1
1
ಆ ದಿನಗಳು ಖ್ಯಾತಿಯ ಕೆ.ಎಂ. ಚೈತನ್ಯ ಅವರ ನಿರ್ದೇಶನದ ಮತ್ತೊಂದು ಚಿತ್ರ ಬಲರಾಮನ ದಿನಗಳು. ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ನಟನೆಯ ಈ ಚಿತ್ರದ ‘ಶುರು ಶುರು’ ಎಂಬ ಮೆಲೋಡಿ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ನಿರ್ಮಾಣದ ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಸಂಚಿತ್ ಹೆಗ್ಡೆ ಹಾಗೂ ಪುಣ್ಯ ದನಿಯಾಗಿರುವ ಈ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕ ಕೆ.ಎಂ. ಚೈತನ್ಯ ಮಾತನಾಡುತ್ತ ಇದು ಆ ದಿನಗಳು ಚಿತ್ರದ ಎರಡನೇ ಭಾಗವಲ್ಲ. ಅದರ ಮತ್ತೊಂದು ಅಧ್ಯಾಯ. ಇದೊಂದು ಕಲ್ಟ್ ಕ್ಲಾಸಿಕ್ ಚಿತ್ರವಾಗಿದ್ದು, 80ರ ದಶಕದ ಕಥೆಯನ್ನು ಇಲ್ಲಿ ಹೇಳುತ್ತಿದ್ದೇವೆ. ಬಲರಾಮನ ದಿನಗಳು ಒಂದು ಕಾಲ್ಪನಿಕ ಕಥೆ. ಒಮ್ಮೆ ಶ್ರೇಯಸ್ ಆ ದಿನಗಳು ಥರದ ಒಂದು ಕಥೆಯನ್ನು ಮಾಡಿ, ವಿನೋದ್ ಪ್ರಭಾಕರ್ ಅವರಿಗೆ ಮಾಡಿ ಎಂದರು. ಜಿಗರ್ ಥಂಡಾದಲ್ಲಿ ಸಂತೋಷ್ ನಾರಾಯಣನ್ ಅವರ ಸಂಗೀತ ನನ್ನ ಗಮನ ಸೆಳೆದಿತ್ತು. ಅವರ ಹೆಸರನ್ನು ಹೇಳಿದಾಗಿ ವಿನೋದ್, ಶ್ರೇಯಸ್ ಇಬ್ಬರೂ ಒಪ್ಪಿದರು. ಛಾಯಾಗ್ರಾಹಕ ಎಚ್.ಸಿ.ವೇಣು ಅದ್ಬುತವಾಗಿ ಸನ್ನಿವೇಶಗಳನ್ನು ಸೆರೆಹಿಡಿದಿದ್ದಾರೆ ಎಂದರು.

ನಟ ವಿನೋದ್ ಪ್ರಭಾಕರ್ ಮಾತನಾಡಿ ಬಲರಾಮನ ದಿನಗಳು ಚಿತ್ರಕ್ಕೆ ಟಿ ಸೀರೀಸ್ ಆಡಿಯೋ ಕಂಪನಿ ಗರಿಷ್ಠಮೊತ್ತ ನೀಡಿದೆ. ನನ್ನ ಸಂಗೀತದ 25 ಚಿತ್ರಗಳಲ್ಲಿ ಅತಿಹೆಚ್ಚು ಮೊತ್ತಕ್ಕೆ ಆಡಿಯೋ ಸೇಲಾದ ಮೊದಲ ಚಿತ್ರ ಎಂದರು. ನಾಯಕಿ ಪ್ರಿಯಾ ಆನಂದ್ ಮಾತನಾಡಿ, ನಾನು ಕನ್ನಡ ಕಲಿಯಲು ಪುನೀತ್ ರಾಜ್‌ಕುಮಾರ್ ಕಾರಣ. ಭಾಷೆ ಗೊತ್ತಿದ್ದರೆ ಸನ್ನಿವೇಶಗಳಲ್ಲಿ ಸುಲಭವಾಗಿ ನಟಿಸಲು ಸಾದ್ಯವಾಗುತ್ತದೆ ಎಂದಿದ್ದರು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು.

ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಮಾತನಾಡಿ ನಾನು ಸುಮಾರು ಚಿತ್ರಗಳಿಗೆ ಸಂಗೀತ ಮಾಡಿದ್ದೇನೆ. ಆದರೆ ಇದು ನನ್ನ 10 ಪ್ರಮುಖ ಹಾಡುಗಳಲ್ಲಿ ಒಂದಾಗಲಿದೆ ಎಂದರು.
ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ ಇಡೀ ಕುಟುಂಬದ ಜೊತೆ ಕುಳಿತು ನೋಡುವಂಥ ಸಿನಿಮಾ ಮಾಡಿವೆ ಎಂದರು.
ನಿರ್ಮಾಪಕರ ಪುತ್ರ ಶ್ರೇಯಸ್ ಮಾತನಾಡಿ ನಮ್ಮ ಚಿತ್ರದ ಆಡಿಯೋಗೆ ಟಿ.ಸೀರೀಸ್ ಸಂಸ್ಥೆ ಮತ್ತೊಂದು ಸಿನಿಮಾ ಮಾಡುವಷ್ಟು ಮೊತ್ತ ನೀಡಿ ಖರೀದಿಸಿದೆ ಎಂದರು.