1
1
ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ನಟಿಸಿರುವ ನಿತೇಶ್ ತಿವಾರಿ ನಿರ್ದೇಶನದ, ಈ ವರ್ಷದ ಬಹುನಿರೀಕ್ಷಿತ ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ದೆಹಲಿಯ ಭಾರತ್ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ, ಹನುಮನಾಗಿ ಸನ್ನಿ ಡಿಯೋಲ್ ಕಾಣಿಸಿಕೊಂಡಿದ್ದಾರೆ.
ಜು.24ರಂದು ರಿಲೀಸಾಗಲಿರುವ ‘ರಾಮಾಯಣ’ ಚಿತ್ರದ ಟ್ರೈಲರ್ ಝಲಕ್ ಶನಿವಾರ ಪ್ರಥಮ ಸಂಕಲ್ಪ ಹೆಸರಿನಲ್ಲಿ ನಡೆಯಿತು. 4.15 ನಿಮಿಷಗಳ ಈ ಟ್ರೇಲರ್ ಹೊಸ ಪ್ರಪಂಚವನ್ನು ಸೃಷ್ಟಿಸಿದೆ. ಭಾರತೀಯ ಪೌರಾಣಿಕ, ಸಾಂಸ್ಕೃತಿಕ ರಾಯಭಾರಿಯಾಗಿ ‘ರಾಮಾಯಣ’ ವಿಶ್ವಕ್ಕೆ ಪರಿಚಯವಾಗಲಿದೆ. ಅಂತಹ ಅದ್ಭುತ ದೃಶ್ಯವೈಭವ ಟ್ರೇಲರ್‌ನಲ್ಲಿ ಅನಾವರಣವಾಗಿದೆ. ರಣಬೀರ್ ಕಪೂರ್ (ರಾಮ), ಸಾಯಿಪಲ್ಲವಿ (ಸೀತೆ). ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ) ಜತೆ ಅರುಣ್ ಗೋವಿಲ್ (ದಶರಥ), ರವಿ ದುವೆ (ಲಕ್ಷ್ಮಣ), ರಕುಲ್ ಪ್ರೀತ್ ಸಿಂಗ್ (ಶೂರ್ಪನಖಿ), ಶೋಭನಾ, ಕುನಾಲ್ ಕಪೂರ್, ಅಜಿಂತ್ರ್ಯ ದೇವ್ ಸೇರಿ ಹಲವು ಘಟಾನುಘಟಿ ಕಲಾವಿದರು ‘ರಾಮಾಯಣ’ದಲ್ಲಿ ನಟಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹ್ಮಾನ್ ಸಂಗೀತ ನೀಡಿದ್ದಾರೆ. ಇದೇ ದೀಪಾವಳಿ ಹಬ್ಬಕ್ಕೆ ‘ರಾಮಾಯಣ’ ಮೊದಲ ಭಾಗ ತೆರೆಗೆ ಬರಲಿದ್ದು, 2027ರ ದೀಪಾವಳಿಗೆ ಸಿಕ್ವೆಲ್ ರಿಲೀಸ್ ಆಗಲಿದೆ.
ಬಾಲಿವುಡ್ ನಟ ರಣಬೀರ್ ಕಪೂರ್ ಮಾತನಾಡುತ್ತ ಬಾಲ್ಯದಿಂದಲೂ ನಾನು ಕಿರುತೆರೆ, ಬೆಳ್ಳಿತೆರೆಯಲ್ಲಿ ರಾಮಾಯಣ ನೋಡಿಕೊಂಡು ಬೆಳೆದವನು. ಇದೀಗ ನಾನೇ ಆ ರಾಮನ ಪಾತ್ರವನ್ನು ಮಾಡಿರುವುದು ನನ್ನ ಅದೃಷ್ಟ ಎಂದರು. ಸೀತೆಯಾಗಿ ಕಾಣಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಮಾತನಾಡಿ, ದೇವರು, ದೇವಿಯ ಪಾತ್ರಗಳು ಸಿಗುವುದು, ಅದರಲ್ಲಿ ನಾನ ನಟಿಸುವುದು ಎರಡೂ ಸುಲಭದ ಮಾತಲ್ಲ. ಇದು ಇತಿಹಾಸದ ಪುಟಗಳಲ್ಲಿ ಸೇರುವ ಚಿತ್ರವಾಗಲಿದೆ. ಶೂಟಿಂಗ್ ಸಮಯದಲ್ಲಿ ನಾನು ಧ್ಯಾನ ಮಾಡುತ್ತಾ ಸೀತಮ್ಮ, ನೀನೇ ಬಂದು ನನ್ನನ್ನು ನಟಿಸುವಂತೆ ಮಾಡು ಎಂದು ಕೇಳಿಕೊಳ್ಳುತ್ತಿದ್ದೆ” ಎಂದು ಹೇಳಿದರು.

‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೀಶ್ ತಿವಾರಿ ಮಾತನಾಡಿ ರಾಮಾಯಣ ಸಿನಿಮಾ ನಾನು ಆಯ್ಕೆ ಮಾಡಿದ್ದಲ್ಲ, ಅದೇ ನನ್ನನ್ನು ಆಯ್ಕೆ ಮಾಡಿಕೊಂಡಿದ್ದು ನನ್ನ ಅದೃಷ್ಟ, ಈ ಪಯಣ ಸರಳವಾಗಿರಲಿಲ್ಲ. ಆದರೆ, ಈ ಜರ್ನಿಯಲ್ಲಿ ಪ್ರಭು ಶ್ರೀರಾಮನ ಬಗ್ಗೆ ತುಂಬಾ ವಿಷಯಗಳನ್ನು ತಿಳಿದುಕೊಂಡೆ. ಪುರಾಣವನ್ನು ಹೊಸ ತಂತ್ರಜ್ಞಾನದ ಮೂಲಕ, ಹೊಸ ರೀತಿ ಹೇಳುವ ಪ್ರಯತ್ನ ಮಾಡಿದ್ದೇವೆ.
ಶ್ರೀರಾಮ ತಾಡಾಸುರನನ್ನು ಹೇಗೆ ಕೊಂದರು? ವಾಯು-ಸುಗ್ರೀವರು ಹೇಗೆ ಕಾಣಿಸುತ್ತಿದ್ದರು? ಕಿಶ್ಕಿಂಧೆ ನೋಡಲು ಎಷ್ಟು ಸುಂದರವಾಗಿತ್ತು? ಅದನ್ನು ಯಾರೂ ನೋಡಿಲ್ಲ. ಅದನ್ನೆಲ್ಲ ಹೊಸ ರೀತಿ ತೋರಿಸಿದ್ದೇವೆ’ ಎಂದು ಹೇಳಿದರು.
ರಾಮಾಯಣ’ ಟ್ರೇಲರ್ ಬಿಡುಗಡೆಯ ಬಳಿಕ ನಟ ಯಶ್ ವೇದಿಕೆಗೆ ವಿಶೇಷ ಎಂಟ್ರಿ ಕೊಟ್ಟಿದ್ದು, ಅಲ್ಲಿ ಸೇರಿದ್ದವರ ಕರತಾಡನ, ಘೋಷಣೆಗಳು ಉತ್ತರ ಭಾರತದಲ್ಲೂ ಯಶ್ ಅವರಿಗಿರುವ ಕ್ರೇಜನ್ನು ಅನಾವರಣಗೊಳಿಸಿತು. ‘ಎಲ್ಲರಿಗೂ ನಮಸಸ್ಕಾರ’ ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದ ಯಶ್, ‘ಈ ಅದ್ಭುತ ಸಿನಿಮಾದ ಭಾಗವಾಗಿರುವುದು ನನಗೆ ತುಂಬಾ ಖುಷಿ ನೀಡಿದೆ. ನಿರ್ಮಾಪಕ ನಮಿತ್ ಅವರೇ ನನಗೆ ರಾವಣ ಪಾತ್ರದಲ್ಲಿ ನಟಿಸಲು ತಿಳಿಸಿದರು. ಈ ಸಿನಿಮಾ ನಮ್ಮೆಲ್ಲರ ಕನಸು. ವಿಶ್ವದೆಲ್ಲೆಡೆ ಪ್ರಭು ಶ್ರೀರಾಮರ ಕಥೆಯನ್ನು ತೋರಿಸಬೇಕು ಎನ್ನುವ ಒಂದೇ ಉದ್ದೇಶದಿಂದ ನಾವೆಲ್ಲರೂ ಕೈಜೋಡಿಸಿದ್ದೇವೆ’ ಎಂದರು.
ನಿರ್ಮಾಪಕ ನಮಿತ್ ಮಲ್ಲೋತ್ತಾ ಮಾತನಾಡಿ, “ರಾಮಾಯಣ’ದ 300ಕ್ಕೂ ಹೆಚ್ಚು ಅವತರಣಿಕೆಗಳಿವೆ. ಆ ಎಲ್ಲವುಗಳಿಂದ ಸ್ಫೂರ್ತಿ ಪಡೆದಿದ್ದು ಎಲ್ಲರಿಗೂ ಕನೆಕ್ಟ್ ಆಗುವಂತಹ ಚಿತ್ರ ಮಾಡಿದ್ದೇವೆ. ವಿದೇಶಗಳಲ್ಲಿ ಭಾರತೀಯ ಸಿನಿಮಾಗಳ ಬಗ್ಗೆ ಅವರಿಗೆ ಹೆಚ್ಚು ಗೊತ್ತಿಲ್ಲ. ಈ ಸಿನಿಮಾ ಇಡೀ ವಿಶ್ವವೇ ಭಾರತೀಯ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡುತ್ತದೆ ಎಂದು ಭರವಸೆ ನೀಡಿದರು.