Popular Posts

Ragini Dwiwedi and Dharma Keerthiraj in Sindhoori

ಬನಶಂಕರಿ ದೇವಿ ಸನ್ನಿಧಿಯಲ್ಲಿ ಮಹಿಳಾಪ್ರಧಾನ “ಸಿಂಧೂರಿ” ಚಿತ್ರಕ್ಕೆ ಚಾಲನೆ

ನಟಿ ರಾಗಿಣಿ ದ್ವಿವೇದಿ ಅವರೀಗ ಒಮ್ಮೆಗೇ 2-3 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹಿಳಾಪ್ರಧಾನ ಕಥಾಹಂದರ ಒಳಗೊಂಡ “ಸಿಂಧೂರಿ” ಚಿತ್ರದಲ್ಲಿ ನಾಯಕಿಯಾಗಿ ಅವರು ನಟಿಸುತ್ತಿದ್ದು, ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಅಕ್ಷಯ ತೃತೀಯದ ಶುಭದಿನದಂದು ಅದ್ದೂರಿಯಾಗಿ ನೆರವೇರಿತು. ಶಂಭೋ ಶಿವಶಂಕರ ಖ್ಯಾತಿಯ ಶಂಕರ ಕೋನಮಾನಹಳ್ಳಿ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಮೇಶ್ (ಬನಶಂಕರಿ) ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮುಹೂರ್ತದ ನಂತರ ಮಾತನಾಡಿದ ಶಂಕರ ಕೋನಮಾನಹಳ್ಳಿ “ನಿರ್ದೇಶಕನಾಗಿ ನನಗಿದು ನಾಲ್ಕನೇ ಚಿತ್ರ .

ಮೇ 10 ರಿಂದ ಚಿತ್ರೀಕರಣ ಪ್ರಾರಂಭಿಸಿ ಸಕಲೇಶಪುರ ಹಾಗೂ ಇತರೆ ಲೊಕೇಶನ್ ಗಳಲ್ಲಿ 45 ದಿನಗಳ ಕಾಲ ಒಂದೇ ಹಂತದಲ್ಲಿ ಮಾತಿನಭಾಗ ಹಾಗೂ ಹಾಡುಗಳ ಚಿತ್ರೀಕರಣ ನಡೆಸಲಾಗುವುದು. ಶೀರ್ಷಿಕೆ ಕೇಳಿದ ಕೆಲವರು ಇದು ರೋಹಿಣಿ ಸಿಂಧೂರಿ ಮತ್ತು ಡಿ.ಕೆ. ರವಿ ಅವರ ಕಥೆಯಾ? ಎಂದು ಕೇಳಿದ್ದಾರೆ. ಖಂಡಿತ ಅಲ್ಲ, ರೋಹಿಣಿ ಸಿಂಧೂರಿ ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಕಥೆ. ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕಥಾಹಹಂದರ ಇದರಲ್ಲಿದೆ. ಇಲ್ಲಿ ರಾಗಿಣಿ ಮತ್ತು ಧರ್ಮ ಕೀರ್ತಿರಾಜ್ ಜೋಡಿಯಾಗಿ ನಟಿಸುತ್ತಿಲ್ಲ. ರಾಗಿಣಿ ಅವರು ಕಥೆಗೆ ಟರ್ನಿಂಗ್‍ ಪಾಯಿಂಟ್‍ ನೀಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾನು ‘ಬಿಂಗೋ’ ಚಿತ್ರದ ಚಿತ್ರೀಕರಣ ಮಾಡುವಾಗ, ರಾಗಿಣಿ ಅವರಿಗೆ ನನ್ನ ಕೆಲಸ ಇಷ್ಟವಾಗಿ, ಜೊತೆಯಾಗಿ ಇನ್ನೊಂದು ಸಿನಿಮಾ ಮಾಡೋಣ ಎಂದರು. ಆ ಸಂದರ್ಭದಲ್ಲಿ ಈ ಕಥೆ ಹೇಳಿದೆ. ಅವರಿಗೆ ಕಥೆ ಇಷ್ಟವಾಯಿತು. ನಂತರ ಚಿತ್ರಕಥೆ ಬರೆದೆ. ನಿರ್ಮಾಪಕರಿಗೂ ಓಕೆ ಆಯಿತು. ಧರ್ಮ ಅವರು ಚಾಕಲೋಟ್‍ ಬಾಯ್‍ ಆಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅದಕ್ಕೆ ವಿರುದ್ಧವಾದ ಪಾತ್ರ. ಚಿತ್ರದ ನಾಯಕಿ ಹಾಗೂ ಉಳಿದ ತಾರಾಬಳಗದ ಬಗ್ಗೆ ಸದ್ಯದಲ್ಲೇ ತಿಳಿಸುತ್ತೇವೆ ಎಂದರು.

ನಿರ್ಮಾಪಕ ಎಸ್ ರಮೇಶ್ (ಬನಶಂಕರಿ) ಮಾತನಾಡುತ್ತ ಏಳೆಂಟು ವರ್ಷಗಳ ಹಿಂದೆ ‘ವಿಕ್ಕಿ’ ಎಂಬ ಚಿತ್ರ ಮಾಡಿದ್ದೆ. ನಿರ್ದೇಶಕರ ವಂಚನೆಯಿಂದ ಕೊನೆಗೆ ನಾನೇ ಚಿತ್ರ ಮುಗಿಸಿ ಬಿಡುಗಡೆ ಮಾಡಿದೆ. ಇನ್ಮುಂದೆ ಸಿನಿಮಾ ಮಾಡಲೇಬಾರದು ಎಂದು ನಿರ್ಧರಿಸಿದ್ದೆ. ಆದರೆ ಶಂಕರ್ ಬಂದು ಈ ಕಥೆ ಹೇಳಿದಾಗ ಅದೇಕೋ ಇಷ್ಟವಾಗಿ ಮತ್ತೆ ನುರ್ಮಾಣಕ್ಕಿಳಿದಿದ್ದೇನೆ. ಬನಶಂಕರಮ್ಮನ ಆಶೀರ್ವಾದದಿಂದ ಒಂದೊಳ್ಳೆಯ ದಿನದಂದು ಚಿತ್ರ ಪ್ರಾರಂಭಿಸಿದ್ದೇನೆ ಎಂದು ಹೇಳಿದರು.

ನಾಯಕಿ ರಾಗಿಣಿ ದ್ವಿವೇದಿ ಮಾತನಾಡುತ್ತ ಈಗಿನ ಕಾಲದಲ್ಲಿ ಮಹಿಳಾ ಪ್ರಧಾನ ಚಿತ್ರ ಮಾಡುವುದು ಸವಾಲಿನ ಕೆಲಸ. ಅದಕ್ಕೆ ಜನರನ್ನು ಚಿತ್ರಮಂದಿರಗಳಿಗೆ ಕರೆತರುವುದು ಇನ್ನೂ ಕಷ್ಟ. ಹೀಗಿರುವಾಗ, ಒಂದು ವಿಭಿನ್ನ ಕಥೆಗಾಗಿ ಎಲ್ಲರೂ ಒಂದಾಗಿದ್ದೇವೆ. ಇವತ್ತಿನ ಟ್ರೆಂಡ್‍ಗೆ ಚಿತ್ರ ಮಾಡಬೇಕೆಂದರೆ ಮೊದಲು ನಾವು ಬದಲಾಗಬೇಕು. ಈ ಚಿತ್ರದ ಕಥೆ ಅಸಾಧಾರಣವಾಗಿದೆ ಅಂತಲ್ಲ. ವಿಭಿನ್ನವಾಗಿದೆ. ಹೆಸರಲ್ಲೇ ಕೆಂಪು ಬಣ್ಣವಿದೆ. ಉಗ್ರವಾಗಿದೆ. ದುರ್ಗೆಯ ಶಕ್ತಿ, ಸರಸ್ವತಿಯ ಬುದ್ಧಿ, ಲಕ್ಷ್ಮಿಯ ಸಮೃದ್ಧಿ ಇದೆ. ಈ ಚಿತ್ರದಲ್ಲಿ ಎಲ್ಲಾ ಪಾತ್ರಗಳಿಗೂ ಅದರದೇ ಆದ ಮಹತ್ವವಿದೆ. ಚಿತ್ರದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಎಲ್ಲಾ ಅಂಶಗಳೂ ಇವೆ. ‘ಬಿಂಗೋ’ ಶುರುವಾದಾಗಲೇ ಈ ಚಿತ್ರದ ಬಗ್ಗೆ ಮಾತನಾಡಿಕೊಂಡಿದ್ದೆವು. ಇದೊಂದು ಆ್ಯಕ್ಷನ್‍ ಕಮರ್ಷಿಯಲ್‍ ಚಿತ್ರವಾಗಲಿದೆ ಎಂದು ಹೇಳಿದರು.

ನಟ ಧರ್ಮ ಕೀರ್ತಿರಾಜ್ ಮಾತನಾಡುತ್ತ ಶೀರ್ಷಿಕೆ ಕೇಳಿದರೆ ಇದೊಂಂದು ಮಹಿಳಾ ಪ್ರಧಾನ ಚಿತ್ರ ಅನಿಸುತ್ತದೆ. ಜತೆಗೆ ಕೊಲೆಯ ಸುತ್ತ ನಡೆವ ಕಥೆ. ನನ್ನ ಪಾತ್ರದ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ಇಲ್ಲಿ ನಾನು ಮತ್ತು ರಾಗಿಣಿ ಜೋಡಿಯಲ್ಲ. ನಮ್ಮಿಬ್ಬರ ನಡುವೆ ಸಾಕಷ್ಟು ಹಗ್ಗ ಜಗ್ಗಾಟವಿದೆ. ಒಂದೊಳ್ಳೆಯ ತಂಡದ ಜೊತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದರು.
ನಟ ನಾರಾಯಣಸ್ವಾಮಿ, ರಮೀಜ್ ರಾಕಿ, ಛಾಯಾಗ್ರಾಹಕ ರಾಕೇಶ್‍ ಸಿ ತಿಲಕ್, ಸಂಗೀತ ನಿರ್ದೇಶಕ ಹಿತನ್ ಹಾಸನ್‍ ಹಾಗೂ ಸಂಭಾಷಣೆ ಬರೆಯುತ್ತಿರುವ ಹರೀಶ್‍ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *