Popular Posts

‘ಕಾಮನ್ ಮ್ಯಾನ್’ ಸಿಎಂ ಆದ ಕಥೆ ಹಾಡುಗಳನ್ನು ಬಿಡುಗಡೆ ಮಾಡಿದ ಸಿನಿತಾರೆಯರು

  • ಕಾಮನ್ ಮ್ಯಾನ್ ಚಿತ್ರದ ಹಾಡುಗಳಿಗೆ ವಿನೋದ್ ಪ್ರಭಾಕರ್, ಉಮಾಶ್ರೀ, ಪ್ರಿಯಾಂಕ ಉಪೇಂದ್ರ, ರಮೇಶ್ ಭಟ್ ಚಾಲನೆ

ಒಬ್ಬ ಲಾಯರ್ ರಾಜ್ಯದ ಸಿಎಂ ಆಗಿ ಹೇಗೆ ಆಡಳಿತ ನಡೆಸುತ್ತಾನೆ, ಆತ ಎದುರಿಸುವ ಸವಾಲುಗಳೇನು ಎಂಬುದನ್ನು ಹೇಳುವ ಕಾಮನ್ ಮ್ಯಾನ್ ಇದೇ ತಿಂಗಳ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸಮಾಜಸೇವಕ ಎನ್. ನರಸಿಂಹಮೂರ್ತಿ ಈ ಚಿತ್ರದ ಕಥೆ ಬರೆದು ಸುರಭಿ ಫಿಲಂಸ್ ಅಡಿ‌ ನಿರ್ಮಿಸಿದ್ದಾರೆ‌. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಈಚೆಗೆ ನಡೆದ ಸಮಾರಂಭದಲ್ಲಿ ಚಿತ್ರದ ಹಾಡುಗಳನ್ನು ಚಿತ್ರರಂಗದ ನಾಲ್ವರು ಸೆಲಬ್ರಟಿಗಳು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಹಿರಿಯ ನಟಿ, ವಿ.ಪ. ಸದಸ್ಯೆ ಉಮಾಶ್ರೀ, ನಟ ವಿನೋದ್ ಪ್ರಭಾಕರ್, ಹಿರಿಯನಟ ರಮೇಶ್ ಭಟ್, ನಟಿ ಪ್ರಿಯಾಂಕ ಉಪೇಂದ್ರ ಅವರುಗಳು 4 ಹಾಡುಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ನರಸಿಂಹಮೂರ್ತಿ, ಪ್ರತಿ ಮನುಷ್ಯನಲ್ಲೂ ಒಂದು ಆಸೆ ಅನ್ನೋದಿರುತ್ತೆ. ಅದೇರೀತಿ ಒಬ್ಬ ಕಾಮನ್ ಮ್ಯಾನ್ ಸಿಎಂ ಆಗಿ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು.

ನಟಿ ಉಮಾಶ್ರೀ ಮಾತನಾಡಿ ಈ ಚಿತ್ರದ ಹೆಸರು ಕಾಮನ್ ಮ್ಯಾನ್, ಇಂಗ್ಲೀಷ್ ಹೆಸರು ಏಕೆ ಅಂತ ಕೇಳಬಹುದು, ಇವತ್ತು ನಮ್ಮ ಕನ್ನಡ ಚಿತ್ರಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿ ಹೆಸರು ಮಾಡುತ್ತಿರುವಾಗ ಇಂಥ ಕಾಮನ್ ಟೈಟಲ್ ಇಡಲೇಬೇಕಾಗುತ್ತೆ. ಸಾಯಿಪ್ರಕಾಶ್ ಅವರು ನನ್ನ ಗುರುಗಳ ಥರ,
ಈ ಕಾರ್ಯಕ್ರಮಕ್ಕೆ ಅವರು ಕರೆದಾಗ ಇಲ್ಲ ಎನ್ನಲಾಗಲಿಲ್ಲ. ಒಂದು ಕಾಲದಲ್ಲಿ ನನ್ನ ಎನ್.ಎಸ್.ರಾವ್ ಕಾಂಬಿನೇಶನ್ ತುಂಬಾ ಜನಪ್ರಿಯವಾಗಿತ್ತು. ಪ್ರೇಕ್ಷಕರು ನಮ್ಮಿಬ್ಬರನ್ನೂ ನಿಜವಾದ ಗಂಡ, ಹೆಂಡತಿ ಅಂದುಕೊಂಡಿದ್ದರು‌. ಅವರು ತೀರಿಕೊಂಡಾಗ ಕೆಲವರು ಇನ್ನು ಉಮಾಶ್ರೀ ಕಥೆ ಮುಗಿದೇ ಹೋಯ್ತು ಅಂತ ಮಾತಾಡಿದ್ದರು. ಅದೇವೇಳೆ ನಾನು ವಿಧವೆಯಾಗಿ ನಟಿಸಿದ್ದ ಚಿತ್ರವೂ ರಿಲೀಸಾಯ್ತು. ಅಂಥಾ ಸಮಯದಲ್ಲಿ ಸಾಯಿಪ್ರಕಾಶ್ ಅವರು ನನಗೆ ಕರೆದು ಅವಕಾಶ ಕೊಟ್ಟರು ಎಂದು ನೆನಪಿಸಿಕೊಂಡರು.

ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ ರಮೇಶ್ ಭಟ್ ಮಾತನಾಡಿ ನನಗೆ ಒಳ್ಳೆ ಸಾಂಗನ್ನೇ ಕೊಟ್ಟಿದ್ದಾರೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ‌. ಅದನ್ನು ಮಟ್ಟ ಹಾಕುವದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಅವಕಾಶ ಕೊಟ್ಟ ಗುರುಗಳಿಗೆ ಧನ್ಯವಾದ ಎಂದರು. ನಟ ವಿನೋದ್ ಪ್ರಭಾಕರ್ ಮಾತನಾಡಿ ನನ್ನ ತಂದೆಯ ಜತೆ ಕೆಲಸ ಮಾಡಿದ ಎಲ್ಲರನ್ನೂ ಈ ವೇದಿಕೆಯಲ್ಲಿ ನೋಡಿ ಸಂತೋಷವಾಯಿತು ಎಂದರು. ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ ಎಂದರು. ಗಾಯಕಿ ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ರಂಥ ಗಾಯಕರು ಈ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಸಾಯಿಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರ ಇದಾಗಿದ್ದು, ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರ ಮೂಲಕ ಹೇಳಿದ್ದಾರ.

ಗೌರೀಶಂಕರ್ ಚಿತ್ರದ ನಾಯಕನಾಗಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಅಶೋಕ್ ಅವರು ರಾಜ್ಯಪಾಲರ ಪಾತ್ರ ಮಾಡಿದ್ದಾರೆ.
ವಿನಯ ಚಂದ್ರ ಅವರ ಸಂಗೀತ, ಜೆ‌.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ.
ಕಾಮನ್ ಮ್ಯಾನ್ ಚಿತ್ರದ ಉಳಿದ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಹಾಗೂ ಇತರರು ನಟಿಸಿದ್ದಾರೆ.

Leave a Reply

Your email address will not be published. Required fields are marked *