1
1
ಅಲ್ಲು ಅರವಿಂದ್, ರಾಕ್ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ನಿರ್ಮಾಣ
ಎಂ.ಎಸ್ . ಸುಬ್ಬುಲಕ್ಷ್ಮಿ ಪಾತ್ರದಲ್ಲಿ
ನಟಿ ರಶ್ಮಿಕಾ ಮಂದಣ್ಣ
ದಶಕಗಳ ಕಾಲ ತಮ್ಮ ದೈವಿಕ ಕಂಠದ ಮೂಲಕ ವಿಶ್ವದಾದ್ಯಂತ ಕೇಳುಗರನ್ನು ಮಂತ್ರಮುಗ್ಧಗೊಳಿಸಿದ ಭಾರತದ ಶ್ರೇಷ್ಠ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕುರಿತು ಪ್ಯಾನ್ ಇಂಡಿಯಾ ಚಿತ್ರವೊಂದು ತಯಾರಾಗುತ್ತಿದೆ. ನಿರ್ಮಾಪಕರಾದ ಅಲ್ಲು ಅರವಿಂದ್, ರಾಕ್ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸ್ ಅವರು ಭಾರತ ರತ್ನ ಪುರಸ್ಕೃತೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡತಿ ರಶ್ಮಿಕಾ ಮಂದಣ್ಣ, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ನಿರ್ವಹಿಸಲಿದ್ದು, ಗೌತಮ್ ತಿನ್ನನೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನದ ಸಂದರ್ಭದಲ್ಲಿ ಚೆನ್ನೈನ ಮ್ಯೂಸಿಕ್ ಅಕಾಡೆಮಿಯಲ್ಲಿ ಈ ಚಿತ್ರಕ್ಕೆ ಚಾಲನೆ ನೀಡಲಾಯಿತು. ನಟ ಕಮಲ್ ಹಾಸನ್ ಅವರು ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕುಟುಂಬದ ಸದಸ್ಯರು, ಕರ್ನಾಟಕ ಸಂಗೀತ ಕಲಾವಿದರು ಹಾಗೂ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.
ನಿರ್ದೇಶಕ ಗೌತಮ್ ತಿನ್ನನೂರಿ ಮಾತನಾಡಿ ‘ಒಂದು ವರ್ಷದಿಂದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಹೆಸರು, ನಮ್ಮ ಇಡೀ ತಂಡಕ್ಕೆ ಒಂದು ಮಂತ್ರದಂತಾಗಿದೆ. ನಾವು ಈ ಪ್ರಾಜೆಕ್ಟ್ ಆರಂಭಿಸಿ, ಅವರ ಜೀವನದ ಕುರಿತು ಸಂಶೋಧನೆ ನಡೆಸಿದಾಗ, ಅವರು ಕೇವಲ ಒಬ್ಬ ಶ್ರೇಷ್ಠ ಗಾಯಕಿ ಮಾತ್ರವಲ್ಲ, ಹಲವು ತ್ಯಾಗಗಳನ್ನು ಮಾಡಿದ ವ್ಯಕ್ತಿತ್ವ ಅವರದು ಎಂದು ಗೊತ್ತಾಯಿತು. ಅವರ ಎಲ್ಲಾ ಸಾಧನೆಗಳ ಹಿಂದಿರುವ ಮಹಿಳೆಯನ್ನು ತೆರೆಯ ಮೇಲೆ ತರುವುದೇ ನಮ್ಮ ಉದ್ದೇಶವಾಗಿತ್ತು. ಸುಬ್ಬುಲಕ್ಷ್ಮೀ ಅವರು ತಮ್ಮ ಶ್ರೇಷ್ಠತೆಯನ್ನು ಜೀವನ ಪರ್ಯಂತದ ಶಿಸ್ತು, ತಾಳ್ಮೆ ಹಾಗೂ ಸಮರ್ಪಣೆಯ ಮೂಲಕ ಗಳಿಸಿದರು. ನಮ್ಮ ಚಿತ್ರದ ಮೂಲಕ ಈ ಪೀಳಿಗೆಗೆ ಈ ಪ್ರಬಲ ಸಂದೇಶವನ್ನು ತಲುಪಿಸಲು ಮುಂದಾಗಿದ್ದೇವೆ’ ಎಂದರು.

ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, ‘ಈ ಬಯೋಪಿಕ್ ನಮ್ಮೆಲ್ಲರ ಹಲವು ವರ್ಷಗಳ ಕನಸು. ಈ ಯೋಜನೆಯ ಹಿಂದೆ ಏಳು-ಎಂಟು ವರ್ಷಗಳ ಪರಿಶ್ರಮ ಹಾಗೂ ಸಂಶೋಧನೆ ಅಡಗಿದೆ. ಅಲ್ಲು ಅರವಿಂದ್ ಗಾರು ಹಾಗೂ ಬನ್ನಿ ವಾಸ್ ಅವರೊಂದಿಗೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಕ್ಕೆ ನನಗೆ ಅಪಾರ ಸಂತೋಷವಾಗುತ್ತಿದೆ. ಸುಬ್ಬುಲಕ್ಷ್ಮೀ ಅವರ ಪಾತ್ರಕ್ಕೆ ಸೂಕ್ತರಾದವರನ್ನು ಆಯ್ಕೆ ಮಾಡುವುದು ನಮ್ಮ ಮುಂದಿದ್ದ ಅತಿದೊಡ್ಡ ಸವಾಲಾಗಿತ್ತು. ಇಂತಹ ಪ್ರತಿಷ್ಠಿತ ವ್ಯಕ್ತಿತ್ವಕ್ಕೆ ನಿಜವಾದ ನ್ಯಾಯ ಒದಗಿಸಲು ಯಾರು ಸೂಕ್ತರು ಎಂದು ಸಾಕಷ್ಟು ಚರ್ಚೆ ನಡೆಸಿ ಅಂತಿಮವಾಗಿ ರಶ್ಮಿಕಾ ಮಂದಣ್ಣ ಅವರನ್ನು ಸೆಲೆಕ್ಟ್ ಮಾಡಿದೆವು ಎಂದರು.
ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಮಾತನಾಡಿ, ‘ಇಲ್ಲಿ ಸುಬ್ಬುಲಕ್ಷ್ಮೀ ಅವರ ಭಾವಚಿತ್ರವನ್ನು ನೋಡಿದ ಕ್ಷಣವೇ ನಾನು ಭಾವುಕನಾದೆ. ಈ ಚಿತ್ರವನ್ನು ನಿರ್ಮಿಸಲು ಅವರು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಅವರನ್ನು ತೆರೆಯ ಮೇಲೆ ಪ್ರತಿನಿಧಿಸಲು ರಶ್ಮಿಕಾ ಅವರನ್ನು ಸಹ ಅವರೇ ಆಯ್ಕೆ ಮಾಡಿಕೊಂಡಿದ್ದಾರೆ. ನಿರ್ದೇಶಕ ಗೌತಮ್ ತಿನ್ನನೂರಿ ಒಂದು ವರ್ಷ ಪ್ರವಾಸ ಮಾಡಿ, ಹಲವರನ್ನು ಭೇಟಿಯಾಗಿ, ಸುಬ್ಬುಲಕ್ಷ್ಮೀ ಅವರ ಜೀವನದ ಪ್ರತಿಯೊಂದು ಆಯಾಮದ ಕುರಿತು ಸಂಶೋಧನೆ ನಡೆಸಿದ್ದಾರೆ. ಇನ್ನು, ರಾಕ್ಲೈನ್ ವೆಂಕಟೇಶ್ ಕಳೆದ ಏಳು ವರ್ಷಗಳಿಂದ ಈ ಬಯೋಪಿಕ್ ನಿರ್ಮಿಸಲು ದೃಢಸಂಕಲ್ಪ ಹೊಂದಿದ್ದಾರೆ. ಸುಬ್ಬುಲಕ್ಷ್ಮೀ ಅವರ ಕುಟುಂಬದಿಂದ ಚಿತ್ರದ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸುಬ್ಬುಲಕ್ಷ್ಮೀ ಅವರ ಕುಟುಂಬದವರು ಈ ಯೋಜನೆಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದರು.

ಮತ್ತೊಬ್ಬ ನಿರ್ಮಾಪಕ ಬನ್ನಿ ವಾಸ್ ಮಾತನಾಡಿ, ‘ರಾಕ್ಲೈನ್ ವೆಂಕಟೇಶ್ ಮತ್ತು ಅಲ್ಲು ಅರವಿಂದ್ ನಮ್ಮೆಲ್ಲರನ್ನೂ ಒಗ್ಗೂಡಿಸಿ, ಈ ಕನಸಿನ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಸುಮಾರು 25 ಚಿತ್ರಗಳನ್ನು ನಿರ್ಮಿಸಿದ್ದೇನೆ. ಅವುಗಳಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಈ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕನಾಗಿ ನಿಜವಾದ ಅರ್ಥ ಸಿಕ್ಕಿದೆ ಎಂಬುದು ನನ್ನ ನಂಬಿಕೆ. ಈ ಚಿತ್ರವನ್ನು ನಿರ್ಮಿಸಿ, ಇಂತಹ ಅದ್ಭುತ ಕಥೆಯನ್ನು ಜೀವಂತಗೊಳಿಸುವುದೇ ನನ್ನ ಉದ್ದೇಶವಾಗಿತ್ತು ಎಂದನಿಸುತ್ತಿದೆ’ ಎಂದರು.
ರಶ್ಮಿಕಾ ಮಂದಣ್ಣ ಮಾತನಾಡಿ, ‘ಒಬ್ಬ ನಟಿಯಾಗಿ ಇಂತಹ ಅದ್ಭುತ ಅವಕಾಶ ದೊರೆತಿರುವುದಕ್ಕೆ ನನ್ನ ಹೃದಯ ತುಂಬಿ ಬಂದಿದೆ. ಎಂ.ಎಸ್. ಸುಬ್ಬುಲಕ್ಷ್ಮಿ ಈ ವೇದಿಕೆಯ ಮೇಲೆ ನಿಂತಿರುವುದು, ದೈವಿಕ ಸಾನ್ನಿಧ್ಯದಲ್ಲಿ ನಿಂತ ಅನುಭವವಾಗುತ್ತಿದೆ. ಸುಬ್ಬುಲಕ್ಷ್ಮೀ ಅವರ ಅಸಾಧಾರಣ ಜೀವನ ಪಯಣದ ಒಂದು ಸಣ್ಣ ಭಾಗವಾಗುವ ಅವಕಾಶ ದೊರೆತಿರುವುದಕ್ಕೆ ನನಗೆ ಅಪಾರ ಹೆಮ್ಮೆ ಹಾಗೂ ಗೌರವವಿದೆ. ಈ ಚಿತ್ರದ ಪಯಣದುದ್ದಕ್ಕೂ ಅವರ ಆಶೀರ್ವಾದ ಸದಾ ನಮ್ಮೊಂದಿಗಿರುತ್ತದೆ ಎಂಬ ನಂಬಿಕೆ ಇದೆ. ಈ ಪಾತ್ರವನ್ನು ಎಲ್ಲರೂ ಮೆಚ್ಚುವ ರೀತಿ ನಿರ್ವಹಿಸಲು ಪ್ರಯತ್ನಿಸುತ್ತೇನೆ’ ಎಂದರು.
ಕಮಲ್ ಹಾಸನ್ ಮಾತನಾಡಿ, ‘ಎಂ.ಎಸ್. ಸುಬ್ಬುಲಕ್ಷ್ಮಿ ತಮ್ಮ ಕಂಠದ ಮೂಲಕ ಭಾರತವನ್ನು, ವಿಶೇಷವಾಗಿ ದಕ್ಷಿಣ ಭಾರತವನ್ನು ಒಗ್ಗೂಡಿಸಿದ ಸಂಗೀತ ಸಾಮ್ರಾಜ್ಞಿಯಾಗಿದ್ದರು. ಅವರು ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಅವರು ಯಾವ ಭಾಷೆಯಲ್ಲಿ ಹಾಡಿದರೂ, ತಮ್ಮ ಸಂಗೀತದ ಮೂಲಕ ಆ ಭಾಷೆಯ ಸೌಂದರ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಅವರ ಸಂಗೀತ ನಮಗೆ ನೀಡಿದ ಕಾಲಾತೀತ ಸಂದೇಶ ಇದೇ. ಅವರ ಸುಪ್ರಭಾತಂ, ಲಲಿತಾ ಸಹಸ್ರನಾಮಂ ಅಥವಾ ರಂಗಪುರ ವಿಹಾರವನ್ನು ಕೇಳಿದಾಗಲೆಲ್ಲಾ ನನ್ನ ಹೃದಯ ಸಂತೋಷದಿಂದ ತುಂಬುತ್ತದೆ. ಮಹಾತ್ಮ ಗಾಂಧೀಜಿ ಕೂಡ ಅವರ ಸಂಗೀತದ ಮಹಾನ್ ಅಭಿಮಾನಿಯಾಗಿದ್ದರು. ಈ ಯೋಜನೆಯನ್ನು ಕೈಗೆತ್ತಿಕೊಂಡಿರುವ ಅಲ್ಲು ಅರವಿಂದ್, ರಾಕ್ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸ್ ಅವರಿಗೆ ಅಭಿನಂದನೆಗಳು’ ಎಂದರು.
ಈ ಸಮಾರಂಭದಲ್ಲಿ ಸುಹಾಸಿನಿ, ಶಿವಕುಮಾರ್, ನಿರ್ದೇಶಕ ಮಹೇಂದ್ರನ್, ನಟ-ನಿರ್ದೇಶಕ ಸಮುದ್ರಕಣಿ, ನಿರ್ಮಾಪಕರಾದ ಕಲೈಪುಲಿ ಎಸ್. ಧಾನು, ರಾಜೇಂದ್ರನ್, ಕಾಟ್ರಗಡ್ಡ ಪ್ರಸಾದ್, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಮೊಮ್ಮಗ ಚಂದ್ರಶೇಖರ್ ಹಾಗೂ ಅವರ ಪತ್ನಿ ಮಾಲಾ ಸೇರಿದಂತೆ ಚಿತ್ರರಂಗ ಮತ್ತು ಶಾಸ್ತ್ರೀಯ ಸಂಗೀತ ಕ್ಷೇತ್ರದ ಹಲವು ಗಣ್ಯರು ಉಪಸ್ಥಿತರಿದ್ದರು.