1
1
ನಿರ್ಮಾಣ: ಲೈಟರ್ ಬುದ್ಧ ಫಿಲಂಸ್
ನಿರ್ದೇಶನ: ಜೆ.ಪಿ. ತುಮ್ಮಿನಾಡು
ತಾರಾಗಣ: ರಾಜ್ ಬಿ ಶೆಟ್ಟಿ, ಜೆ.ಪಿ. ತುಮ್ಮಿನಾಡು, ಶನೀಲ್ ಗೌತಮ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಣಾಜೆ, ಸಂಧ್ಯಾ ಅರಕೆರೆ, ಮೈಮ್ ರಾಮದಾಸ್ ಹಾಗೂ ಇತರರು.
ಸು ಫ್ರಮ್ ಸೋ ಮಂಗಳೂರು ಸೊಗಡಿನ ಹಾರರ್ ಕಾಮಿಡಿ ಚಿತ್ರ. ಮರ್ಲೂರು ಎಂಬ ಗ್ರಾಮದ ಜನರ ಸುತ್ತ ನಡೆಯು ಕಥೆ. ಮರ್ಲೂರು ಕರಾವಳಿ ಭಾಗದ ಒಂದು ಊರು. ಅಲ್ಲೊಂದಿಷ್ಟು ಯುವಕರ ದಂಡು. ಅವರಲ್ಲೊಬ್ಬ ಅಶೋಕ (ಜೆ.ಪಿ. ತುಮಿನಾಡ್). ಈ ಊರಿಗೆ ಒಬ್ಬ ನಾಯಕ. ಅವನೇ ರವಿ ಅಣ್ಣ (ಶನೀಲ್ ಗೌತಮ್). ಊರಿನವರಿಗೆ ಅದೇನೇ ಸಮಸ್ಯೆ ಎದುರಾದರೂ ಅಲ್ಲಿಗೆ ರವಿಯಣ್ಣನೇ ಬರಬೇಕು. ಆತ ಬಂದರೆ, ಸಮಸ್ಯೆ ಇತ್ಯರ್ಥವಾದ ಹಾಗೇ. ಈವೇಳೆ ಅಶೋಕನ ಮೈಮೇಲೆ ಸುಲೋಚನಾಳ ದೆವ್ವ ಬರುತ್ತೆ. ಆ ಸುಲೋಚನಾ ಯಾರು? ಅಶೋಕನ ಮೈ ಮೇಲೆ ಯಾಕೆ ಬಂದಳು? ಅಶೋಕನ ಸಮಸ್ಯೆ ಬಗೆಹರಿಸಲು ರವಿಯಣ್ಣ ಯಾಕೆ ಪರದಾಡಿದ. ಈ ಎಲ್ಲ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರವಿದೆ. ಚಿತ್ರದಲ್ಲಿರುವ ನವಿರು ಹಾಸ್ಯ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ದೃಶ್ಯಗಳ ಜೊತೆ ಸಂಭಾಷಣೆಗಳೂ ಸಹ ಪ್ರೇಕ್ಷಕನನ್ನು ನಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಸೋಮೇಶ್ವರದಿಂದ ಮರ್ಲೂರಿನ ಅಶೋಕನ ಮೈಮೇಲೆ ಬರೋ ಆತ್ಮವೇ ಕಲ್ಪನಾ, ಅದು ಜನರ ಬಾಯಿಂದ ಬಾಯಿಗೆ ಹೋಗಿ ಸುಲೋಚನಾ ಆಗುತ್ತದೆ. ಸುಲೋಚನಾ ಯಾರು, ಸುಲೋಚನಾಳ ಆತ್ಮ ಸೋಮೇಶ್ವರದಿಂದ ಮರ್ಲೂರಿಗೆ ಬಂದಿದ್ದು ಏಕೆ. ಎಂದು ಪತ್ತೆ ಹಚ್ಚುವುದೇ ಚಿತ್ರದ ತಿರುಳು. ಸೋಮೇಶ್ವರಕ್ಕೂ ಈ ಪಾತ್ರಕ್ಕೂ ಏನು ಸಂಬಂಧ ಎನ್ನುವದರ ಸುತ್ತ ಚಿತ್ರಕಥೆ ಸಾಗುತ್ತದೆ. ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುವುದೇ ಡೈಲಾಗ್‌ಗಳಿಂದ. ನಿರ್ದೇಶಕ ಜೆಪಿ ತುಮ್ಮಿನಾಡ ಅವರ ಅಶೋಕನ ಪಾತ್ರ ಪ್ರೇಕ್ಷಕರನ್ನು ನಗಿಸುತ್ತಲೇ ಸಾಗುತ್ತೆ. ನಿರ್ದೇಶಕರು ನಗಿಸುತ್ತಲೇ ಸಮಾಜದ ಎರಡು ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಕೂಡ ಮಾಡಿದ್ದಾರೆ. ಮೂಢನಂಬಿಕೆಗಳು, ಊಹಾಪೋಹಗಳು ಹೇಗೆ ನಮ್ಮ ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತವೆ ಎಂಬುದನ್ನು ವಿಡಂಬನಾತ್ಮಕವಾಗಿ, ಅಷ್ಟೇ ಪರಿಣಾಮಕಾರಿಯಾಗಿ ತೆರೆಮೇಲೆ ತೋರಿಸಿದ್ದಾರೆ.

ಕನ್ನಡದಲ್ಲಿ ಹಲವು ಹಾರರ್ ಕಾಮಿಡಿಚಿತ್ರಗಳು ಬಂದಿದ್ದರೂ ಅದೆಲ್ಲಕ್ಕಿಂತ ಈ ಚಿತ್ರ ವಿಭಿನ್ನವಾಗಿ ಕಂಡುಬರುತ್ತದೆ. ಊರಿನ ಅಷ್ಟೊಂದು ಜನರ ನಡುವೆ ಒಬ್ಬನಲ್ಲಿ ಸುಲೋಚನಾಳ ಆತ್ಮ ಹೊಕ್ಕಿದೆ ಎಂದಾಗ. ಅದನ್ನು ಬಿಡಿಸಲು ಜನ ಏನೆಲ್ಲಾ ತಂತ್ರಗಳನ್ನು ಮಾಡುತ್ತಾರೆ ಎನ್ನುವುದೂ ಚಿತ್ರದಲ್ಲಿದೆ.
ಎಲ್ಲಾ ಕಲಾವಿದರು ಪಾತ್ರವೇ ತಾನಾಗಿ ಅಭಿನಯಿಸಿದ್ದಾರೆ, ಸುಮೇದ್ ಮತ್ತು ಸಂದೀಪ್ ತುಳಸಿದಾಸ್ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕಥೆಗೆ ತಕ್ಕಂತೆ ಮೂಡಿಬಂದಿದೆ. ಚಿತ್ರವನ್ನು ಸೊಗಸಾಗಿ ಕಟ್ಟಿಕೊಡುವಲ್ಲಿ ಛಾಯಾಗ್ರಾಹಕ ಎಸ್.ಚಂದ್ರಶೇಖರನ್ ಗೆದ್ದಿದ್ದಾರೆ.
ಚಿತ್ರದಲ್ಲಿ ಶನೀಲ್‌ಗುರು, ಪ್ರಕಾಶ್ ತುಮ್ಮಿನಾಡ್, ದೀಪಕ್‌ರೈ ಪಣಾಜೆ, ಮೈಮ್ ರಾಮದಾಸ್ ಹೀಗೆ ಎಲ್ಲರ ಪಾತ್ರಗಳೂ ಮನರಂಜಿಸುತ್ತವೆ. ಜೊತೆಗೆ ಒಂದು ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರೂ ಕಾಣಿಸಿಕೊಂಡಿದ್ದಾರೆ. ಮೊದಲಿನಿಂದ ಕೊನೆಯವರೆಗೂ ಪ್ರತಿ ದೃಶ್ಯದಲ್ಲೂ ನಗುವಿದೆ.
ನಿರ್ದೇಶಕರು ಎಲ್ಲೂ ಹಾಸ್ಯವನ್ನು ತುರುಕಿಲ್ಲ. ಚಿತ್ರದ ಸನ್ನಿವೇಶಗಳೇ ನಗು ತರಿಸುತ್ತವೆ. ಆ ನಗುವಿನ ಜೊತೆಗೆ, ಒಂದು ಗಂಭೀರವಾದ ಸಂದೇಶವೂ ಇದೆ. ಅದನ್ನು ಪ್ರೇಕ್ಷಕರ ಮೇಲೆ ಹೇರದಂತೆ ನಯವಾಗಿ ಹೇಳಿ, ನಗಿಸುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ನಗಿಸುತ್ತಲೇ ಭಾವುಕರನ್ನಾಗಿಸುತ್ತಾರೆ.