1
1
ಬದಲಾದ ಕಾಲಘಟ್ಟದಲ್ಲಿ ಸಿನಿಮಾವೊಂದು ಯಶಸ್ವಿಯಾಗಿ 25 ದಿನಗಳನ್ನು ಪೂರೈಸುವುದು ಕನಸಿನ ಮಾತಾಗುತ್ತಿದೆ. ಇಂತಹ ವಾತಾವರಣದಲ್ಲಿ ಚಿತ್ರವೊಂದು 25 ದಿನಗಳ ಪ್ರದರ್ಶನ ಕಂಡು ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದೆ. ಈ ಮೂಲಕ ಒಳ್ಳೆಯ ಸಿನಿಮಾ ಕೊಟ್ಟರೆ ಪ್ರೇಕ್ಷಕಕೈ ಬಿಡಲ್ಲ ಎನ್ನುವುದು ಸಾಬೀತಾಗಿದೆ.
ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮದ ಕಥಾಹಂದರ ಒಳಗೊಂಡ ‘ಫುಲ್ ಮೀಲ್ಸ್’ ಚಿತ್ರವು ನ. 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಇದೀಗ ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ನಾಲ್ಕನೆಯ ವಾರಕ್ಕೆ ಕಾಲಿಟ್ಟಿದೆ..
ಯುವನಟ ಲಿಖಿತ್ ಶೆಟ್ಟಿ ನಾಯಕನಾಗಿ ನಟಿಸಿ ನಿರ್ಮಾಣ ಮಾಡಿರುವ , ಎನ್. ವಿನಾಯಕ ಅವರ ನಿರ್ದೇಶನದ ‘ಫುಲ್ ಮೀಲ್ಸ್’ ಚಿತ್ರಕ್ಕೆ ಪ್ರೇಕ್ಷಕರಿಂದ ಫುಲ್ ಮಾರ್ಕ್ ಸಿಕ್ಕಿದ್ದು, ನಾಯಕಿಯರಾದ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಅವರ ಅಭಿನಯ ಗಮನ ಸೆಳೆದಿದೆ.

ಅಲ್ಲೊಂದು ಮದುವೆ ಫಿಕ್ಸ್ ಆಗಿದೆ, ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಯುತ್ತಿದೆ. ಈ ನಡುವೆ ಮದುಮಗಳಿಗೆ ಫೋಟೋಗ್ರಾಫರ್ ಮೇಲೆಯೇ ಆಕರ್ಷಣೆ ಮೂಡುತ್ತದೆ. ಮುಂದೇನಾಗುತ್ತದೆ?’ ಎಂಬುದನ್ನು ಕುತೂಹಲಕಾರಿ ಅಂಶಗಳೊಂದಿಗೆ ಪ್ರೇಕ್ಷಕರ ಮುಂದೆ ತಂದಿರುವ ‘ಫುಲ್ ಮೀಲ್ಸ್’ ಚಿತ್ರವು, ಕಾಮಿಡಿ ಹಿನ್ನೆಲೆಯ ತ್ರಿಕೋನ ಪ್ರೇಮಕಥೆಯಾಗಿದೆ. ಎಲ್ಲ ವಯೋಮಾನದವರಿಗೆ ಇಷ್ಟವಾಗುವ ಫ್ಯಾಮಿಲಿ ಎಂಟರ್ಟೈನರ್, ಮಧ್ಯಮ ವರ್ಗದ ವೆಡ್ಡಿಂಗ್ ಫೋಟೋಗ್ರಾಫರ್ನ ಜೀವನ ಪಯಣ, ಕನಸುಗಳು ಮತ್ತು ಕುಟುಂಬದ ಮೌಲ್ಯಗಳನ್ನು ಸಹಜವಾಗಿ ತೆರೆದಿಡುವ ಎಂಗೇಜಿಂಗ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದಾಗಿದೆ.
ಈ ಹಿಂದೆ ‘ಸಂಕಷ್ಟಕರ ಗಣಪತಿ’, ‘ಅಬ್ಬಬ್ಬ’, ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಲಿಖಿತ್ ಶೆಟ್ಟಿ ಅವರು ತಮ್ಮ ನಟನೆ, ಆ್ಯಕ್ಷನ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು ಚಿತ್ರರಂಗದ ಭರವಸೆಯ ನಟನಾಗಿ ಮೊತ್ತೊಮ್ಮೆ ಗಮನ ಸೆಳೆದಿದ್ದಾರೆ.

ಇನ್ನು ಈ ಚಿತ್ರವನ್ನು ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದಲ್ಲೇ ಅವರು ಯಶಸ್ಸು ಕಂಡಿದ್ದಾರೆ. ಆ ಮೂಲಕ ಅವರು ಭರವಸೆಯ ಯುವ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೊನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಚೇತನ್ ದುರ್ಗ, ನಾಗೇಂದ್ರ ಅರಸ್, ಮೂಗು ಸುರೇಶ್, ಗಣೇಶ್ ರಾವ್, ಕೋಟೆ ಪ್ರಭಾಕರ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಗುರುಕಿರಣ್ ಅವರ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಅವರ ಸಂಕಲನ, ಮನೋಹರ್ ಜೋಷಿ ಅವರ ಛಾಯಾಗ್ರಹಣ, ಹರೀಶ್ ಗೌಡ ಅವರ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನ, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ, ಕವಿರಾಜ್ ಮತ್ತು ಪ್ರಮೋದ್ ಮರವಂತೆ ಅವರ ಸಾಹಿತ್ಯ ಈ ಚಿತ್ರಕ್ಕಿದೆ.