1
1
ಎರಡು ಕಾಲಘಟ್ಟದಲ್ಲಿ ನಡೆಯೋ ಪ್ರೇಮ ಕಥೆಯನ್ನು ಹೇಳುವ ಚಿತ್ರ “ಲವ್ ಮ್ಯಾಟ್ರು” ವಿರಾಟ್ ಬಿಲ್ವ ನಿರ್ದೇಶನದ ಜತೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಸೋನಲ್ ಮಾಂಟೆರೋ, ಸುಶ್ಮಿತಾ ಗೋಪಿನಾಥ್ ನಾಯಕಿಯರು. ಅಚ್ಯುತ್ ಕುಮಾರ್, ಸುಮನ್ ರಂಗನಾಥ್, ಅನಿತಾಭಟ್ ಮತ್ತೊಂದು ಕಥೆಯಲ್ಲಿದ್ದಾರೆ.
ಆಗಸ್ಟ್ 1ಕ್ಕೆ ತೆರೆಗೆ ಬರಲಿರೋ ಈ ಚಿತ್ರದ ಟ್ರೇಲರನ್ನು ಹಿರಿಯ ನಟ ಅಭಿಜಿತ್ ಅವರು ರಿಲೀಸ್ ಮಾಡುವ ಮೂಲಕ ತಂಡಕ್ಕೆ ಶುಭ ಹಾರೈಸಿದರು. ಮಹಿಳಾ ನಿರ್ಮಾಪಕಿ ವಂದನ ಪ್ರಿಯ ಅವರು ಬಂಡವಾಳ ಹೂಡಿರುವುದು ಖುಷಿಯ ವಿಷಯ. ವಿರಾಟ್ ಅವರು ಅಭಿನಯದ ಜೊತೆ ನಿರ್ದೇಶನ ಮಾಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪ್ರೀತಿಯ ಕಥೆ ಇರೋ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದು ಶುಭ ಹಾರೈಸಿದರು.

ನಾಯಕ ಹಾಗೂ ನಿರ್ದೇಶಕ ವಿರಾಟ ಬಿಲ್ವ ಮಾತನಾಡುತ್ತ ಎರಡು ವಯೋಮಾನದ ಪ್ರೇಮ ಕಥೆಯನ್ನ ತೆರೆಮೇಲೆ ತೋರಿಸಲು ಪ್ರಯತ್ನಿಸಿದ್ದೇವೆ, ಪ್ರೇಕ್ಷಕ ಊಹಿಸಿದಂತೆ ಚಿತ್ರ ಇರುವುದಿಲ್ಲ. ನಾನು ಈ ಹಿಂದೆ ರಂಗಭೂಮಿ, ಸೀರಿಯಲ್, ಕಿರುಚಿತ್ರ ಹಾಗೂ ಸಹಾಯಕ ನಿರ್ದೇಶಕನಾಗಿ ಕೆ .ಎಂ. ಚೈತನ್ಯ , ಸುಕ್ಕಾ ಸೂರಿ, ಜತೆ ಕೆಲಸ ಮಾಡಿದ್ದೇನೆ. ವಿಭಿನ್ನ ಪ್ರೇಮ ಕಥೆಯನ್ನು ಸಿದ್ಧಪಡಿಸಿಕೊಂಡು ನಟನೆ ಹಾಗೂ ನಿರ್ದೇಶನದ ಮೂಲಕ ಲವ್ ಮ್ಯಾಟ್ರು ಚಿತ್ರವನ್ನ ಪ್ರೇಕ್ಷಕರ ಮುಂದೆ ತರುತ್ತಿದ್ದೇನೆ. ಪ್ಯೂರ್ ಲವ್, ಅಟ್ರಾಕ್ಷನ್ ಲವ್ ಎರಡೂ ಚಿತ್ರದಲ್ಲಿದೆ. ಬೆಂಗಳೂರು ಹಾಗೂ ಕುದುರೆಮುಖದಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದರು.
ನಿರ್ಮಾಪಕಿ ವಂದನಾ ಪ್ರಿಯ ಮಾತನಾಡುತ್ತ ನಮ್ಮ ಸುತ್ತಮುತ್ತ ಗಮನಿಸಿದಂತಹ ಕೆಲವು ಪ್ರೇಮ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರಕಥೆ ಹೆಣೆದಿದ್ದೇವೆ. ಈ ಲವ್ ಕಂಟೆಂಟ್ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತೆ. ಒಂದಷ್ಟು ಸಮಸ್ಯೆ ಇದ್ದರೂ ಅದನ್ನ ನಿಭಾಯಿಸಿ ಮುಂದೆ ಬಂದಿದ್ದೇವೆ. ಅದೇ ರೀತಿ ಕಲಾವಿದರು, ಟೆಕ್ನಿಕಲ್ ಟೀಂ ಸಹ ತುಂಬ ಸಹಕಾರ ನೀಡಿದ್ದಾರೆ. ನಮ್ಮ ಚಿತ್ರಕ್ಕೆ ಮಾಧ್ಯಮದವರ ಪ್ರೋತ್ಸಾಹ, ಬೆಂಬಲ ಬೇಕು ಎಂದು ಕೇಳಿಕೊಂಡರು. ಸಿಲ್ವರಿಥಮ್ PRODUCTION ಮತ್ತು INK ಸಿನಿಮಾಸ್ ಸಂಸ್ಥೆಯ ಅಡಿಯಲ್ಲಿ ಸಿದ್ಧವಾಗಿರುವ ಈ ಚಿತ್ರದ ನಿರ್ಮಾಣಕ್ಕೆ ಉಮಾ ನಾಗರಾಜ್, ಪ್ರಭು ಕುಮಾರ್ ಸಾಥ್ ನೀಡಿದ್ದಾರೆ.

ನಟಿ ಸೋನಾಲ್ ಮಂಟೆರೋ ಮಾತನಾಡುತ್ತ ನಮ್ಮ ಚಿತ್ರದ ನಿರ್ಮಾಪಕಿ ಬಹಳ ಧೈರ್ಯವಂತೆ, ಅದಕ್ಕೆ ನಿರ್ದೇಶಕರ ಸಪೋರ್ಟ್ ಕೂಡ ಚೆನ್ನಾಗಿತ್ತು, ನನ್ನ ಪಾತ್ರ ಕೂಡ ಬಹಳ ಸೊಗಸಾಗಿದೆ. ಲವ್ ಮ್ಯಾಟ್ರು ಟೈಟಲ್ಲೇ ಹೇಳುವಂತೆ ಇದರಲ್ಲಿರೋ ಲವ್ ಕಂಟೆಂಟ್ ಬಹಳ ಕುತೂಹಲಕಾರಿಯಾಗಿದೆ. ಎಂದರು. ಅದೇ ರೀತಿ ಮತ್ತೊಂದು ಪ್ರಮುಖ ಪಾತ್ರ ಮಾಡಿರುವ ಅಚ್ಚುತ್ ಕುಮಾರ್ ಮಾತನಾಡುತ್ತ ಪ್ರೀತಿಯ ಕಂಟೆಂಟ್ ಇರುವ ಚಿತ್ರಗಳು ಪ್ರೇಕ್ಷಕರನ್ನ ಬೇಗ ಸೆಳೆಯುತ್ತದೆ. ಈ ಸಿನಿಮಾದಲ್ಲೂ ಎರಡು ಟ್ರ್ಯಾಕ್ ವಿಭಿನ್ನವಾಗಿದೆ ಎಂದರು. ಮತ್ತೊಬ್ಬ ನಟಿ ಅನಿತಾ ಭಟ್ ಮಾತನಾಡುತ್ತ ಇದು ಎರಡು ಕಾಲಘಟ್ಟಗಳ ಪ್ರೇಮಪಯಣ ಇರುವ ಚಿತ್ರ, ಅಚ್ಚುತ್ ಕುಮಾರ್, ಸುಮನ್ ರಂಗನಾಥ್ ಹಾಗೂ ನನ್ನ ಕಾಂಬಿನೇಷನ್ ಬಹಳ ವಿಭಿನ್ನವಾಗಿದೆ ಎಂದರು. ಮತ್ತೊಬ್ಬ ನಟಿ ಸುಶ್ಮಿತಾ ಗೋಪಿನಾಥ್ ಬಂದಿರಲಿಲ್ಲ.
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಟ್ರ್ಯಾಕ್ ಸೋಲಮಾನ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಕ ಪರಮ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಾಗುರ್ ಟಾಕೀಸ್ ಮೂಲಕ ಪ್ರಶಾಂತ್ ಅವರು ಈ ಚಿತ್ರವನ್ನು ರಾಜ್ಯದಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಿದ್ದಾರೆ.