Popular Posts

ಬಿಳಿ ಚುಕ್ಕಿ ಹಳ್ಳಿ ಹಕ್ಕಿ – ದೈಹಿಕ ನ್ಯೂನತೆ ಮಾನಸಿಕ ತಳಮಳ

ಚಿತ್ರ : ಬಿಳಿಚುಕ್ಕಿ ಹಳ್ಳಿಹಕ್ಕಿ
ನಿರ್ದೇಶಕ : ಮಹೇಶ್ ಗೌಡ
ನಿರ್ಮಾಣ : ಹೊನ್ನುಡಿ ಪ್ರೊಡಕ್ಷನ್ಸ್
ಸಂಗೀತ : ರಿಯೋ ಆಂಟನಿ
ಛಾಯಾಗ್ರಹಣ : ಕಿರಣ್ ಸಿಹೆಚ್‌ಎಂ
ತಾರಾಗಣ : ಮಹೇಶ್ ಗೌಡ , ಕಾಜಲ್ ಕುಂದರ್ ,ಲಕ್ಷ್ಮಿ ಸಿದ್ದಯ್ಯ , ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಹಾಗೂ ಇತರರು.

ಕೆಲವರು ತಮ್ಮ ದೈಹಿಕ ಸಮಸ್ಯೆಗಳ ಕಾರಣದಿಂದಲೇ ಮನದಲ್ಲಿ ಕೊರಗುತ್ತಾರೆ. ಇಂಥದ್ದೇ ಒಂದು ದೈಹಿಕ‌ ನ್ಯೂನತೆ ಇರುವ ವ್ಯಕ್ತಿಯೊಬ್ಬನ ತೊನ್ನು (ವಿಟಿಲಿಗೋ) ಸಮಸ್ಯೆಯ ಕುರಿತಾದ ಕಥೆಯನ್ನು ಬಿಳಿಚುಕ್ಕಿ ಹಳ್ಳಿ ಹಕ್ಕಿ ಚಿತ್ರದ ಮೂಲಕ ನಿರ್ದೇಶಕ ಮಹೇಶ ಗೌಡ ಹೇಳಿದ್ದಾರೆ‌ ಪ್ರೀತಿ, ಪ್ರೇಮ ಸಂಬಂಧಗಳ ನಡುವೆ ಬದುಕಿನ ದಾರಿಯನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ಹೇಳುವ ಹಾದಿಯಲ್ಲಿ “ಬಿಳಿಚುಕ್ಕಿ ಹಳ್ಳಿ ಹಕ್ಕಿ” ಮೂಡಿಬಂದಿದೆ. ಆ ಹಳ್ಳಿಯಲ್ಲಿ ಶಾಂತ (ಲಕ್ಷ್ಮಿ ಸಿದ್ದಯ್ಯ) ಆಕೆಯ ಕಿರಿಮಗ ಶಿವ(ಮಹೇಶ್ ಗೌಡ) ಹಾಗೂ ಹಿರಿಮಗ ರಂಗಣ್ಣ (ಜಹಾಂಗೀರ್)ನದು ಸಖೀ ಕುಟುಂಬ.

ತನ್ನ ಮಗ ಶಿವನಿಗೆ ಬಾಲ್ಯದಿಂದಲೇ ಶಿವನಿಗೆ ತಗುಲಿಕೊಂಡಿರೋ ಬಿಳಿ ಚುಕ್ಕಿ (ವಿಟಿಲಿಗೋ) ಸಮಸ್ಯೆ ಬಗೆಹರಿಸಲು ಶಾಂತಮ್ಮ ನಾನಾ ರೀತಿಯ ಪ್ರಯತ್ನ ಮಾಡ್ತಾಳೆ. ತನ್ನ ಸಮಸ್ಯೆ ಬಗ್ಗೆ ಶಿವನ ಮನಸ್ಸಿನಲ್ಲಿ ನೋವಿದ್ದರೂ ತಾಯಿಗೆ ಬೆನ್ನೆಲುಬಾಗಿಲು ನಿಂತು ಕೆಲಸ ಮಾಡುತ್ತ ಬದುಕು ನಡೆಸುತ್ತಾನೆ. ಆದರೆ ಆ ತಾಯಿಗೆ ಮಗನಿಗೆ ಹೇಗಾದರೂ ಒಂದು ಹೆಣ್ಣು ತಂದು ಮದುವೆ ಮಾಡಬೇಕೆಂಬ ಆಸೆ. ಬ್ರೋಕರ್ ಮೂಲಕ ಬಹಳಷ್ಟು ಪ್ರಯತ್ನ ಮಾಡುತ್ತಾಳೆ. ತನಗೆ ಯಾರೂ ಹೆಣ್ಣು ಕೊಡುವುದಿಲ್ಲ ಎಂದು ಶಿವ ಸುಮ್ಮನಾಗಿರುತ್ತಾನೆ. ಈ ನಡುವೆ ತಾಯಿಯ ಆಸೆಯಂತೆ ಹುಡುಗಿಯನ್ನು ನೋಡಲು ಶಿವ ಕುಟುಂಬದ ಜೊತೆ ಹೋಗುತ್ತಾನೆ. ಸುಶೀಲ (ವೀಣಾ ಸುಂದರ್) ಹಾಗೂ ವೀರ (ರವಿ ಭಟ್) ತಮ್ಮ ಇಬ್ಬರು ಪುತ್ರಿಯರಲ್ಲಿ ಮೊದಲ ಮಗಳು ಕವಿತಾ (ಕಾಜಲ್ ಕುಂದರ್)ಳನ್ನು ತೋರಿಸುತ್ತಾರೆ.

ತನ್ನ ಮಗಳು ಒಳ್ಳೆಯ ಮನೆ ಸೇರಿ ನೆಮ್ಮದಿಯ ಜೀವನ ನಡೆಸಬೇಕೆಂದು ಆಸೆಪಡುವ ಹುಡುಗಿಯ ತಾಯಿಗೆ, ಬಿಳಿ ಚುಕ್ಕಿ ಇರುವ ಹುಡುಗನನ್ನ ಅಳಿಯನಾಗಿ ಸ್ವೀಕರಿಸಲು ಇಷ್ಟವಿರಲ್ಲ , ಈ ನಡುವೆ ಹುಡುಗಿಯೇ ತಾನು ಶಿವನನ್ನು ಮದುವೆಯಾಗೋದಾಗಿ ಒಪ್ಪುತ್ತಾಳೆ. ಶಿವ ಹಾಗೂ ಆತನ ಕುಟುಂಬಕ್ಕೆ ಆಶ್ಚರ್ಯ ಎನಿಸಿದರೂ ಮನಸ್ಸಿನಲ್ಲಿ ಖುಷಿಯಾಗುತ್ತದೆ. ಕವಿತಾ ಮನೆಯಲ್ಲಿ ತಂದೆಗೆ ಒಪ್ಪಿಗೆ ಇದ್ದರೂ ತಾಯಿಯ ತಿರಸ್ಕಾರದ ನಡುವೆ ಶಿವ ಹಾಗೂ ಕವಿತಾರ ಮದುವೆ ನಡೆಯುತ್ತದೆ. ಸೊಸೆಯನ್ನ ಮುದ್ದಾಗಿ ನೋಡಿಕೊಳ್ಳುವ ಅತ್ತೆ , ಸೋದರ ಮಾವನ ಬೆಂಬಲ , ಗಂಡನ ಪ್ರೀತಿಯ ನಡುವೆ ಕವಿತಾಳ ಮನಸ್ಸಿನಲ್ಲಿ ಒಂದಷ್ಟು ಗೊಂದಲ. ಮಗಳ ಭವಿಷ್ಯ ಹಾಳಾಯಿತು ಎನ್ನುವ ಕವಿತಾಳ ತಾಯಿ , ಹೇಗೋ ನೆಮ್ಮದಿಯಾಗಿ ಇರಲಿ ಎನ್ನುವ ತಂದೆ, ಈ ನಡುವೆ ಊರಿನ ಕೆಲವರು ಸುಂದರಿಯಾದ ಕವಿತಾಳಿಗೆ ಈ ಬಿಳಿ ಚುಕ್ಕಿ ಶಿವ ಗಂಡನಾಗಿ ಬೇಕಿತ್ತಾ ಎಂದು ಹಂಗಿಸುತ್ತಾರೆ. ಹೀಗೆ ಒಂದಷ್ಟು ಗೊಂದಲದ ನಡುವೆ ಕಥೆ ಬೇರೆ ತಿರುವನ್ನ ಪಡೆದುಕೊಂಡು ಸಾಗುತ್ತದೆ. ಅದು ಏನು… ಹೇಗೆ… ಯಾರಿಂದ…ಬಿಳಿ ಚುಕ್ಕಿ ಸಮಸ್ಯೆನಾ…ಮನಸ್ಸಿನ ಸಮಸ್ಯೆನಾ… ಎಂಬ ಸೂಕ್ಷ್ಮ ನೀವು ತೆರೆಯ ಮೇಲೆ ನೋಡಬೇಕು.

ಒಂದು ಗಾಢವಾದ ವಿಚಾರವನ್ನು ಬಹಳ ಸೂಕ್ಷ್ಮವಾಗಿ , ನೈಜಕ್ಕೆ ಹತ್ತಿರ ಎನ್ನುವ ಹಾಗೆ ತೆರೆಯ ಮೇಲೆ ತಂದಿರುವ ನಿರ್ದೇಶಕ ಮಹೇಶ್ ಗೌಡ ಅವರ ಆಲೋಚನೆ ಮೆಚ್ಚುವಂಥದ್ದೇ. ಅದರಲ್ಲೂ ಈ ಸಮಸ್ಯೆಯನ್ನು ಸ್ವತಃ ಎದುರಿಸಿರುವ ಮಹೇಶ್ ಗೌಡ ಅವರೇ ಆ ಪಾತ್ರಕ್ಕೆ ಜೀವ ತುಂಬಿರುವುದು ಚಿತ್ರದ ಮತ್ತೊಂದು ವಿಶೇಷ. ತೊನ್ನು ಸಮಸ್ಯೆ ರೋಗವಲ್ಲ ಎಂಬ ಸೂಕ್ಷ್ಮ ವಿಚಾರವನ್ನು ಹೇಳುವುದರ ಜೊತೆಗೆ ಮಚ್ಚೆಗಿಂತ ಮಾನವೀಯತೆ, ಮನುಷ್ಯತ್ವ ಮುಖ್ಯ ಎಂಬ ಸಂದೇಶವನ್ನು ಹೇಳಿದ್ದಾರೆ. ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ. ಒಂದು ಉತ್ತಮ ಪ್ರಯತ್ನವಾಗಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನಟಿ ಕಾಜಲ್ ಕುಂದರ್ ತಮ್ಮ ಪಾತ್ರದ ನೈಜ್ಯತೆಗೆ ಹೆಚ್ಚು ಒತ್ತುಕೊಟ್ಟು ಕೊನೇ ಸನ್ನಿವೇಶಕ್ಕೆ ಜೀವ ತುಂಬಿದ್ದಾರೆ. ನಾಯಕಿಯ ತಾಯಿಯಾಗಿ ವೀಣಾ ಸುಂದರ್ , ತಂದೆಯಾಗಿ ರವಿ ಭಟ್ ಪಾತ್ರದಲ್ಲಿ ಜೀವಿಸಿದ್ದಾರೆ. ನಾಯಕನ ತಾಯಿಯಾಗಿ ಲಕ್ಷ್ಮಿ ಸಿದ್ದಯ್ಯ ಉತ್ತಮ ಅಭಿನಯ ನೀಡಿ ನೆನಪಿನಲ್ಲಿ ಉಳಿಯುತ್ತಾರೆ. ಉಳಿದಂತೆ ಬರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಒಟಕ್ಕೆ ಉತ್ತಮ ಬೆಂಬಲ ನೀಡಿದ್ದಾರೆ. ಇನ್ನು ತಾಂತ್ರಿಕವಾಗಿ ಸಂಗೀತ , ಛಾಯಾಗ್ರಹಣ , ಸಂಕಲನ ಗಮನ ಸೆಳೆಯುತ್ತದೆ.

ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ ಹೇಳಿರುವ ಈ ಕಥೆಯನ್ನ ಯಾವುದೇ ಮುಜುಗರವಿಲ್ಲದೆ ಎಲ್ಲರೂ ನೋಡಬಹುದು.

Leave a Reply

Your email address will not be published. Required fields are marked *