1
1
ತುಂಬಾ ದಿನಗಳ ನಂತರ ಗ್ರಾಮೀಣ ಸೊಗಡಿನ ಕಾನ್ಸೆಪ್ಟ್ ಒಳಗೊಂಡ ಚಿತ್ರ ಗ್ರಾಮಾಯಣ ತೆರೆಕಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಹಳ್ಳಿಯ ರೈತಾಪಿ ಜನರನ್ನ ವಂಚಿಸಿ, ಅವರಿಗೆ ಸರ್ಕಾರದಿಂದ ಸಿಗಬೇಕಿದ್ದ ಸಾಲ, ಸವಲತ್ತುಗಳನ್ನು ಕಬಳಿಸುವ ರಾಜಕಾರಣಿಗಳು, ಅವರಿಗೆ ಕುಮ್ಮಕ್ಕು ನೀಡುವ ಹಳ್ಳಿಯ ಪುಡಿ ರಾಜಕಾರಣಿಗಳು, ಇದರ ನಡುವೆ ನಾಯಕ, ನಾಯಕಿಯ ಲವ್ ಸ್ಟೋರಿ ಗ್ರಾಮಾಯಣ ಚಿತ್ರದ ಹೈಲೈಟ್ಸ್. ದೊಡ್ಮನೆ ಕುಟುಂಬದ ಮೊಮ್ಮಗ ವಿನಯ್ ರಾಜಕುಮಾರ್ ಗ್ರಾಮೀಣ ಯುವಕನಾಗಿ ಉತ್ತಮ ಅಭಿನಯ ನೀಡಿಡಿದ್ದಾರೆ.

2007-2012ರ ಸಮಯದಲ್ಲಿ ದೇವಪುರ ಎಂಬ ಗ್ರಾಮದಲ್ಲಿ ನಡೆದ ಹಳ್ಳಿ ರಾಜಕಾರಣದ ಕಥೆಯೇ ಈ ಚಿತ್ರದ ಕಥಾವಸ್ತು. ಕಥಾನಾಯಕ ಸೀನ(ವಿನಯ್ ರಾಜಕುಮಾರ್)ನ ಪಾತ್ರದ ಸುತ್ತ ಇಡೀ ಚಿತ್ರಕಥೆ ಸಾಗುತ್ತದೆ, ಚಿಕ್ಕ ರೈತ ಕುಟುಂಬದಲ್ಲಿ ಹುಟ್ಟಿದ ಸೀನ ರಿವೈಂಡಿಂಗ್ ಕೆಲಸ ಮಾಡಿಕೊಂಡಿರುತ್ತಾನೆ, ಸೀನನಿಗೆ ಅದೇ ಊರಿನ ಬಜಾರಿ ಹುಡುಗಿ ಕುಸುಮ(ಮೇಘಾ ಶೆಟ್ಟಿ)ಳ ಮೇಲೆ ಲವ್ವಾಗುತ್ತದೆ. ಆಕೆಯೂ ಸೀನನಿಗೆ ಮನಸೋಲುತ್ತಾಳೆ. ಇವರ ಪ್ರೀತಿಗೆ ಸೀನನ ಗೆಳೆಯರ ಸಹಕಾರವೂ ಇರುತ್ತೆ. ಆ ಹಳ್ಳಿಯಲ್ಲಿ ಯಾವುದೇ ಶುಭ, ಅಶುಭ ಕಾರ್ಯ ನಡೆದರೂ ಬರೋದು ಒಬ್ಬನೇ ಫೋಟೋಗ್ರಾಫರ್, ಅವನೇ ರಮಣಿ(ಜಹಾಂಗೀರ್). ಆ ಊರಲ್ಲಿ 5 ರೂಪಾಯಿ ಡಾಕ್ಟರ್(ಅಚ್ಯುತ್‌ಕುಮಾರ್) ಕೂಡ ಇದ್ದಾರೆ, ಒಮ್ಮೆ ಸೀನನ ಪ್ರಾಣ ಸ್ನೇಹಿತ ರಾಜ ರೈಲಿಂದ ಬಿದ್ದು ಸತ್ತು ಹೋದಾಗ, ಆತನ ತಂಗಿಯ ಮದುವೆ ಮಾಡಿಸುವ ಜವಾಬ್ದಾರಿ ಸೀನನ ಮೇಲೆ ಬೀಳುತ್ತೆ. ಆ ಊರಲ್ಲಿ ಕೇಬಲ್ ದಂದೆ ನಡೆಸುವ ಕರಿಬೆಕ್ಕು (ಯೋಗಿ) ಒಬ್ಬ ಪುಂಡ. ಆತನಿಗೆ ಊರ ಪುಡಿ ರಾಜಕಾರಣಿ ಸ್ವಾಮಿ(ಗೋಪಾಲಕೃಷ್ಣ ದೇಶಪಾಂಡೆ)ಯ ಸಪೋರ್ಟ್ ಬೇರೆ. ಸ್ಥಳೀಯ ಶಾಸಕನ ಅನುದಾನದಿಂದ ಊರ ಅಭಿವೃದ್ದಿಗೆ ಬಿಡುಗಡೆಯಾದ ಅನುದಾನವನ್ನೆಲ್ಲ ಕಬಳಿಸಿ, ಆಸ್ತಿ ಮಾಡಿಕೊಂಡಿರುತ್ತಾನೆ. ಚುನಾವಣೆಯಲ್ಲಿ ಓಟು ಗಿಟ್ಟಿಸುವ ಉದ್ದೇಶದಿಂದ ಊರ ಜನರಿಗೆ ಸಹಾಯ ಮಾಡುವ ನಾಟಕವಾಡುತ್ತಾರೆ, ಈ ನಡುವೆ ಸೀನ ಮತ್ತು ಕುಸುಮಳ ಪ್ರೇಮ್ ಕಹಾನಿಯೂ ಸಾಗುತ್ತದೆ. ಇವರ ಪ್ರೀತಿಗೆ ಕುಸುಮಳ ಮನೆಯಲ್ಲಿ ವಿರೋಧ, ಊರ ಏಳೆಗೆಗೆ ಸರ್ಕಾರದಿಂದ ಬಂದ ಹಣವನ್ನೆಲ್ಲ ನುಂಗಿದ ಸ್ವಾಮಿಯ ಮುಖವಾಡವನ್ನು ಆರ್.ಟಿ.ಈ.ಕಾಯ್ದೆ ಅಡಿ ಕಳಚುವ ಸೀನ.

ಹೀಗೆ ಸಾಗುವ ಚಿತ್ರಕಥೆಯಲ್ಲಿ ಅಪ್ಪಟ ಗ್ರಾಮೀಣ ಸೊಗಡನ್ನು ನಿರ್ದೇಶಕರು ಹದವಾಗಿ ಬೆರೆಸಿ ಉತ್ತಮ ಕಲಾಕೃತಿಯನ್ನು ತೆರೆಯ ಮೇಲೆ ಮೂಡಿಸಿದ್ದಾರೆ, ಸೀನನ ಪಾತ್ರದಲ್ಲಿ ವಿನಯ್ ರಾಜಕುಮಾರ್ ರಗಡ್ ಅಭಿನಯ ಗಮನ ಸೆಳೆಯುತ್ತದೆ, ಬಜಾರಿ ಕುಸುಮಳಾಗಿ ಮೇಘಾ ಶೆಟ್ಟಿ ಕಣ್ಣೋಟದಲ್ಲೇ ಪಡ್ಡೆಗಳನ್ನು ಸೆಳೆಯುತ್ತಾರೆ. ಸೀನನ ತಾಯಿಯಾಗಿ ದಿ.ಅಪರ್ಣಾ ಅವರ ಪ್ರಬುದ್ದ ಅಭಿನಯ ಗಮನಾರ್ಹ, ಇನ್ನು ನೆಗೆಟಿವ್ ಶೇಡ್ ಪಾತ್ರದಲ್ಲಿ ಲೂಸ್‌ಮಾದ ಯೋಗಿ. ಹಳೇ ಲೂಸ್ ಮಾದನನ್ನು ನೆನಪಿಸುತ್ತಾರೆ, ಶಾಸಕನಾಗಿ ಅರುಣ್ ಸಾಗರ್, ರಾಜಕಾರಣಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ, ಬೆಂಕಿಯಲ್ಲಿ ತಂಪು ಕಂಡೆನು ಹಾಡು ಗಮನ ಸೆಳೆಯುತ್ತದೆ, ಚಿತ್ರದ ಕ್ಯಾಮೆರಾ ವರ್ಕ್, ಸಂಗೀತ ಚಿತ್ರದ ಪ್ಲಸ್ ಆಗಿದೆ.