Popular Posts

ಕೊಹಿನೂರ್ ವಜ್ರದ ಮೇಲೆ ಹರಿಹರ ವೀರಮಲ್ಲು ಕಣ್ಣು

ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅಭಿನಯದ ಹರಿಹರ ವೀರಮಲ್ಲು ಗುರುವಾರ ತೆರೆಕಂಡಿದೆ. ತಾವು ಡಿಸಿಎಂ ಆಗೋಕೂ ಮುಂಚೆಯೇ ಅವರು ಈ ಚಿತ್ರದಲ್ಲಿ ನಟಿಸಿದ್ದರು. ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಪವನ್, ಬಾಕಿ ಉಳಿದ ಶೂಟಂಗ್ ಮುಗಿಸಿಕೊಟ್ಟು ಚಿತ್ರದ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದೊಂದು ಕಾಲ್ಪನಿಕ ಹಾಗೂ ಐತಿಹಾಸಿಕ ಕಥಾನಕ ಇರೋ ಚಿತ್ರ. ಕ್ರಿಶ್ ಹಾಗೂ ಜ್ಯೋತಿಕೃಷ್ಣ ‘ಹರಿಹರ ವೀರಮಲ್ಲು’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ೧೬ನೇ ಶತಮಾನದಲ್ಲಿ ನಡೆಯುವ ಕಥೆಯಿದಾಗಿದ್ದು, ಚಿತ್ರಕ್ಕಾಗಿ ಪವನ್ ಕಲ್ಯಾಣ್ ಸಾಕಷ್ಟು ಎಫರ್ಟ್ ಹಾಕಿರುವುದು ಎದ್ದು ಕಾಣುತ್ತದೆ.

ಮೊಘಲ್ ದೊರೆ ಔರಂಗಜೇಬನ(ಬಾಬಿ ಡಿಯೋಲ್) ಆಳ್ವಿಕೆಯಲ್ಲಿ ಭಾರತೀಯರು ಸಂಕಷ್ಟ ಎದುರಿಸುತ್ತಿದ್ದ ಸಮಯ. ಆತ ಜನರನ್ನು ಬಲವಂತವಾಗಿ ಮತಾಂತರಗೊಳಿಸುತ್ತಾನೆ. ಒಪ್ಪದಿದ್ದವರ ಮೇಲೆ ಜಿಜಿಯಾ ತೆರಿಗೆ ಹಾಕುತ್ತಾನೆ. ಇತ್ತ ಕೊಲ್ಲೂರು ಪ್ರಾಂತ್ಯದಲ್ಲಿ ಸಿಗುವ ಅಮೂಲ್ಯವಾದ ಕೊಹಿನೂರ್ ವಜ್ರ ಔರಂಗಜೇಬನ ಪಾಲಾಗುತ್ತದೆ. ಎಂಥವರನ್ನಾದರೂ ಯಾಮಾರಿಸುವಂಥ ಚಾಣಾಕ್ಷತೆಯುಳ್ಳ ವೀರಮಲ್ಲು(ಪವನ್ ಕಲ್ಯಾಣ). ಸಿರಿವಂತರ ಬಳಿ ಚಿನ್ನಾಭರಣ ಕದ್ದುತಂದು, ಅದನ್ನು ಬಡ ಬಗ್ಗರಿಗೆ ಹಂಚುತ್ತಾನೆ. ವೀರಮಲ್ಲುವಿನ ಶಕ್ತಿ ಸಾಮರ್ಥ್ಯ ಅರಿತ ಗೋಲ್ಕೊಂಡ ದೊರೆ ಕುತುಬ್ ಷಾ(ದಲಿಪ್ ತಾಹಿಲ್) ಆತನನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡು ಒಂದು ಗುರುತರ ಜವಾಬ್ದಾರಿ ಒಪ್ಪಿಸುತ್ತಾನೆ.

ಔರಂಗಜೇಬನ ಬಳಿಯಿರುವ ಅಮೂಲ್ಯವಾದ ಕೊಹಿನೂರ್ ವಜ್ರವನ್ನು ತಂದು ಕೊಡಬೇಕೆಂದು ಹೇಳುತ್ತಾನೆ. ಜತೆಗೆ ಆತನ ವಶದಲ್ಲಿದ್ದ ಸುಂದರಿ ಪಂಚಮಿ(ನಿಧಿ ಅಗರ್‌ವಾಲ್)ಯನ್ನು ಪ್ರೀತಿಸುವ ವೀರಮಲ್ಲು ಆಕೆಯನ್ನು ಅಲ್ಲಿಂದ ಪಾರು ಮಾಡುವ ಭರವಸೆ ನೀಡುತ್ತಾನೆ.
ವಜ್ರ ತಂದುಕೊಡುವ ಕೆಲಸವನ್ನು ವೀರಮಲ್ಲು ಏಕೆ ಒಪ್ಪಿಕೊಳ್ಳುತ್ತಾನೆ, ಅದಕ್ಕಾಗಿ ಆತ ಹಾಕುವ ಷರತ್ತು ಏನು? ಕೊಹಿನೂರ್ ವಜ್ರಕ್ಕಾಗಿ ಹೈದರಾಬಾದಿನಿಂದ ದೆಹಲಿಗೆ ಹೊರಡುವ ಆತ ತನ್ನ ಪ್ರಯತ್ನದಲ್ಲಿ ಯಶಸ್ವಿ ಆಗುತ್ತಾನಾ? ಕುತುಬ್ ಷಾನ ವಶದಲ್ಲಿದ್ದ ಪಂಚಮಿ ಯಾರು? ಇದೆಲ್ಲಕ್ಕೂ ಉತ್ತರ ಚಿತ್ರದಲ್ಲಿದೆ, ಮೊಘಲರ ಆಳ್ವಿಕೆಯ ಸಮಯದಲ್ಲಿ ನಡೆಯುವ ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕರು ಅಷ್ಟೇ ಪರಿಣಾಮಕಾರಿಯಾಗಿ ತೆರೆಮೇಲೆ ತಂದಿದ್ದಾರೆ.

ಕಮರ್ಷಿಯಲ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದ ಪವನ್ ಇಲ್ಲಿ ಮೊದಲಬಾರಿಗೆ ಐತಿಹಾಸಿಕ ಹೋರಾಟಗಾರನಾಗಿ ಮಿಂಚಿದ್ದಾರೆ. ರಾಜಕೀಯ ಸೇರಿದ ನಂತರ ಪವನ್ ಕಲ್ಯಾಣ್ ಚಿತ್ರೀಕರಣದಲ್ಲಿ ಭಾಗಿಯಾಗದೇ ಇದ್ದಿದ್ದು, ಬಿಡುಗಡೆ ತಡವಾಗಲು ಕಾರಣ. ಎಂ.ಎಂ.ಕೀರವಾಣಿ ಅವರ ಸಂಗೀತವೇ ಚಿತ್ರದ ಹೈಲೈಟ್ ಎಂದರೆ ತಪ್ಪಾಗಲಾರದು.

ಸೆಕೆಂಡ್ ಹಾಫ್‌ನ ಆಕ್ಷನ್ ಸೀನ್ ಗಳಲ್ಲಿ ಹೆಚ್ಚು ಗ್ರಾಫಿಕ್ಸ್ ಬಳಸಲಾಗಿದೆ, ಫಸ್ಟ್ ಹಾಫ್ ನೋಡಿದಾಗ ಕುತೂಹಲ ಹೆಚ್ಚಾದರೆ, ಸೆಕೆಂಡ್ ಹಾಫ್ ನಲ್ಲಿ ಅದನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡಿಲ್ಲ. ನಿರ್ದೇಶಕ ಕ್ರಿಶ್ ಅರ್ಧದಲ್ಲೇ ಹೊರನಡೆದ ನಂತರ ಜ್ಯೋತಿಕೃಷ್ಣ ಅವರು ಈ ಚಿತ್ರವನ್ನು ಪೂರ್ತಿಗೊಳಿಸಿದ್ದರು.

ನಾಯಕ ಪವನ್‌ ಕಲ್ಯಾಣ್ ನಟನೆಯ ವಿಚಾರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರು ತೆರೆಮೇಲೆ ಬಂದಾಗಲೆಲ್ಲ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಪಂಚಮಿ ಪಾತ್ರಧಾರಿ ನಿಧಿ ಅಗರವಾಲ್‌ಗೆ ಹೆಚ್ಚಿನ ಅವಕಾಶ ಇಲ್ಲ.

ಪವನ್ ಬಿಟ್ಟರೆ ಚಿತ್ರದಲ್ಲಿರುವ ಮತ್ತೊಬ್ಬ ಸ್ಟಾರ್ ಅಂದರೆ ಬಾಡಿ ಡಿಯೋಲ್. ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ, ಔರಂಗಜೇಬ್ ಆಗಿ ಸನ್ನಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಸಚಿನ್ ಖಡೇಕರ್, ರಘುಬಾಬು, ಸತ್ಯರಾಜ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಕೀರವಾಣಿ ಅವರ ಸಂಗೀತ ಚಿತ್ರದ ಹೈಲೈಟ್. ಇನ್ನು ಸಾಯಿಮಾಧವ ಅವರ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆ. ಜ್ಞಾನಶೇಖರ್ ಹಾಗೂ ಮನೋಜ್ ಪರಮಹಂಸ ಅವರ ಕ್ಯಾಮೆರಾ ವರ್ಕ್ ಒಳ್ಳೆಯ ಅನುಭವ ನೀಡುತ್ತದೆ. ಒಟ್ಟಾರೆ ಪವನ್ ಕಲ್ಯಾಣ್ ಅಭಿಮಾನಿಗಳಿಗಂತೂ ‘ಹರಿಹರ ವೀರಮಲ್ಲು’ ದೊಡ್ಡ ಹಬ್ಬ ಎನ್ನಬಹುದು.

Leave a Reply

Your email address will not be published. Required fields are marked *