1
1
ಡಾ.ರಾಜ್ ಕುಮಾರ್ ನಂತರ ಶ್ರೀಕೃಷ್ಣದೇವರಾಯನಾಗಿ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜನ್ಮದಿನದ (ಸೆಪ್ಟೆಂಬರ್ 2) ಸಂದರ್ಭದಲ್ಲಿ ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ದೊರೆತಿದೆ. ಸುದೀಪ್ ಅವರ ಮುಂದಿನ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಐತಿಹಾಸಿಕ ಪ್ರಾಜೆಕ್ಟ್ ‘ದೇವರಾಯ’ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಹಾಗೂ ಪ್ರಿಯಾ ಸುದೀಪ್ ಒಡೆತನದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್’ ಜಂಟಿಯಾಗಿ ಈ ಬಿಗ್ ಕ್ಯಾನ್ವಾಸ್ ಚಿತ್ರವನ್ನು ನಿರ್ಮಿಸಲು ಮುಂದಾಗಿವೆ.

ವಿಜಯನಗರ ಸಾಮ್ರಾಜ್ಯವನ್ನು ಸುವರ್ಣ ಯುಗಕ್ಕೆ ಕೊಂಡೊಯ್ದು, ಸಾಹಸ, ಚಾಣಾಕ್ಷ ಆಡಳಿತ ಹಾಗೂ ಸಾಹಿತ್ಯ-ಕಲೆಗಳ ಪೋಷಣೆಗೆ ಹೆಸರಾದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಪಾತ್ರಕ್ಕೆ ಸುದೀಪ್ ಅವರು ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್ಕುಮಾರ್ ಅವರು ಕೃಷ್ಣದೇವರಾಯರ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಅಜರಾಮರಗೊಳಿಸಿದ್ದರು. ಇದೀಗ ದಶಕಗಳ ಬಳಿಕ, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅದ್ದೂರಿ ಮೇಕಿಂಗ್ನೊಂದಿಗೆ ಮೂಡಿಬರಲಿರುವ ಈ ಚಿತ್ರವು ಸುದೀಪ್ ಅವರ ಸಿನಿಪಯಣದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ.
ಪ್ರಿಯಾ ಸುದೀಪ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಟಿ.ಜಿ. ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಬಂಡವಾಳ ಹೂಡುತ್ತಿದ್ದಾರೆ. ತೆಲುಗಿನಲ್ಲಿ ‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಹಾಗೂ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಅಂತಹ ಪ್ಯಾನ್-ಇಂಡಿಯಾ ಮತ್ತು ಬಿಗ್-ಬಜೆಟ್ ಚಿತ್ರಗಳನ್ನು ನಿರ್ಮಿಸಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ, ಇದೀಗ ಕನ್ನಡದಲ್ಲೂ ಭದ್ರವಾಗಿ ನೆಲೆವೂರಲು ಸಜ್ಜಾಗಿದೆ.
ಸದ್ಯಕ್ಕೆ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿರುವ ಚಿತ್ರತಂಡ, ಈ ಚಿತ್ರದ ನಿರ್ದೇಶಕರು ಯಾರು ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿದೆ. ಚಿತ್ರೀಕರಣ ಹಾಗೂ ನಂತರದ ತಾಂತ್ರಿಕ ಕೆಲಸಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಿರುವುದರಿಂದ, ‘ದೇವರಾಯ’ ಚಿತ್ರವನ್ನು 2027ರ ಡಿಸೆಂಬರ್ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ.