1
1
ಈ ಹಿಂದೆ ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಎಂಬ ಚಿತ್ರವನ್ನು ನಿರ್ದೇಶಿಸಿ, ಮೊದಲ ಪ್ರಯತ್ನದಲ್ಲೇ ಎಲ್ಲರ ಗಮನ ಸೆಳೆದಿದ್ದ ಚಯನ್ ಶೆಟ್ಟಿ ಇದೀಗ ಮ್ಯಾರೇಜ್ ಪಾರ್ಟಿ ಎಂಬ ಮನರಂಜನಾತ್ಮಕ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಶ್ರೀ ವಾರಾಹಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ವಿ. ಅದ್ದೂರಿಯಾಗಿ ನಿರ್ಮಾಣ ಮಾಡಿರುವ, ಮ್ಯಾರೇಜ್ ಪಾರ್ಟಿ ಚಿತ್ರವನ್ನು ಡಿಸೆಂಬರ್ 4ರಂದು ತೆರೆಗೆ ತರಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ. ವಿಶೇಷವೆಂದರೆ, ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಸೇರಿ 2 ಭಾಷೆಗಳಲ್ಲಿ ತೆರೆಗೆ ಬರಲಿದೆ.
ಮೊದಲ ಚಿತ್ರದಲ್ಲಿ ಗಹನವಾದ ಕಥೆ ಹೇಳಿದ್ದ ಚಯನ್ ಶೆಟ್ಟಿ, ಮ್ಯಾರೇಜ್ ಪಾರ್ಟಿ ಚಿತ್ರದ ಮೂಲಕ ಕರಾವಳಿ ತೀರದಲ್ಲಿ ಘಟಿಸುವ ಹಾಸ್ಯಪ್ರಧಾನ ಕಥನವನ್ನು ದೃಶ್ಯ ರೂಪಕ್ಕಿಳಿಸಿದ್ದಾರೆ. ಕರಾವಳಿ ತೀರದ ಲೊಕೇಷನ್ ಗಳಲ್ಲಿ ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಮ್ಯಾರೇಜ್ ಪಾರ್ಟಿ ಈಗ ಪೋಸ್ಟ್ ಪ್ರ್ರೊಡಕ್ಷನ್ ಹಂತದಲ್ಲಿದೆ, ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಿದೆ.

ಮ್ಯಾರೇಜ್ ಪಾರ್ಟಿ ಗಟ್ಟಿ ಕಥೆ, ಭರಪೂರ ಮನೋರಂಜನೆಯನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್ ಸಿನಿಮಾ ಎಂಬ ವಿಚಾರವನ್ನು ನಿರ್ದೇಶಕರು ಈಗಾಗಲೇ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ಅವರ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಅವರ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಅವರ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ. ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ. ಸತೀಶ್, ಭೀಮ್ ರಾವ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.