Popular Posts

ಇಂದಿನಿಂದ ಮ್ಯಾಂಗೋ ಪಚ್ಚ ಮಾಸ್ ಎಂಟ್ರಿ!

ಕೆ.ಆರ್.ಜಿ. ಸ್ಟುಡಿಯೋಸ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಜಂಟಿಯಾಗಿ ನಿರ್ಮಿಸಿರುವ ‘ಮ್ಯಾಂಗೋ ಪಚ್ಚ’ ಚಿತ್ರ ಈ ಶುಕ್ರವಾರ(ಜೂನ್5) ತೆರೆಗೆ ಬರ್ತಿದೆ. ಸುದೀಪ್ ಅವರ ಅಕ್ಕನ ಮಗ ಸಂಚಿತ್ ನಾಯಕನಾಗಿ ನಟಿಸಿರುವ ಪ್ರಥಮ ಚಿತ್ರ ಇದಾಗಿದ್ದು, ವಿವೇಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ೨೦ ವರ್ಷಗಳ ಹಿಂದೆ ಮೈಸೂರು ಭಾಗದಲ್ಲಿ ನಡೆದ ಕಥೆಯನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಈಗಾಗಲೇ ಚಿತ್ರದ ಟೀಸರ್, ಹಾಡುಗಳು, ಟ್ರೈಲರ್ ರಿಲೀಸಾಗಿ ಎಲ್ಲರ ಗಮನ ಸೆಳೆದಿದೆ.

ಹೊಸ ಪ್ರತಿಭೆ ಸಂಚಿತ್ ಜೊತೆ ಸಾಕಷ್ಟು ಅನುಭವಿ ಕಲಾವಿದರುಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ಹಾಡುಗಳು ಸುಂದರವಾಗಿ ಮೂಡಿಬಂದಿವೆ. ವಿಶೇಷವಾಗಿ ಈ ಚಿತ್ರದ ಅವಧಿ ೯೫ ನಿಮಿಷ ೩೭ ಸೆಕೆಂಡ್ ಮಾತ್ರ.

ಇತ್ತೀಚೆಗೆ ಬರುತ್ತಿರುವ ಬಿಗ್ ಬಜೆಟ್ ಚಿತ್ರಗಳು ೩ ಗಂಟೆಗೂ ಅಧಿಕ ಕಾಲಾವಧಿಯನ್ನು ಒಳಗೊಂಡಿರುತ್ತವೆ. ಹಾಗಿರುವಾಗಿ ಕೇವಲ ೯೫ ನಿಮಿಷ ಅರ್ಥಾತ್
ಒಂದು ಗಂಟೆ ೩೫ ನಿಮಿಷ ಇರುವ ‘ಮ್ಯಾಂಗೋ ಪಚ್ಚ’ ಚಿತ್ರದ ಕಾಲಾವಧಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿದೆ. ಒಂದು ಸಿನಿಮಾ ಎಷ್ಟು ಅವಧಿ ತೆರೆಮೇಲೆ ಬರುತ್ತದೆ ಎನ್ನುವುದು ಮುಖ್ಯ ಅಲ್ಲ, ಆ ಸಿನಿಮಾ ಪ್ರೇಕ್ಷಕರನ್ನು ಎಷ್ಟು ಹೊತ್ತು ರಂಜಿಸಿತು ಅನ್ನೋದಷ್ಟೇ ಮುಖ್ಯ. ಸುಮ್ಮನೆ ಎಳೆದಾಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸೋದಕ್ಕಿಂತ ಇದು ಒಳ್ಳೆಯ ನಿರ್ಧಾರ ಎಂದು ಕೆಲವರು ಹೇಳುತ್ತಿದ್ದಾರೆ. ಹಾಲಿವುಡ್ ಸಿನಿಮಾಗಳ ರೀತಿ ಬಹಳ ಬೇಗ ಕಥೆ ಹೇಳಿ
ಮುಗಿಸುವುದು ಉತ್ತಮ ಎನ್ನೋದೂ ಕೆಲವರ ಅಭಿಪ್ರಾಯ. ಸಾಕಷ್ಟು ಜನ ಚಿತ್ರತಂಡದ ನಿರ್ಣಯವನ್ನು ಸ್ವಾಗತಿಸಿದ್ದಾರೆ.

ಜೂನ್ ೫ರಂದು ಬೆಳಗ್ಗೆ ೮.೧೫ಕ್ಕೆ ಅಭಿಮಾನಿಗಳ ಜೊತೆ ಕಿಚ್ಚ ಸುದೀಪ್ ಅವರು ‘ಮ್ಯಾಂಗೋ ಪಚ್ಚ’ ಚಿತ್ರವನ್ನು ವೀಕ್ಷಿಸಲಿದ್ದಾರೆ. ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರಕ್ಕೆ ಕಿಚ್ಚ ಸುದೀಪ್ ಭೇಟಿ ನೀಡುತ್ತಿದ್ದಾರೆ. ನಟಿ ಕಾಜಲ್ ಕುಂದರ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರಶಾಂತ್ ಹಿರೇಮಠ್, ಜೈ ಗೋಪಿನಾಥ್, ಹರಿಣಿ ಶ್ರೀಕಾಂತ್, ಉಗ್ರಂ ಮಂಜು, ಮಯೂರ್ ಪಟೇಲ್ ಬಣ್ಣ ಹಚ್ಚಿದ್ದಾರೆ.

ಮಧ್ಯಮ ವರ್ಗದ ಯುವಕ ಪ್ರಶಾಂತ್ ಜೀವನದ ಏಳುಬೀಳುನ ಕಥೆ ಈ ಚಿತ್ರದಲ್ಲಿದೆ. ಪ್ರಶಾಂತ್ ಅಲಿಯಾಸ್ ಪಚ್ಚ ಯಾವುದೋ ಪ್ರಕರಣದಲ್ಲಿ ಜೈಲು ಸೇರುವಂತಾಗುತ್ತದೆ. ಅಲ್ಲಿಂದ ಮುಂದೆ ಏನೆಲ್ಲ ಆಗುತ್ತದೆ ಎನ್ನುವುದೇ ಚಿತ್ರದ ಕಥೆ. ‘ಹುಚ್ಚ’ ಚಿತ್ರದ ಮೂಲಕ ಸುದೀಪ್ ಸ್ಟಾರ್ ಪಟ್ಟಕ್ಕೇರಿದ್ದರು. ಆ ಚಿತ್ರದ ಇಂಟ್ರಡಕ್ಷನ್ ಸೀನ್ ನೆನಪಿಸುವಂತೆ ಈ ಚಿತ್ರದಲ್ಲಿ ಸಂಚಿತ್ ಪಾತ್ರವನ್ನು ಪರಿಚಯಿಸಲು ಪ್ರಯತ್ನಿಸಲಾಗಿದೆ. ಒಂದಷ್ಟು ನೈಜ ಘಟನೆಗಳಿಂದ ಪ್ರೇರಣೆಗೊಂಡು ‘ಮ್ಯಾಂಗೋ ಪಚ್ಚ’ ಸಿನಿಮಾ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ಸಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಕಿಚ್ಚ ಕೂಡ ಎಂಟ್ರಿ ಕೊಡ್ತಾರಾ ಎನ್ನುವುದು ಇಂದೇ ಗೊತ್ತಾಗಲಿದೆ.

Leave a Reply

Your email address will not be published. Required fields are marked *