1
1
ಚಿತ್ರ : ಬೆಂಟ್ಲಿ
ನಿರ್ದೇಶಕ : ಸಂತೋಷ್ ಬಾಲರಾಜ್
ನಿರ್ಮಾಪಕಿ : ಶ್ವೇತ ಬಾಲರಾಜ್
ಸಂಗೀತ : ಜೂಡಾ ಸ್ಯಾಂಡಿ
ಛಾಯಾಗ್ರಹಣ : ಕೆಕೆ,
ತಾರಾಗಣ : ಸಂತೋಷ್ ಬಾಲರಾಜ್ , ಸಿಮ್ರಾನ್, ಶೃತಿ, ಚರಣರಾಜ್ , ಬಲ ರಾಜ್ ವಾಡಿ ಮತ್ತು ಇತರರು..
ಆಸ್ತಿಗೋಸ್ಕರ ತನ್ನ ತಾಯಿಯನ್ನೇ ಕೊಲೆಗೈದ ಚಿಕ್ಕಪ್ಪನ ವಿರುದ್ದ ಪ್ರೇಮಿಯ ಮೂಲಕ ಸೇಡು ತೀರಿಸಿಕೊಳ್ಳುವ ನಾಯಕಿಯ ಕಥೆಯನ್ನು ಬೆಂಟ್ಲಿಚಿತ್ರದ ಮೂಲಕ ನಾಯಕ ಕಮ್ ನಿರ್ದೇಶಕರೂ ಆದ ಸಂತೋಷ ಬಾಲರಾಜ್ ಬೆಂಟ್ಲಿ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ಸಂತೋಷ್ ನಟನೆ ಹಾಗೂ ನಿರ್ದೇಶನದ ಕೊನೆಯ ಚಿತ್ರ ಇದಾಗಿದ್ದು, ಚಿತ್ರದ ಬಿಡುಗಡೆಗೂ ಮುನ್ನವೇ ಅವರು ನಮ್ಮನ್ನಗಲಿದ್ದು ವಿಪರ್ಯಾಸ. ಇವರ ತಂದೆ ಆನೇಕಲ್ ಬಾಲರಾಜ್ ನಿರ್ಮಾಣದ, ತಂದೆ ಮಗನ ಕೊನೆಯ ಚಿತ್ರ ಇದಾಗಿದೆ.

ನಾಯಕ ಬೆಂಟ್ಲಿ( ಸಂತೋಷ ಬಾಲರಾಜ್) ಸ್ವಲ್ಪ ಮುಂಗೋಪಿ, ಪ್ರೀತಿ ಮಾಡುವ ಜೋಡಿಗಳಿಗೆ ತಾನೇ ಮುಂದೆ ನಿಂತು ಮದುವೆ ಮಾಡಿಸುವ ಧೈರ್ಯವಂತ. ತಂದೆಯ ನೆರಳಲ್ಲಿ ಬೆಳೆಯೋ ಬೆಂಟ್ಲಿಗೆ ಒಂದು ಫ್ಲಾಶ್ ಬ್ಯಾಕ್ ಕಥೆ ಇದೆ. ಕಥೆಯ ಇನ್ನೊಂದು ಟ್ರ್ಯಾಕ್ ನಲ್ಲಿ ನಾಯಕಿಯ ಸ್ಟೋರಿ ತೆರೆದುಕೊಳ್ಳುತ್ತದೆ. ತಂದೆ, ಮಲತಾಯಿಯ ಜೊತೆ ವಿದೇಶದಿಂದ ತನ್ನ ಹುಟ್ಟೂರಿನ ಚಿಕ್ಕಪ್ಪನ ಮನೆಗೆ ಬರುವ ಖಯಾದು(ಸಿಮ್ರಾನ್ ನಾಟೀಕರ್)ಗೆ ಒಂದು ಸಂದರ್ಭದಲ್ಲಿ ಬೆಂಟ್ಲಿಯ ಭೇಟಿಯಾಗುತ್ತದೆ. ಬೆಂಟ್ಲಿಯ ನಡೆ ನುಡಿಗೆ ಸ್ನೇಹ, ವಿಶ್ವಾಸಕ್ಕೆ ಮನಸೋತು ಪ್ರೀತಿಸುತ್ತಾಳೆ. ತನ್ನ ಅಣ್ಣನ ಮಗಳು ಬೆಂಟ್ಲಿಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದ ತಮ್ಮಣ್ಣ (ಬಲ ರಾಜವಾಡಿ) ಆತನನ್ನು ಕೊಲೆ ಮಾಡಿಸಲು ಪ್ರಯತ್ನಿಸುತ್ತಾನೆ. ಈ ನಡುವೆ ಖಯಾದುಗೆ ತನ್ನ ತಾಯಿ ಮಹಾಲಕ್ಷ್ಮಿ(ಶ್ರುತಿ)ಯನ್ನು ಚಿಕ್ಕಪ್ಪನೇ ಕೊಲೆ ಮಾಡಿಸಿರುವ ಸತ್ಯ ತಿಳಿಯುತ್ತದೆ. ತನ್ನ ತಾಯಿಯನ್ನು ಚಿಕ್ಕಪ್ಪನೇ ಕೊಲೆ ಮಾಡಿಸಲು ಕಾರಣವೇನು, ಅದರ ಹಿಂದಿರು ನಿಗೂಢ ಸತ್ಯವೇನು ಎನ್ನುವುದು ಒಂದೊಂದಾಗಿ ಖಯಾದುಗೆ ತಿಳಿಯುತ್ತದೆ. ಈ ಸಂದರ್ಭದಲ್ಲಿ ಖಯಾದು ಸಹಾಯಕ್ಕೆ ಯಾರು ಬರುತ್ತಾರೆ, ವಿದೇಶದಲ್ಲಿರೋ ತಂದೆಗೆ ಈ ಸತ್ಯ ತಿಳಿಯುತ್ತಾ ಎಂಬ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಥೇಟಿಗೆ ಹೋಗಿ ಈ ಚಿತ್ರವನ್ನು ವೀಕ್ಷಿಸಲೇಬೇಕು.

ಹಣ, ಆಸ್ತಿ ಎನ್ನುವುದು ಮಾನವ ಸಂಬಂಧಗಳನ್ನು ಹೇಗೆ ಹದಗೆಡಿಸುತ್ತದೆ. ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಕುತೂಹಲಕಾರಿಯಾಗಿ ಸಂತೋಷ್ ತೆಗೆದುಕೊಂಡು ಹೋಗಿದ್ದಾರೆ. ಸ್ನೇಹ, ಸಂಬಂಧ, ಪ್ರೀತಿ, ಪ್ರೇಮ, ದ್ವೇಶದ ಸುತ್ತ ಸಾಗುವ ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿರುವ ವಿರ್ದೇಶಕ ಸಂತೋಷ್ ಅವರ ಪರಿ ಚನ್ನಾಗಿದೆ. ಸಂತೋಷ್ ಬಾಲರಾಜ್ ನಟಿಸಿರುವ ಕಡೆಯ ಚಿತ್ರ. ತನ್ನ ನಟನಾ ಸಮರ್ಥ್ಯವನ್ನ ತೆರೆಯ ಮೇಲೆ ಅಚ್ಚುಕಟ್ಟಾಗಿ ತೆರೆದಿಟ್ಟಿದ್ದಾರೆ. ನಾಯಕಿ ಸಿಮ್ರನ್ ಪಾತ್ರದ ಮೇಲೇ ಬಹುತೇಕ ಕಥೆ ಸುತ್ತಲಿದ್ದು, ಅಭಿನಯದಲ್ಲಿ ಆಕೆ ಇನ್ನೂ ಪಳಗಬೇಕಿದೆ. ಹಾಡುಗಳು, ಆಕ್ಷನ್ ಸನ್ನಿವೇಶಗಳು ಉತ್ತಮವಾಗಿ ಮೂಡಿಬಂದಿದೆ. ನಟ ಲೂಸ್ ಮಾದ ಯೋಗಿ ನಾಯಕನ ಪಾತ್ರಕ್ಕೆ ಡಬ್ಬಿಂಗ್ ನಲ್ಲಿ ಸಾತ್ ನೀಡಿದ್ದಾರೆ. ಇನ್ನು ಸಂತೋಷ್ ಸಹೋದರಿ ಶ್ವೇತಾ ಬಾಲರಾಜ್ ಹಾಗೂ ಅವರ ಪತಿ ಅಶೋಕ್ ಈ ಚಿತ್ರದಲ್ಲಿ ನಟಿಸಿ ಜೊತೆಗೆ ಬೆಂಬಲವಾಗಿ ನಿಂತು ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ನೋ ಸ್ಮೋಕಿಂಗ್ ಬೆಡಗಿ ಸಿಮ್ರಾನ್ ನಾಟೀಕರ್ ತೆರೆಮೇಲೆ ಮುದ್ದು ಮುದ್ದಾಗ ಕಾಣಿಸಿಕೊಂಡಿದ್ದಾರೆ. ನಾಯಕಿಯ ತಾಯಿ ಪಾತ್ರದಲ್ಲಿ ಹಿರಿಯ ನಟಿ ಶ್ರುತಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಅದೇ ರೀತಿ ನಟ ಚರಣರಾಜ್ ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ವಿಶೇಷವಾಗಿ ಮತ್ತೊಬ್ಬ ನಟ ಬಲ ರಾಜ್ ವಾಡಿ ವಿಲನ್ ಪಾತ್ರದಲ್ಲಿ ಇಡಿ ಚಿತ್ರವನ್ನು ಆವರಿಸಿಕೊಂಡಿದ್ದಾರೆ.