1
1
ಮೂರು ಮಿಲಿಯನ್ ಕ್ರಾಸ್ ಮಾಡಿದ ‘ಅಮೋರಾ’
ಬೃಂದಾ ಆಚಾರ್ಯ, ಕೃಷ್ಣ ಅಜಯ್‌ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಪಾರ್ಟ್ನರ್ ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಸೆನ್ಸಾರ್ ಮಂಡಳಿಯಿಂದಲೂ ಪಾಸಾಗಿ ಹೊರಬಂದಿದೆ. ಇತ್ತೀಚೆಗೆ ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯಾವುದೇ ಕಟ್, ಮ್ಯೂಟ್ ಇಲ್ಲದೆ ಯು/ಎ ಪ್ರಮಾಣಪತ್ರ ನೀಡಿದೆ. ಈ ಹಿಂದೆ ಮಳೆ, ಧೈರ್ಯಂನಂಥ ಚಿತ್ರಗಳನ್ನು ನಿರ್ದೇಶಿಸಿದ್ದ ಶಿವತೇಜಸ್ ಅವರ ಸಾರಥ್ಯದ ಮತ್ತೊಂದು ಚಿತ್ರ ಪಾರ್ಟ್ನರ್. ಈ ಚಿತ್ರದ ಮೂಲಕ ಅವರು ಹ್ಯೂಮನ್ ವ್ಯಾಲ್ಯೂಸ್ ಜತೆಗೆ ಈಗಿನ ಜಂಝಿಗಳ ಜೀವನಶೈಲಿಯ ಕುರಿತಂತೆ ಹೇಳುತ್ತಾ, ಜೀವನ ಎಂದರೆ ಇದಲ್ಲ, ಅದು ಬೇರೇನೇ ಇದೆ ಎಂಬ ಸಂದೇಶವನ್ನು ಹೇಳಹೊರಟಿದ್ದಾರೆ. ನಟ ಅಜೇಯ್‌ರಾವ್ ಹಾಗೂ ಶಿವತೇಜಸ್ ಜೋಡಿಯ ಮೂರನೇ ಸಿನಿಮಾ ಇದಾಗಿದ್ದು, ಹೆಚ್.ಪಿ.ಆರ್. ಎಂಟರ್‌ಪೈಸಸ್ ಬ್ಯಾನರ್ ಅಡಿಯಲ್ಲಿ ಹರೀಶ್ ದೇವಿತಂದ್ರೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಕುನಾಲ್ ಗಾಂಜಾವಾಲಾ ಅವರು ಹಾಡಿರುವ, ನಾಗಾರ್ಜುನ ಶರ್ಮಾ ರಚನೆಯ ‘ಅಮೋರ ಅಮೋರಾ’ ಹಾಡು ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಮೂರು ಮಿಲಿಯನ್‌ಗೂ ಅಧಿಕ ವೀಕ್ಷಣೆಯಾಗಿದೆ. ಈ ಹಾಡಿಗೆ ನಕುಲ್ ಅಭಯಂಕರ್ ಅವರು ಸಂಗೀತ ಸಂಯೋಜಿಸಿದ್ದಾರೆ, ವಿಶೇಷವೆಂದರೆ ಈ ಚಿತ್ರದ ಆಡಿಯೊ ಹಕ್ಕನ್ನು ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆ ದೊಡ್ಡ ಮೊತ್ತವನ್ನೇ ನೀಡಿ ಖರೀದಿಸಿದೆ.

ನಿರ್ಮಾಪಕ ಹರೀಶ್ ದೇವಿತಂದ್ರೆ ಅವರು ಹೊಸ ದಿಗಂತದೊಂದಿಗೆ ಮಾತನಾಡುತ್ತ ನಮ್ಮ ಚಿತ್ರದ ಅಮೋರಾ ಹಾಡಿಗೆ ಎಲ್ಲರಿಂದಲೂ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಇದೀಗ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದಲೂ ಸಹ ಪ್ರಶಂಸೆ ದೊರೆತಿದ್ದು, ನವೆಂಬರ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆಯದೆ ಎಂದು ಹೇಳಿದರು.
ಈಗಿನ ಜನರೇಶನ್‌ನಲ್ಲಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ಇವೆಲ್ಲವೂ ಕಾಮನ್ ಆಗಿದೆ. ಪಾರ್ಟ್ನರ್ ಎಂದರೆ ಜೀವನಪೂರ್ತಿ ನಂಬಿಕೆ ಇಟ್ಟುಕೊಂಡು ಜತೆಗಿರುವಂಥ ಜೀವನಸಂಗಾತಿ. ನಮ್ಮ ಮೇಲೆ ನಂಬಿಕೆ ಇರುವ ಪಾರ್ಟ್ನರ್ ಜತೆಗಿದ್ದರೆ ಜೀವನ ಸುಸೂತ್ರ ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ, ಸದ್ಯದಲ್ಲೇ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಮಾಡಲಿದ್ದೇವೆ ಎಂದು ನಿರ್ದೇಶಕ ಶಿವತೇಜಸ್ ಅವರು ಹೇಳಿದರು.