Popular Posts

ಕಿರುನಗೆ ಟೈಟಲ್ ಟೀಸರ್ ಪ್ರೀತಿ ತ್ಯಾಗದ ಸುತ್ತ ನಡೆವ ಕಥೆ

ಹರ್ಷಿಣಿ ಸಿನಿಮಾಸ್ ಲಾಂಛನದಲ್ಲಿ ಲತಾಶ್ರೀ ಡಿ.ಸಿ. ಅವರು ನಿರ್ಮಿಸಿರುವ ಹಾಗೂ ಅಶೋಕ್ ಕಡಬ ಅವರ ನಿರ್ದೇಶನದ ಕಿರುನಗೆ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಡಾ||ರಾಜಕುಮಾರ್ ಪುತ್ರಿ ಲಕ್ಷ್ಮಿ ಹಾಗೂ ಅಳಿಯ ಎಸ್.ಏ. ಗೋವಿಂದರಾಜು ಅವರು ಶೀರ್ಷಿಕೆ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ ವಿಶ್ವನಾಥ್, ನಟ ಷಣ್ಮುಖ ಹಾಗೂ ಕಾಂಗ್ರೆಸ್ ಮುಖಂಡ ಅಶೋಕ್ ಭೀಮಾನಾಯಕ್ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಅಶೋಕ್ ಕಡಬ ಮಾತನಾಡುತ್ತ ಕಿರುನಗೆ ನನ್ನ ನಿರ್ದೇಶನದ ಆರನೇ ಚಿತ್ರ. ನಿರ್ಮಾಪಕಿ ಲತಾಶ್ರೀ ಅವರೇ ಚಿತ್ರದ ಕಥೆ ಬರೆದಿದ್ದಾರೆ. ಇದೊಂದು ಲವ್ ಜಾನರ್ ಚಿತ್ರ. ಆದರೆ ತಂದೆ – ತಾಯಿಗಾಗಿ ಮಕ್ಕಳೇ ಪ್ರೀತಿಯನ್ನು ತ್ಯಾಗ ಮಾಡುವ ಕಥಾಹಂದರ ಈ ಚಿತ್ರದಲ್ಲಿದೆ, ಇದು ಈಗಿನ ಜನರೇಶನ್‌ ಕಥೆ, ತಾಯಿಗೋಸ್ಕರ ಪ್ರೀತಿ ತ್ಯಾಗ ಮಾಡುವ ಮಗಳು ಮುಂದೆ ಪ್ರೀತಿಯ ಬಲೆಯಲ್ಲಿ ಬಿದ್ದು ಹೇಗೆ ಪರಿತಪಿಸುತ್ತಾಳೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಚಿತ್ರದ ಪ್ರಥಮಾರ್ಧ ಮದುವೆ ಮನೆಯಲ್ಲೇ ನಡೆಯುತ್ತದೆ. ಬೆಂಗಳೂರು, ಉಡುಪಿ, ವಿಜಯಪುರ, ಚಿಕ್ಕಮಗಳೂರು, ಮುಂಬೈ ಹಾಗೂ ಗೋವಾದಲ್ಲಿ ೬೦ ದಿನಗಳವರೆಗೆ ಚಿತ್ರೀಕರಣ ನಡೆಸಿದ್ದೇವೆ, ಈಗಾಗಲೇ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಎಂದು ಹೇಳಿದರು.

ನಿರ್ಮಾಪಕಿ ಲತಾಶ್ರೀ ಡಿ.ಸಿ. ಮಾತನಾಡುತ್ತ ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ ಹಾಗೂ ನನ್ನ ತಂದೆ ಮಾಜಿ ಶಾಸಕ ದೇವಾನಂದ್ ಚವ್ಹಾಣ್ ಅವರ ಸಹಕಾರದಿಂದ ಈ ಚಿತ್ರ ನಿರ್ಮಾಣವಾಗಿದೆ. ಇದೊಂದು ಲವ್ ಜಾನರ್ ಚಿತ್ರವಾದರೂ, ನಮ್ಮ ಚಿತ್ರದಲ್ಲಿ ಪ್ರೀತಿಯನ್ನು ತೋರಿಸಿರುವ ರೀತಿಯೇ ಬೇರೆ. ಪ್ರೀತಿ, ಪ್ರೇಮದ ಕಥೆಯನ್ನು ಹೆಣ್ಣುಮಗಳೊಬ್ಬಳ ದೃಷ್ಟಿಕೋನದಲ್ಲಿ ಹೇಳಿದ್ದೇವೆ, ಗರ್ಭಿಣಿ ಮಹಿಳೆಯೊಬ್ಬಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಹಾಗಂತ ಇದು ಮಹಿಳಾ
ಪ್ರಧಾನ ಚಿತ್ರವಲ್ಲ. ಎಲ್ಲ ಮನರಂಜನಾತ್ಮಕ ಅಂಶಗಳಿರುವ ಚಿತ್ರ. ಆಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

ನಾಯಕ ವಿಜಯ್‌ರಾಜ್ ಮಾತನಾಡುತ್ತ ಇದೊಂದು ಫೀಲ್ ಗುಡ್ ಮೂವೀ, ಕೆಲವೊಂದು ನಿರ್ಧಾರಗಳನ್ನು ನಿರ್ದಿಷ್ಟ ಸಮಯದಲ್ಲೇ ತೆಗೆದುಕೊಳ್ಳಬೇಕಾಗುತ್ತದೆ ಅನ್ನೋದನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ ನನಗೆ ನಾಯಕನಾಗಿ ಇದು ಮೊದಲ ಚಿತ್ರ ಎಂದು ಹೇಳಿದರು. ತಮ್ಮ ಪಾತ್ರದ ಬಗ್ಗೆ ನಾಯಕಿ ಖುಷ್ಬು ಮಾತನಾಡಿ ನಾನು ಹೊಸಬಳಾದರೂ ಎಲ್ಲರೂ ತುಂಬಾ ಸಪೋರ್ಟ್ ನೀಡಿದರು ಎಂದು ಹೇಳಿದರು, ನಾಯಕಿಯ ಸಹೋದರಿಯಾಗಿ ನಟಿಸಿರುವ ಶ್ರೀಶಾ ಮೊದಲಬಾರಿಗೆ ನಟಿಸಿದ ಅನುಭವವನ್ನು ಹೇಳಿಕೊಂಡರು,

ತಾಯಿ ಪಾತ್ರ ಮಾಡಿರುವ ಹಿರಿಯ ನಟಿ ಸಂಗೀತಾ ಮಾತನಾಡಿ ನಿರ್ದೇಶಕರ ಜತೆ ಇದು ಮೂರನೇ ಚಿತ್ರ ಎಂದರು, ಸಂಗೀತ ನಿರ್ದೇಶಕ ಸುಕೃತ್ ಮಾತನಾಡುತ್ತ ಚಿತ್ರದಲ್ಲಿ ೫ ಹಾಡುಗಳಿವೆ, ಸ್ನೇಹಿತ ನಾಗಾರ್ಜುನ ಶರ್ಮಾ ಅವರೇ ಎಲ್ಲ ಹಾಡುಗಳನ್ನು ಬರೆದಿದ್ದಾರೆ ಎಂದರು. ಛಾಯಾಗ್ರಾಹಕ ಸಿದ್ದು ಕಂಚನಹಳ್ಳಿ, ಸಾಹಿತಿ ನಾಗಾರ್ಜುನ ಶರ್ಮ ಹಾಗೂ ಕಲಾವಿದರಾದ ಮೂಗು ಸುರೇಶ್ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು.

Leave a Reply

Your email address will not be published. Required fields are marked *