Popular Posts

ʼಜೆರಾಕ್ಸ್‌ʼ ಟ್ರೈಲರ್‌ ಬಿಡುಗಡೆ

ನಟ, ನಿರ್ಮಾಪಕ ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್‌ ಲಾಂಛನದಲ್ಲಿ ಹಾಗೂ ಬ್ಲಿಂಕ್‌ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಅವರ ನಿರ್ದೇಶನದ ʼಜೆರಾಕ್ಸ್‌ʼ ವೆಬ್ ಸರಣಿಯ ಟ್ರೈಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಆರು ಸಂಚಿಕೆಗಳ ಹಾಸ್ಯ ವೆಬ್‌ ಸರಣಿ ಇದಾಗಿದೆ.
ʼಜೆರಾಕ್ಸ್‌ʼ ಸರಣಿ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಾಗಭೂಷಣ್‌, ಪಾಯಲ್‌ ಚೆಂಗಪ್ಪ ಕಾಣಿಸಿಕೊಂಡಿದ್ದು, ಮಂಜು ಪಾವಗಡ, ಓಂ ಪ್ರಕಾಶ್‌ ರಾವ್‌, ಶ್ರೀವತ್ಸ, ಯಶ್ವಂತ್‌ ಶೆಟ್ಟಿ, ವಿಜಯ್‌ ಪ್ರಸಾದ್‌, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್‌ ಗೌಡ ಹಾಗೂ ಇತರರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.

ಮಳವಳ್ಳಿಯ ರಾಯದುರ್ಗದ ಪ್ರಕಾಶ ಒಬ್ಬ ಸಾಮಾನ್ಯ ಜೆರಾಕ್ಸ್‌ ಅಂಗಡಿ ಕೆಲಸಗಾರ. ಅವನ ಜೆರಾಕ್ಸ್‌ ಯಂತ್ರಕ್ಕೆ ಒಂದು ತಾಯಿತ ಸೇರಿದಾಗ ಅವನ ಜೀವನವೇ ಬದಲಾಗುತ್ತದೆ. ಅವನು ತೆಗೆಯುವ ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದು, ಅವನ ಜೀವನ ಉಲ್ಟಾ ಪಲ್ಟಾ ಆಗುತ್ತದೆ. ಇದರಿಂದ ಆಗುವ ಅಚಾನಕ್‌ ಬದಲಾವಣೆಗಳು, ಊರಿನಲ್ಲಾಗುವ ಆಶ್ಚರ್ಯಕರ ಘಟನೆಗಳು, ಕುತೂಹಲಕಾರಿ ಸನ್ನಿವೇಶಗಳನ್ನು ಜೆರಾಕ್ಸ್ ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಜೀ 5ನಲ್ಲಿ ಏಪ್ರಿಲ್‌ 24ರಿಂದ ಈ ವೆಬ್‌ ಸರಣಿಯು ಪ್ರಸಾರವಾಗಲಿದೆ.

ನಿರ್ಮಾಪಕ ಡಾಲಿ ಧನಂಜಯ ಮಾತನಾಡಿ, “ನನಗೆ ಈ ಕಥೆ ಇಷ್ಟವಾಗಲು ಕಾರಣ ಅದು ಹೇಳುವ ತತ್ವ, ಪ್ರತಿ ಹಾಸ್ಯ ಸನ್ನಿವೇಶದ ಹಿಂದೆ ಅಡಗಿರುವ ತತ್ವ, ನನ್ನನ್ನು ತನ್ನತ್ತ ಸೆಳೆಯಿತು. ಜೆರಾಕ್ಸ್‌ ಕಾಪಿಗಳಿಗೆ ಜೀವ ಬಂದಾಗ, ಜನರು ತಮ್ಮ ಪ್ರತಿಬಿಂಬವನ್ನೇ ಸ್ವೀಕರಿಸಲು ಹೇಗೆ ನಿರಾಕರಿಸುತ್ತಾರೆ ಇವೆಲ್ಲವೂ ನನ್ನನ್ನು ಆಕರ್ಷಿಸಿತು. ಈ ಕಥೆಯು ಒಂಟಿತನ, ಹಾಸ್ಯ, ಪಶ್ಚಾತಾಪ, ಗೊಂದಲ ಎಲ್ಲವನ್ನೂ ಒಳಗೊಂಡಿದೆ. ಇದು ಕೇವಲ ಹಾಸ್ಯವನ್ನಷ್ಟೇ ಹೇಳದೇ, ಜೀವನದ ಮೌಲ್ಯಗಳನ್ನೂ ಕೂಡ ಹೇಳುತ್ತದೆ” ಎಂದು ವಿವರಿಸಿದರು.

ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, “ನಮ್ಮ ಕಾಪಿ, ನಾವು ನೋಡಲು ಬಯಸದ ನಮ್ಮ ಒಂದು ವ್ಯಕ್ತಿವವನ್ನು ಬಿಂಬಿಸಿದರೆ ಹೇಗೆ ಇರುತ್ತದೆ ? ಜೆರಾಕ್ಸ್‌ ಈ ಭಯದಿಂದ ಹುಟ್ಟಿದ ಕಥೆ. ಮಳವಳ್ಳಿಯಲ್ಲಿ ನಡೆಯುವ ಈ ಆಶ್ಚರ್ಯಕರ ಘಟನೆ ಹೇಗೆ ಹಲವಾರು ಹೊಸ ತಿರುವುಗಳಿಗೆ ಕಾರಣವಾಗುತ್ತದೆ, ಹೇಗೆ ಜನರ ಜೀವನವನ್ನು ಬದಲಾಯಿಸುತ್ತದೆ, ಇವೆಲ್ಲವನ್ನೂ ಕುತೂಹಲಕಾರಿಯಾಗಿ ತೋರಿಸುವ ಪ್ರಯತ್ನವೇ ಜೆರಾಕ್ಸ್‌” ಎಂದರು.

ನಟ ನಾಗಭೂಷಣ ಮಾತನಾಡಿ, ” ಜೆರಾಕ್ಸ್‌ ಅಂಗಡಿ ಕೆಲಸಗಾರ ಪ್ರಕಾಶ್ ಆಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ಘಟನೆಯಿಂದ ಆತನ ಜೀವನ ಹೇಗೆ ಸಂಪೂರ್ಣವಾಗಿ ಬದಲಾಗುತ್ತದೆ ಎಂಬುದನ್ನು ಈ ಕಥೆಯಲ್ಲಿ ಹೇಳಲಾಗಿದೆ. ಎಲ್ಲರ ಜೀವನದಲ್ಲಿ ನಡೆಯುವ ಘಟನೆಗಳಿಗೆ ಇವನು ಕಾರಣಕರ್ತನಾಗಿರುತ್ತಾನೆ. ಅವನು ಶಕ್ತಿಶಾಲಿಯೇನಲ್ಲ, ಕೆಟ್ಟವನೂ ಅಲ್ಲ. ಆದರೆ ಎಲ್ಲದರ ಹಿಂದೆ ಇವನ ಕೈವಾಡವಿರುತ್ತದೆ. ಇದೊಂದು ವಿಭಿನ್ನವಾದ ಪಾತ್ರ” ಎಂದರು.

Leave a Reply

Your email address will not be published. Required fields are marked *