳಿದರು.
ಕಲಾವಿದರಾದ ಪ್ರಮೋದ್ ಶೆಟ್ಟಿ ಹಾಗೂ ಸುಧಾರಾಣಿ “45” ಚಿತ್ರದ ಕುರಿತಂತೆ ತಮ್ಮ ಅನುಭವ ಹಂಚಿಕೊಂಡರು.

Leave a Reply

Your email address will not be published. Required fields are marked *