1
1
ಡಾ.ಪುನೀತ್ ರಾಜ್‍ಕುಮಾರ್ ನಮ್ಮನೆಲ್ಲ ಅಗಲಿ ಅ. 29ಕ್ಕೆ ನಾಲ್ಕು ವರ್ಷ ಕಳೆಯುತ್ತಿದೆ. ಈ ಸಂದರ್ಭದಲ್ಲಿ ಪುನೀತ್ ಅವರನ್ನು ಎಐ(ಕೃತಕ ಬುದ್ಧಿಮತ್ತೆ) ಮೂಲಕ ಅಭಿಮಾನಿಗಳಿಗೆ ತೋರಿಸುವ ಸ್ಟಾರ್ ಫ್ಯಾನ್ಡಮ್ ಆ್ಯಪ್ (ಕನ್ನಡದ ಅಪ್ಪು ಪಿಆರ್‌ಕೆ ಮೊಬೈಲ್ ಆ್ಯಪ್) ಅನ್ನು ಖಾಸಗಿ ಹೋಟೆಲ್ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಸ್ಟಾರ್ ಫ್ಯಾನ್ಡಮ್ ಆ್ಯಪ್ ಸಂಸ್ಥೆಯ ಅಧ್ಯಕ್ಷ ಡಾ.ಸಮರ್ಥ ರಾಘವ ನಾಗಭೂಷಣಂ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಮಾತನಾಡುತ್ತ “ಪುನೀತ್ ರಾಜಕುಮಾರ್ ಅವರನ್ನು ರಾಜಕಾರಣಕ್ಕೆ ಸೆಳೆಯಲು ನಾನು ಅನೇಕ ಬಾರಿ ಪ್ರಯುತ್ನಪಟ್ಟೆ, ಆದರೆ ಅವರು ಬರಲಿಲ್ಲ. ಸಹೋದರಿ ಅಶ್ವಿನಿ ಅವರನ್ನೂ ಸಹ ಆಹ್ವಾನಿಸಿದೆ. ಅವರೂ ಸಹ ತಮ್ಮ ಪತಿಯ ಹಾದಿಯಲ್ಲೇ ನಡೆಯುವುದಾಗಿ ಹೇಳಿದರು. ಅವರು ರಾಜಕೀಯಕ್ಕೆ ಬರಲು ತಿರಸ್ಕರಿಸಿದಾಗ, ಸಕ್ರಿಯ ರಾಜಕಾರಣಕ್ಕೆ ಬರುವುದು ಬೇಡ, ಆದರೆ ಮುಖ್ಯವಾಹಿನಿಯಲ್ಲಿರಿ ಎಂದಿದ್ದೆ. ಇವತ್ತು ಅದನ್ನು ಬಹಿರಂಗಗೊಳಿಸಿದ್ದೇನೆ” ಎಂದರು. “ರಾಮಾಯಣ ಮತ್ತು ಮಹಾಭಾರತದಂಥ ಮಹಾಕಾವ್ಯಗಳು ಅನೇಕ ವರ್ಷಗಳಿಂದ ನಮ್ಮ ನಡುವೆ ಉಳಿದುಕೊಂಡಿವೆ. ಅದೇರೀತಿ ಪುನೀತ್ ರಾಜಕುಮಾರ್ ಅವರು ಮಾಡಿರುವ ಕೆಲಸಗಳು ಹೊಸ ತಂತ್ರಜ್ಞಾನದ ಮೂಲಕ ನಮ್ಮ ನಡುವೆ ಜೀವಂತವಾಗಿರುತ್ತವೆ” ಎಂದೂ ಅವರು ತಿಳಿಸಿದರು.

AI ತಂತ್ರಜ್ಞಾನದ ಮೂಲಕ ಭೀಮ, ಅರ್ಜುನ, ರಾಮ ಹೀಗೆ ಅನೇಕ ಪಾತ್ರಗಳನ್ನು ನೈಜತೆಗೆ ಹತ್ತಿರವಾದಂತೆ ಚಿತ್ರಿಸಲಾಗುತ್ತಿದೆ. ಅದೇ ರೀತಿ ಈ ಆ್ಯಪ್ನಲ್ಲಿ ಪುನೀತ್ ಅವರ ಬಾಲ್ಯದ ದಿನ ಸೇರಿದಂತೆ ಇತ್ತೀಚಿನವರೆಗೆ ಪುನೀತ್ ಅವರನ್ನು ಸೃಷ್ಟಿಸಲಾಗಿದೆ. ಪುನೀತ್ ಅವರು ಕೊನೆಯುಸಿರೆಳೆದ ಸಂದರ್ಭದಲ್ಲಿ ಎಷ್ಟೊಂದು ಅಭಿಮಾನಿಗಳು ಅವರಿಗಾಗಿ ಮಿಡಿದರು. ನೂರಾರು ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಅವರ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಕತ್ತಲೆಗೆ ಹೋಗಿರುವ ಅಪ್ಪು, ತಂತ್ರಜ್ಞಾನದ ಮೂಲಕ ಬೆಳಕಿಗೆ ಬಂದಿದ್ದಾರೆ” ಎಂದು ಹೇಳಿದರು.

ನಂತರ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ನಿಮಗೆ ಗೊತ್ತಿರುವಂತೆ ಅಪ್ಪು ಯಾವಾಗಲೂ ಹೊಸತನದ ಹುಡುಕಾಟ ನಡೆಸುತ್ತಿದ್ದರು. ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಸಂಸ್ಥೆ ಶುರುವಾಗಿದ್ದು, ಇಂಡಸ್ಟ್ರಿಗೆ ಏನಾದ್ರೂ ಕೊಡುಗೆ ಕೊಡ್ಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವಲಪ್ ಮಾಡಿ, ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಇದರಲ್ಲಿದ್ದು. ಇದು ಕೇವಲ ನಮ್ಮ ಆ್ಯಪ್ ಅಲ್ಲ, ನಿಮ್ಮ ಆ್ಯಪ್ ಎಂದು ಹೇಳಿದರು.
ಡಾ.ಸಮರ್ಥ ರಾಘವ ನಾಗಭೂಷಣಂ ಮಾತನಾಡಿ, ಇದು ನನ್ನ ಜೀವನದಲ್ಲಿ ವಿಶೇಷ ದಿನ. ಫ್ಯಾನ್ ಡಮ್ ಆ್ಯಪ್ ಮಾಡಬೇಕೆಂಬ ಯೋಚನೆ ಬಂದಾಗ ಮೊದಲು ಹಾಗೂ ಕೊನೆಯ ಹೆಸರು ಅಂದರೆ ಅದು ಡಾ.ಪುನೀತ್ ರಾಜ್ ಕುಮಾರ್ . ಕನ್ನಡದ ಪ್ರತಿ ಹೃದಯವನ್ನವರು ತಟ್ಟಿದ್ದಾರೆ. ಮುಟ್ಟಿದ್ದಾರೆ. ಇವರ ವ್ಯಕ್ತಿತ್ವವನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗುತ್ತೇವೆ ಅನ್ನೋದನ್ನು ನೀವು ಆ್ಯಪ್ ನಲ್ಲಿ ನೋಡಬಹುದು ಎಂದರು.