Popular Posts

“ಭಾರತಿ ಟೀಚರ್ ಏಳನೇ ತರಗತಿ” ತಂಡದಿಂದ ಸಂಕ್ರಾಂತಿ ಕೊಡುಗೆ

ರಾಘವೇಂದ್ರ ರೆಡ್ಡಿ ಅವರು ನಿರ್ಮಿಸಿದ ಭಾರತಿ ಟೀಚರ್ ಏಳನೇ ತರಗತಿ ಚಿತ್ರ ಸಂಕ್ರಾಂತಿ ಕೊಡುಗೆಯಾಗಿ ಜ. 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ, ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡಬೇಕು, ಚಿತ್ರದ ಆಶಯ ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶದಿಂದ ನಿರ್ಮಾಪಕ ರಾಘವೇಂದ್ರ ರೆಡ್ಡಿ ಅವರು ರಾಜ್ಯದ ಎಲ್ಲ ಸಿಂಗಲ್ ಸ್ಕೀನ್ ಥೇಟರ್‌ಗಳಲ್ಲಿ ಪ್ರವೇಶ ದರವನ್ನು ಕೇವಲ 50ರೂ.ಗಳಿಗೆ ನಿಗದಿಪಡಿಸಿದ್ದಾರೆ, ಕ್ರಿಷಿ ಸಂಸ್ಥೆಯ ವಿತರಕ ವೆಂಕಟ್‌ಗೌಡ ಅವರು ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಆಕೆಯ ಹೆಸರು ಭಾರತಿ, ಏಳನೇ ತರಗತಿ ಓದುವ ವಿದ್ಯಾರ್ಥಿನಿ, ಆದರೆ ಆಕೆಯ ಕನಸು ತುಂಬಾ ದೊಡ್ಡದು, ಆ ಗ್ರಾಮದ ಜನರೆಲ್ಲ ಅಕ್ಷರ ಕಲಿಯಬೇಕು, ಕನ್ನಡ ಭಾಷೆ ಕಲಿತು ವಿದ್ಯಾವಂತರಾಗಬೇಕು ಎನ್ನುವುದು ಆಕೆಯ ಮೇಷ್ಟರ ಕನಸು, ಆದರೆ ಅದನ್ನು ಸಾಕಾರಗೊಳಿಸುವ ಮೊದಲೇ ಅವರು ನಿವೃತ್ತಿಯಾದಾಗ, ಅಲ್ಲೇ ಓದಿದ ಭಾರತಿ ತನ್ನ ಮೇಷ್ಟರು ಕಂಡ ಕನಸನ್ನು ನನಸು ಮಾಡಲು ಹೊರಡುತ್ತಾಳೆ. ಆಗ ಆಕೆಗೆ ಏನೆಲ್ಲ ಅಡ್ಡಿ, ಆತಂಕಗಳು ಎದುರಾದವು, ಆಕೆಯ ಜತೆ ಯಾರೆಲ್ಲ ಕೈಜೋಡಿಸಿದರು ಎಂದು ನಿರ್ದೇಶಕ ಎಂ.ಎಲ್. ಪ್ರಸನ್ನ ಅವರು ಈ ಚಿತ್ರದಲ್ಲಿ ಹೇಳಿದ್ದಾರೆ.
ಸಿರಗುಪ್ಪದ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ಪೂಜ್ಯಾಯ ಫಿಲಂಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಕ್ರಿಷಿ ಸಂಸ್ಥೆಯ ಮೂಲಕ ವಿತರಕ ಹಾಗೂ ನಿರ್ಮಾಪಕರೂ ಆದ ವೆಂಕಟ್‌ಗೌಡ ಅವರು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಎಂ.ಎಲ್.ಪ್ರಸನ್ನ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಸಹ ಅವರೇ ಮಾಡಿದ್ದಾರೆ.

ನಿರ್ಮಾಪಕರ ಪುತ್ರ ರೋಹಿತ್ ರೆಡ್ಡಿ, ಚಿತ್ರದಲ್ಲಿ ಕನ್ನಡ ಪರ ಹೋರಾಟಗಾರನಾಗಿ ಬಣ್ಣ ಹಚ್ಚಿದ್ದಾರೆ, ಮೈಸೂರಿನ ಕು.ಯಶಿಕಾ ಭಾರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ನಿಜ ಜೀವನದಲ್ಲಿ ಯಶಿಕಾ 8ನೇ ತರಗತಿ ವಿದ್ಯಾರ್ಥಿನಿ. ನಿರ್ಮಾಪಕ ರಾಘವೇಂದ್ರ ರೆಡ್ಡಿ ಮಾತನಾಡುತ್ತ ತನ್ನ ಊರನ್ನು ಭಾರತಿ ಹೇಗೆ ಕಂಪ್ಲೀಟಾಗಿ ಎಜುಕೇಟ್ ಮಾಡುತ್ತಾಳೆ, ಹಳ್ಳಿಯಲ್ಲಿ ಹುಟ್ಟಿ ಬೆಳೆದ ಆಕೆ ತನ್ನ ಹಳ್ಳಿಯನ್ನು ಕನ್ನಡ ಮಯವಾಗಿಸಲು, ಹಳ್ಳಿಯ ಜನರನ್ನು ವಿದ್ಯಾವಂತರನ್ನಾಗಿ ಮಾಡಲು ಹೇಗೆ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಾಳೆ ಎಂಬುದನ್ನು ನಮ್ಮ ಚಿತ್ರದಲ್ಲಿ ಹೇಳಿದ್ದೇವೆ, ಭಾರತಿಗೆ ಬೆನ್ನೆಲುಬಾಗಿ ನಿಲ್ಲುವ ಜಿಲ್ಲಾಧಿಕಾರಿಯ ಪಾತ್ರದಲ್ಲಿ ನಟ ಆದಿತ್ಯ ನಟಿಸಿದ್ದಾರೆ, ಅಲ್ಲದೆ ಕೊನೆಯ ದೃಶ್ಯದಲ್ಲಿ ಬರುವ ಸಿಎಂ ಪಾತ್ರವನ್ನು ಸಚಿವ ಸಂತೋಷ್ ಲಾಡ್ ಅವರು ನಿರ್ವಹಿಸಿದ್ದಾರೆ ಎಂದು ಹೇಳಿದರು, ಕಾರ್ಯಕಾರಿ ನಿರ್ಮಾಪಕ ವಿತರಕ ವೆಂಕಟ್‌ಗೌಡ ಮಾತನಾಡಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ, ನಿರ್ಮಾಪಕರು ಲಾಭದ ನಿರೀಕ್ಷೆ ಮಾಡದೆ, ಚಿತ್ರವನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದು ಸಿಂಗಲ್ ಸ್ಕ್ರೀನ್ ಗಳಲ್ಲಿ 50.ರೂ ಪ್ರವೇಶ ದರ ನಿಗದಿ ಮಾಡಿದ್ದಾರೆ, ಈಗಾಗಲೇ ಎಲ್ಲ ಥೇಟರ್‌ಗಳ ಮಾಲೀಕರ ಜತೆ ಮಾತಾಡಿದ್ದೇವೆ, ಅವರೂ ಇದಕ್ಕೆ ಒಪ್ಪಿದ್ದಾರೆ ಎಂದರು. ಉಳಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ದಿವ್ಯಾ ಅಂಚನ್, ಶಾಲೆಯ ಶಿಕ್ಷಕರಾಗಿ ಸಿಹಿಕಹಿ ಚಂದ್ರು, ಅಶ್ವಿನ್‌ಹಾಸನ್, ಬೆನಕಾ ನಂಜಪ್ಪ, ರೋಹಿತ್ ರಾಘವೇಂದ್ರ, ಸೌಜನ್ಯ ಹಾಗೂ ಇತರರು ನಟಿಸಿದ್ದಾರೆ. ಎಂ.ಬಿ.ಹಳ್ಳಿಕಟ್ಟಿ ಅವರ ಛಾಯಾಗ್ರಹಣ, ಸುಜಿತ್ ನಾಯಕ್ ಅವರ ಸಂಕಲನ, ಕೆ.ಎಂ.ಇಂದ್ರ ಅವರ ಸಂಗೀತ ಸಂಯೋಜನೆ, ಕಂಬಿರಾಜ್ ಅವರ ನೃತ್ಯನಿರ್ದೇಶನ ಈ ಚಿತ್ರಕ್ಕಿದ್ದು, ರಾಘವ್ ಸೂರ್ಯ ಹಾಗೂ ದರ್ಶನ್‌ಗೌಡ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಅವರ ಮ್ಯೂಸಿಕ್ ಬಜಾರ್ ಆಡಿಯೋ ಸಂಸ್ಥೆ ಈ ಚಿತ್ರದ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ.

Leave a Reply

Your email address will not be published. Required fields are marked *