Popular Posts

ಕರಾವಳಿ ತುಳುನಾಡ ಸಂಸ್ಕೃತಿಗೆ ಪ್ರತಿಷ್ಠೆಯ ಛಾಯೆ..

ತುಳುನಾಡು ಜನರ ಸಂಸ್ಕೃತಿಯ ಪ್ರತೀಕ ಎನ್ನಲಾದ ಕಂಬಳಕ್ಕೆ ಎಂಟುನೂರು ವರ್ಷಗಳ ಸಮೃದ್ಧ ಇತಿಹಾಸವಿದೆ. ಕಂಬಳ ಬರೀ ಕ್ರೀಡೆಯಲ್ಲ, ಅದು ದಕ್ಷಿಣ ಕನ್ನಡ ಜಿಲ್ಲೆಯ ಜನರ ಧಾರ್ಮಿಕ ಭಾವನೆ. ಇಂಥಾ ಜನಪ್ರಿಯ ಕಂಬಳ ಕ್ರೀಡೆಯ ಸುತ್ತ ನಡೆಯುವ ರಾಜಕೀಯ, ಪ್ರತಿಷ್ಠೆಯ ಕುರ್ಚಿಗಾಗಿ ನಡೆಯುವ ಸಂಘರ್ಷ ಇದೆಲ್ಲವನ್ನೂ ನಿರ್ದೇಶಕ ಗುರುದತ್ ಗಾಣಿಗ ಅವರು ಕರಾವಳಿ ಎಂಬ ಸುಂದರ ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ. ಕರಾವಳಿ ಜನರ ಸಂಸ್ಕೃತಿಯೊಂದಿಗೆ ಕಂಬಳ ಕ್ರೀಡೆಯೂ ಬೆರೆತುಹೋಗಿದೆ. ಕೆಲವರಿಗೆ ಇದು ಪ್ರತಿಷ್ಠೆಯ ಸಂಕೇತ, ಇನ್ನೂ ಕೆಲವರಿಗೆ ಇದು ಆಸಕ್ತಿಕರ ಆಟ, ಪ್ರತಿಷ್ಠೆ ಹಾಗೂ ಆಸಕ್ತಿಯಿರುವವರ ನಡುವೆ ಘರ್ಷಣೆ ನಡೆದಾಗ ಏನೆಲ್ಲ ಅನಾಹುತಗಳು ನಡೆಯಬಹುದು ಎಂಬುದನ್ನು ನಿರ್ದೇಶಕರ ಕಲ್ಪನೆಯಲ್ಲಿ ತೋರಿಸಲಾಗಿರುವ ಚಿತ್ರವೇ ಕರಾವಳಿ.

ದಕ್ಷಿಣ ಕನ್ನಡದ ಸುತ್ತಮುತ್ತಲಿನ ಕರಾವಳಿತೀರ. ಬ್ರಹ್ಮಾವರ ಎಂಬಲ್ಲಿ ನಡೆಯುವ ಕಂಬಳವನ್ನು ಪ್ರತಿಷ್ಠೆಯ ಪ್ರತೀಕವಾಗಿ ನೋಡುವ ಆದಿಶೇಷ (ರಮೇಶ್ ಇಂದಿರ). ಕಂಬಳದ ಕೋಣಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಸ್ನೇಹಿತರಾದ ಮಹಾಬಲ (ಮಿತ್ರ) ಹಾಗೂ ಮಹಾವೀರ (ರಾಜ್ ಬಿ. ಶೆಟ್ಟಿ). 30 ವರ್ಷಗಳ ಹಿಂದೆ ನಡೆದ ದುರ್ಘಟನೆಯಿಂದ ಮಗಳು, ಅಳಿಯನನ್ನು ಕಳೆದುಕೊಂಡ ದುಃಖದಲ್ಲಿ ಮಗಳು ಅಳಿಯನ ಜತೆ ಈ ಊರಿನ ಸಂಬಂಧ ಮುಗೀತು. ಇದರ ಸಹವಾಸವೇ ಬೇಡವೆಂದು ಮೊಮ್ಮಗನೊಂದಿಗೆ ದೂರದ ಸುಬ್ರಮಣ್ಯಕ್ಕೆ ಹೋಗಿ ನೆಲೆಸಿರೋ ವೃದ್ದ ದಂಪತಿ ಹಾಗೂ ಮೊಮ್ಮಗ ಧನಂಜಯ್ (ಪ್ರಜ್ವಲ್) ಇದಿಷ್ಟು ಪ್ರಮುಖ ಪಾತ್ರಗಳ ಸುತ್ತ ಕರಾವಳಿಯ ಕಥೆ ಸಾಗುತ್ತದೆ. ಈ ಎಲ್ಲ ಪಾತ್ರಗಳ ನಡುವೆ ಒಂದು ಸಂಬಂಧವಿದೆ. ಇದರ ಜೊತೆ ದ್ವೇಷ, ಅಸೂಯೆ, ಕುರ್ಚಿಗಾಗಿ ನಡೆಯುವ ಸಂಘರ್ಷವೂ ಇದೆ.

ನಿರ್ದೇಶಕ ಗುರುದತ್ ಗಾಣಿಗ ಸಿನಿಮಾದುದ್ದಕ್ಕೂ ಕೋಣ ಹಾಗೂ ಕಂಬಳದ ಘಮಲು ಇರುವಂತೆ ನೋಡಿಕೊಂಡಿದ್ದಾರೆ. ಇಡೀ ಚಿತ್ರವನ್ನು ದಕ್ಷಿಣ ಕನ್ನಡದ ಸೊಗಡಲ್ಲೇ ಕಟ್ಟಿಕೊಡುವ ಪ್ರಯತ್ನ ಸೊಗಸಾಗಿದೆ. ದೃಶ್ಯಗಳನ್ನು ಅಚ್ಚುಕಟ್ಟಾಗಿ ಎಡಿಡ್ ಮಾಡಿರುವುದರಿಂದ ಚಿತ್ರ ಎಲ್ಲಿಯೂ ಬೋರ್ ಅನಿಸಲ್ಲ. ನಿರ್ದೇಶಕರ ಕಲ್ಪನೆಯ ಕಥೆಗೆ ಅಭಿಮನ್ಯು ಸದಾನಂದನ್ ಅವರ ಕ್ಯಾಮೆರಾವರ್ಕ್, ಸಚಿನ್ ಬಸ್ರೂರು ಅವರ ಹಿನ್ನೆಲೆ ಸಂಗೀತ ಮೆರಗು ತಂದುಕೊಟ್ಟಿದೆ.

ಚಿತ್ರದಲ್ಲಿ ಪ್ರಜ್ವಲ್, ರಾಜ್ ಬಿ.ಶೆಟ್ಟಿ ಇಬ್ಬರೊಳಗೆ ಯಾರು ಹೀರೋ ಎಂದು ಕೇಳಿದರೆ ತಕ್ಷಣ ಸಿಗೋ ಉತ್ತರ ಮಹಾಬಲನ ಪಾತ್ರಧಾರಿ ಮಿತ್ರ. ತಂದೆ ಹಾಗೂ ಮಗ ಎರಡೂ ಪಾತ್ರಗಳೊಂದಿಗೆ ಮಿತ್ರ ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ, ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ. ಕೋಣಗಳ ಮೇಲೆ ಅವರಿಟ್ಟಿರೋ ಪ್ರೀತಿಯನ್ನು ಕಂಡ ಪ್ರೇಕ್ಷಕನ ಮನ ತುಂಬಿ ಬರುತ್ತದೆ. ಅವರು ಎದುರಿಸೋ ಅಸಹಾಯಕ ಪರಿಸ್ಥಿತಿಗಳು ನೋಡುಗರ ಮನಸನ್ನು ಕದಡುತ್ತದೆ. ಅವರು ತಮ್ಮ ಪಾತ್ರವನ್ನು ಜೀವಿಸಿದ್ದಾರೆ.

ನಾಯಕ ಪ್ರಜ್ವಲ್ ತಮ್ಮ ಪಾತ್ರಕ್ಕೆ ಇನ್ನಷ್ಟು ತಯಾರಿ ಮಾಡಿಕೊಳ್ಳಬೇಕಿತ್ತು. ಚಿತ್ರದಲ್ಲಿ ಅವರ ವಾಯ್ಸ್ ಇಲ್ಲದೆ ಪಾತ್ರ ಮತ್ತಷ್ಟು ಸಾರ ಕಳೆದುಕೊಂಡಿದೆ. ಅವರಿಗೆ ಸಂಭಾಣೆಯೂ ಕಡಿಮೆ ಇರುವುದರಿಂದ ಅದು ಬ್ಯಾಲೆನ್ಸ್ ಆಗಿದೆ. ಎರಡನೇ ಭಾಗದಲ್ಲಿ ಅವರಿಗಿರೋದು ಒಂದೇ ಡೈಲಾಗ್. ನಿರ್ದೇಶಕರು ಅವರ ಪಾತ್ರವನ್ನು ಇನ್ನೂ ಬಳಸಿಕೊಳ್ಳ ಬಹುದಿತ್ತು. ತಾತನಾಗಿ ಸಿದ್ಲಿಂಗು ಶ್ರೀಧರ್, ಅಜ್ಜಿಯಾಗಿ ವಿದ್ಯಾಮೂರ್ತಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕರಾವಳಿ ಕಥೆಯ ಜೀವಾಳವೇ ಕಂಬಳ. ರಾಜ್ ಬಿ.ಶೆಟ್ಟಿ ಅವರದು ಅತಿಥಿ ಪಾತ್ರವಾದರೂ, ಇಡೀ ಕಥೆಯ ಜೀವಾಳವಾಗಿ ನಿಲ್ಲುತ್ತದೆ. ಅವರು ಹೆಚ್ಚು ದೃಶ್ಯಗಳಲ್ಲಿ ಕಾಣಿಸಿಕೊಳ್ಳದಿದ್ದರೂ ನಿರ್ದೇಶಕರು ಅವರ ಪಾತ್ರದ ಹೆಸರನ್ನು ಆಗಾಗ ಧ್ವನಿಸುತ್ತ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಅಭಿನಯ ಉತ್ತಮವಾಗಿದೆ. ಅವರನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು. ಮುದ್ದಾದ ನಾಯಕಿ ಸಂಪದಾ ಅವರ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ನಟ ಗೋವಿಂದೇಗೌಡ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಸಚಿನ್ ಬಸ್ರೂರು ಅವರ ಹಿನ್ನೆಲೆ ಸಂಗೀತ ಇಡೀ ಚಿತ್ರದ ಹೈಲೈಟ್. “ಕಡಲಿಂದ ನಾಡು, ಕಡಲಿಂದ ಕಾಡು” ಹಾಗೂ “ಮುದ್ದು ಗುಮ್ಮ ನೀನೇನೇ” ಸೇರಿದಂತೆ ಎರಡು ಹಾಡುಗಳು ಸದಾ ನೆನಪಲ್ಲುಳಿಯುತ್ತವೆ.

Leave a Reply

Your email address will not be published. Required fields are marked *