Popular Posts

‘ಬೃಂದಾವಿಹಾರಿ’ಯ ಸಂಭ್ರಮದಲ್ಲಿ ಚಿತ್ರತಂಡ

ಕೃಷ್ಣಂ ಪ್ರಣಯಸಖಿ ಖ್ಯಾತಿಯ ಸೂಪರ್‌ಹಿಟ್ ಕಾಂಬಿನೇಶನ್ ಗೋಲ್ಡನ್‌ಸ್ಟಾರ್ ಗಣೇಶ್ ಮತ್ತು ಶ್ರೀನಿವಾಸರಾಜು “ಬೃಂದಾವಿಹಾರಿ” ಚಿತ್ರದ ಮೂಲಕ ಮತ್ತೊಮ್ಮೆ ಜೊತೆಯಾಗಿದ್ದಾರೆ. ಶಾಸಕರು ಹಾಗೂ ನಿರ್ಮಾಪಕರೂ ಆದ ಸಮೃದ್ಧಿ ವಿ.ಮಂಜುನಾಥ್ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಈಗಾಗಲೇ ತನ್ನ ಹಾಡುಗಳಿಂದ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರ ಅ.16ಕ್ಕೆ ದಸರಾ ಕೊಡುಗೆಯಾಗಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಸಂಭ್ರಮ ಕಾರ್ಯಕ್ರಮದ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಯಿತು,

ಈವೇಳೆ ಮಾತನಾಡಿದ ಗಣೇಶ್, ಚಿತ್ರದಲ್ಲಿ ಹಿರಿಯ ನಟಿಯಾದ ಲಕ್ಷ್ಮಿ ಅವರೊಂದಿಗೆ ನಟಿಸುವಾಗ ಸಾಕಷ್ಟು ಕಲಿತಿದ್ದೇನೆ. ನನ್ನದು ಭಾವನೆಗೆ ಬೆಲೆ ಕೊಡುವಂಥ ಮಾಧವ ಎಂಬ ಮುಗ್ಧನ ಪಾತ್ರ. ಪ್ರೇಕ್ಷಕರು ನನ್ನಿಂದ ಏನು ಬಯಸುತ್ತಾರೆ ಅದೆಲ್ಲವೂ ಈ ಪಾತ್ರದಲ್ಲಿದೆ. ಎಮೋಷನ್, ಹಾಸ್ಯ ಮತ್ತು ಸಂಬಂಧಗಳನ್ನು ಒಟ್ಟಿಗೆ ಕಟ್ಟಿಕೊಡುವುದು ಸವಾಲಿನ ಕೆಲಸವಾಗಿತ್ತು. ನಿರ್ದೇಶಕರು ಎಲ್ಲರಿಂದಲೂ ಒಳ್ಳೆಯ ಕೆಲಸ ತೆಗೆಸಿದ್ದಾರೆ. ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಇದು ನಿಮ್ಮ ಗಣೇಶನ ಅಪ್ಪಟ್ಟ ಕನ್ನಡ ಸಿನಿಮಾ. ಎಲ್ಲರೂ ಕುಟುಂಬ ಸಮೇತ ಬಂದು ನೋಡಬಹುದು ಎಂದರು.

ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ ಈ ಚಿತ್ರದ ನಂತರ ನಾನು ಗಣೇಶ್‌ ಜೊತೆ ಸಿನಿಮಾ ಮಾಡದಿದ್ದರೂ ಪರವಾಗಿಲ್ಲ. ಅಷ್ಟೊಂದ ತೃಪ್ತಿ ನನಗೆ ಈ ಚಿತ್ರದಿಂದ ಸಿಕ್ಕಿದೆ. ಈ ಚಿತ್ರದ ನಿಜವಾದ ನಾಯಕ ಎಂದರೆ ಗಣೇಶ್ ಮಾತ್ರ. ಅಷ್ಟು ಅದ್ಬುತವಾಗಿ ಅವರು ನಟಿಸಿದ್ದಾರೆ. ಕೇಳಿದ್ದೆಲ್ಲವನ್ನೂ ಕೊಟ್ಟು ಯಾವುದೇ ಕೊರತೆಯಾಗದಂತೆ ನೋಡಿಕೊಂಡಿರುವ ನಿರ್ಮಾಪಕರಿಗೆ, ನಮ್ಮ ತಂತ್ರಜ್ಞರು ಹಾಗೂ ಕಲಾವಿದರಿಗೆ ಧನ್ಯವಾದ ಎಂದರು.

ನಿರ್ಮಾಪಕ ಸಮೃದ್ಧಿ ಮಂಜುನಾಥ್ ಮಾತನಾಡಿ ಹಲವು ನಿರ್ಮಾಪಕರು ನನಗೆ ಕರೆಮಾಡಿ ನಿಮ್ಮ ದಿನಾಂಕದಲ್ಲೇ ಜೈಲರ್-2 ರಿಲೀಸಾಗ್ತಿದೆ. ಸುಮ್ನೆ ಯಾಕೆ ರಿಸ್ಕ್ ತಗೋತೀರಾ ಅಂತ ಬಹಳಷ್ಟು ಜನ ಕೇಳಿದರು. ಅದಕ್ಕೆ ನಾನು, ಇದು ನಮ್ಮ ಕನ್ನಡ ಸಿನಿಮಾ. ಗೆದ್ದೇ ಗೆಲ್ಲುತ್ತೆ ಎಂಬ ಭರವಸೆ ಇದೆ. ಅದೇ ನಂಬಿಕೆಯ ಮೇಲೆ ಪ್ರಪಂಚದಾದ್ಯತ 13೦೦ ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ. ಹೇಶಮ್ ಅಬ್ದುಲ್ ವಹಾಬ್ ಅವರು ಖುಷಿ ಚಿತ್ರಕ್ಕೆ ಮಾಡಿದ್ದ ಹಾಡುಗಳು ನನಗೆ ತುಂಬಾ ಇಷ್ಟವಾಗಿತ್ತು. ಹಾಗಾಗಿ ಅವರ ಕೈಲಿ ಸಾಂಗ್ ಮಾಡಿಸಿದ್ದೇವೆ. ಸುಂದರವಾದ ಮೆಲೋಡಿ ಹಾಡುಗಳನ್ನವರು ಮಾಡಿಕೊಟ್ಟಿದ್ದಾರೆ. ಗಣೇಶ್ ನಮ್ಮ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಮಾಡಿದ್ದಾರೆ. ನಿರ್ದೇಶಕ ಶ್ರೀನಿವಾಸರಾಜು ಇಡೀ ಫ್ಯಾಮಿಲಿ ಕೂತು ನೋಡುವಂಥ ಚಿತ್ರ ಮಾಡಿಕೊಟ್ಟಿದ್ದಾರೆ. ಮೇಲುಕೋಟೆಯಲ್ಲಿ ಚಿತ್ರೀಕರಣ ಆರಂಭಿಸಿದ್ದೆವು. ಸತತವಾಗಿ ೫೬ ದಿನಗಳ ಕಾಲ ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಪ್ರತಿದಿನ ಸಾವಿರಾರು ಜನ ಚಿತ್ರೀಕರಣದಲ್ಲಿ ಇರುತ್ತಿದ್ದರು ಎಂದು ತಿಳಿಸಿದರು. ಚಿತ್ರದ ನಾಯಕಿ ಮುಂಬೈ ಮೂಲದ ನಟಿ, ಮಾಡೆಲ್ ಮಾಳವಿಕ ಶರ್ಮಾ. ಈಗಾಗಲೇ ತೆಲುಗು, ತಮಿಳಲ್ಲಿ ಅಭಿನಯಿಸಿದ್ದಾರೆ, ಇದು ಅವರ ಮೊದಲ ಕನ್ನಡ ಚಿತ್ರ. ಈ ಚಿತ್ರದಲ್ಲಿ ನಾನು ಮೀರಾ ಎಂಬ ಪಾತ್ರ ಮಾಡಿದ್ದೇನೆ, ಆಕೆ ಕೃಷ್ಣನ ಪರಮಭಕ್ತೆ ಎಂದರು. ಮತ್ತೊಬ್ಬ ನಟಿ ದೇವಿಕಾ ಭಟ್, ಹಿರಿಯನಟ ರಂಗಾಯಣ ರಘು, ನೀನಾಸಂ ಅಶ್ವಥ್ ಚಿತ್ರದ ಕುರಿತಂತೆ ಮಾತನಾಡಿದರು.

Leave a Reply

Your email address will not be published. Required fields are marked *