1
1
Rating 4/5
ಯಾರಿಗೂ ಹೇಳ್ಬೇಡಿ ದಶಕಗಳ ಹಿಂದೆ ಅನಂತನಾಗ್ ಅಭಿನಯದಲ್ಲಿ ತೆರೆಕಂಡ ಯಶಸ್ವೀ ಚಿತ್ರ. ಇದೀಗ ಮತ್ತೊಮ್ಮೆ ಅದೇ ಹೆಸರಿನಲ್ಲಿ ನಿರ್ಮಾಣವಾದ ಚಿತ್ರ ರಿಲೀಸಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ, ನವಿರಾದ ಹಾಸ್ಯಪ್ರಸಂಗಗಳನ್ನು ಒಳಗೊಂಡ ಮನರಂಜನಾತ್ಮಕ ಚಿತ್ರ ಇದಾಗಿದ್ದು ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಮುಖದಲ್ಲಿ ಮಂದಹಾಸ ಹೊತ್ತು ಹೊರಬರುತ್ತಿದ್ದಾರೆ, ಒಂದು ಘಟನೆಯನ್ನು ಮುಚ್ಚಿಡಲು ಹೋಗು ನಾಯಕ ಏನೇನೆಲ್ಲ ಅವಾಂತರ ಮಾಡಿಕೊಳ್ಳುತಗತಾನೆ ಎಂಬುದನ್ನು ಹಾಸ್ಯಮಯವಾಗಿ ನಿರ್ದೇಶಕರು ನಿರೂಪಿಸಿದ್ದಾರೆ.

ಚಿತ್ರದ ಕಥೆ ತುಂಬಾ ಸಿಂಪಲ್, ಆದರೆ ಅದನ್ನು ಕುತೂಹಲಕರವಾಗಿ ತೆಗೆದುಕೊಂಡು ಹೋಗಿರುವ ನಿರ್ದೇಶಕರ ಶೈಲಿ ಅದ್ಭುತ, ನಾಯಕ ಸಂಜಯ್(ಚೇತನ್ ವಿಕ್ಕಿ) ವಾಹಿನಿಯೊಂದರಲ್ಲಿ ನಿರೂಪಕ. ಆತನ ಜೀವದ ಗೆಳೆಯ ಅಪ್ಪಣ್ಣ, ಅವರಿಗೆ ಗೆಳೆಯರ ಬಳಗ. ಈ ಇಬ್ಬರ ನಡುವಿನ ಹಾಸ್ಯ ಪ್ರಹಸನಗಳೇ ಯಾರಿಗೂ ಹೇಳ್ಬೇಡಿ ಚಿತ್ರದ ಮುಖ್ಯ ಕಥಾವಸ್ತು, ಸಂಜಯ್ ಒಬ್ಬ ಡಾಕ್ಟರ್ ನೋಡಿ ಆಕೆಯನ್ನು ಇಷ್ಟಪಟ್ಟಿರುತ್ತಾನೆ, ಆಕೆಯ ಹೆಸರು ಸ್ಟೆಫಿ (ಚೈತ್ರಾ ಜೆ. ಆಚಾರ್), ಒಬ್ಬ ಡಾಕ್ಟರ್ ಆದ ಸ್ಟೆಫಿ ತಾನು ಮದುವೆಯಾಗೋ ಹುಡುಗ ಯಾವುದೇ ದುಶ್ಚಟಗಳನ್ನು ಮೈಗೂಡಿಸಿಕೊಂಡಿರಬಾರದು, ಬೇರೆ ಹೆಣ್ಣಿನ ಸಹವಾಸ ಇಟ್ಟುಕೊಂಡಿರಬಾರದು ಎಂದು ಕನಸು ಕಟ್ಟಿಕೊಂಡಿರುತ್ತಾಳೆ, ಆದರೆ ಸಂಜಯ್ ಇದಕ್ಕೆ ತದ್ವಿರುದ್ದ, ಸ್ಮೋಕಿಂಗ್, ಡ್ರಿಂಕ್ಸ್ ಇದೆಲ್ಲಾ ಆತನ ದಿನಚರಿ, ಯಾವುದೇ ಹುಡುಗಿಯರ ಚಟ ಇಲ್ಲದಿದ್ರೂ ಒಂದು ಪ್ರಕರಣ ಆತನ ಜೀವನದಲ್ಲಿ ದೊಡ್ಡ ಗೇಮನ್ನೇ ಆಡಿಬಿಡುತ್ತದೆ, ಅದೇನೆಂದರೆ ಸಂಜಯ್‌ಗೆ ಮೊದಲಿಂದಲೂ ಆಕ್ಟಿಂಗ್ ಹುಚ್ಚು, ಹೀಗೇ ಒಬ್ಬ ಡೈರೆಕ್ಟರ್ ನಿನಗೆ ಛಾನ್ಸ್ ಕೊಡುತ್ತೇನೆಂದು ಹೇಳಿ ಯುವತಿಯ ಜತೆಗಿರುವ ಹನಿಮೂನ್ ದೃಶ್ಯವನ್ನು ಚಿತ್ರೀಕರಿಸಿರುತ್ತಾನೆ, ನಿದ್ದೆ ಮಾಡುತ್ತಿರುವ ಗಂಡನನ್ನು ಪ್ರಚೋದಿಸುವ ದೃಶ್ಯವದು. ಆದರೆ ಆಚಿತ್ರ ಆರಂಭದಲ್ಲೇ ನಿಂತುಹೋಗುತ್ತದೆ, ವಿಚಿತ್ರ ಎಂದರೆ ಅದೇ ಸೀನನ್ನು ಯಾರೋ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿಬಿಡುತ್ತಾರೆ, ಮದುವೆಯಾದ ಮೇಲೆ ಎಲ್ಲ ಚಟಗಳನ್ನು ಬಿಟ್ಟುಬಿಡುತ್ತೇನೆಂದು ಸ್ಟೆಫಿಗೆ ಭಾಷೆ ಕೊಟ್ಟಿದ್ದ ಸಂಜಯ್‌ಗೆ ಈ ಪ್ರಕರಣ ಎಲ್ಲಿ ತನ್ನ ಮದುವೆಯನ್ನೇ ಮುರಿದುಹಾಕುತ್ತೋ ಅನ್ನೋ ಭಯದಿಂದ ಆ ವಿಡಿಯೋ ಡಿಲೀಟ್ ಮಾಡಿಸಲು ಹರಸಾಹಸ ಮಾಡುತ್ತಾನೆ, ಕೊನೆಗೂ ಆ ವಿಡಿಯೋ ಡಿಲೀಟ್ ಆಯಿತಾ, ಇಲ್ವಾ ಅನ್ನೋದನ್ನು ನೀವು ಚಿತ್ರಮಂದಿರದಲ್ಲೇ ನೋಡಿ. ಇದರಜತೆ ಚಿತ್ರದ ಕ್ಲೆಮ್ಯಾಕ್ಸ್ನಲ್ಲಿ ದೊಡ್ಡ ಟ್ವಿಸ್ಟ್ ಕೂಡ ಇದೆ, ಅದನ್ನು ನೋಡಿ ನೀವು ಹೊಟ್ಟೆ ಹುಣ್ಣಾಗುವಂತೆ ನಗುವುದು ಖಂಡಿತ, ಸಂಜಯ್ ಪಾತ್ರದಲ್ಲಿ ಚೇತನ್ ವಿಕ್ಕಿ ಉತ್ತಮ ಅಭಿನಯ ನೀಡಿದ್ದಾರೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಅವರೇ ಚಿತ್ರದ ಕ್ಲೆಮ್ಯಾಕ್ಸ್ನಲ್ಲಿ ಹೀರೋ ಆಗಿಬಿಡುತ್ತಾರೆ, ಅದು ಹೇಗೆಂದು ತೆರೆಮೇಲೆ ನೋಡಿದರೇ ಚೆನ್ನ, ಡಾಕ್ಟರ್ ಸ್ಟೆಫಿ ಪಾತ್ರದಲ್ಲಿ ಚೈತ್ರಾ ಆಚಾರ್ ಗಮನ ಸೆಳೆಯುತ್ತಾರೆ, ಅಶ್ವಿನಿ ಪೊಲೆಪಲ್ಲಿ ಅಪ್ಪಣ್ಣನ ಜೋಡಿ, ಮತ್ತೊಬ್ಬ ನಾಯಕಿಯಾಗಿದ್ದಾರೆ, ಶಶಾಂಕ್ ಶೇಷಗಿರಿ ಹಾಗೂ ಉದಿತ್ ಹರಿತಾಸ್ ಅವರ ಸಂಗೀತದ ಮೂರು ಹಾಡುಗಳು ಗುನುಗುವಂತಿವೆ, ಸುನಿಲ್ ಪ್ರೊಡಕ್ಷನ್ಸ್ ಅಡಿ ಸುನಿಲ್ ಕುಮಾರ್ ಹಾಗೂ ಹರೀಶ್ ಅಮ್ಮಿನೇನಿ ಈ ಚಿತ್ರವನ್ನು ನಿರ್ಮಿಸಿದ್ದಾರೆ, ಡೇವಿಡ್ ಆನಂದರಾಜ್ ಅವರ ಕ್ಯಾಮೆರಾ ವರ್ಕ್ ಚಿತ್ರದ ಹೈಲೈಟ್ ಎನ್ನಬಹುದು.