Popular Posts

ಶಿವರಾಜ್‌ಕುಮಾರ್ ಅಭಿನಯದ ಬೇಲ್ ಟ್ರೈಲರ್ ಬಿಡುಗಡೆ

ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ‘ಬೇಲ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾದ ಟ್ರೇಲರ್‌ನಲ್ಲಿ ಪೋಲಿಸ್ ಆಕ್ಷನ್, ನ್ಯಾಯದ ಹೋರಾಟ, ರೋಚಕ ಸಂಘರ್ಷ ಮತ್ತು ತೀವ್ರ ಭಾವನಾತ್ಮಕ ಮುಖಾಮುಖಿಯ ಝಲಕ್ ಅನ್ನು ಸಿನಿಪ್ರಿಯರ ಮುಂದಿಟ್ಟಿದೆ. ಟ್ರೈಲರ್ ಮೂಲಕವೇ ಹೈ-ವೋಲ್ಟೇಜ್ ಸಿನಿಮಾದ ಅನುಭವ ಮೂಡಿಸಿರುವ ಈ ಚಿತ್ರವು ಗಾಂಧಿ ಜಯಂತಿಯ ಅ. 2 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಶಿವರಾಜಕುಮಾರ್ ಅವರ ಗಂಭೀರ ಸ್ಕ್ರೀನ್ ಪ್ರೆಸೆನ್ಸ್, ಅಬ್ಬರದ ಪೋಲಿಸ್ ಅವತಾರ ಹಾಗೂ ರೋಮಾಂಚಕ ದೃಶ್ಯ ವೈಭವದಿಂದಾಗಿ ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ.
ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರು ದೃಢ ನಿಶ್ಚಯದ, ಕಟ್ಟುನಿಟ್ಟಿನ ಹಾಗೂ ನಿರ್ಭೀತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅಪರಾಧ ಮತ್ತು ನ್ಯಾಯದ ನಡುವಿನ ಜಟಿಲ ಜಗತ್ತಿನಲ್ಲಿ ಎದುರಾಗುವ ಯಾವುದೇ ಆಪತ್ತಿಗೂ ಅಂಜದೆ ಧೈರ್ಯವಾಗಿ ನಿಲ್ಲುವ ಖಡಕ್ ಅಧಿಕಾರಿಯಾಗಿ ಅವರು ಕಾಣಿಸಿಕೊಂಡಿದ್ದಾರೆ.

ಕೇವಲ ಪೋಲಿಸ್ ವರ್ಸಸ್ ಕ್ರಿಮಿನಲ್ ನಡುವಿನ ಕಥೆಯಾಗಷ್ಟೇ ಉಳಿಯದೆ, ಕೌಟುಂಬಿಕ ಭಾವನಾತ್ಮಕ ತಿರುಳನ್ನು ಹೊಂದಿರುವುದು ‘ಬೇಲ್’ ಚಿತ್ರದ ಮತ್ತೊಂದು ಹೈಲೈಟ್. ನಿರ್ದೇಶಕ ಪವನ್ ಒಡೆಯರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ದಕ್ಷಿಣ ಭಾರತದ ಬೃಹತ್ ವೆಚ್ಚದ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ಸಾಥ್ ನೀಡಲು ಡೈಲಾಗ್ ಕಿಂಗ್ ಸಾಯಿಕುಮಾರ್, ಬಹುಭಾಷಾ ನಟ ಜಯರಾಮ್, ಲೂಸ್ ಮಾದ ಯೋಗೇಶ್, ದೀಕ್ಷಿತ್‌ ಶೆಟ್ಟಿ ಹಾಗೂ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಕಥೆಯಲ್ಲಿ ಸಮಾನ ತೂಕವಿದ್ದು, ಪಾತ್ರಗಳ ನಡುವಿನ ಸಂಘರ್ಷದ ಸಣ್ಣ ತುಣುಕುಗಳು ಟ್ರೈಲರ್‌ನ ವೇಗ ಮತ್ತು ರೋಚಕತೆಯನ್ನು ಹೆಚ್ಚಿಸಿವೆ.

ಸುಮಾರು ಎರಡೂವರೆ ನಿಮಿಷಗಳ ಈ ಟ್ರೈಲರ್‌ಗೆ ಚುರುಕಾದ ಸಂಕಲನ, ಪವರ್‌ಫುಲ್ ಸಂಭಾಷಣೆಗಳು ಮತ್ತು ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಜೀವ ತುಂಬಿದೆ. ಸರೇಗಮ ಸೌತ್ ಸಂಸ್ಥೆಯು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಶಿವಣ್ಣನ ಖಡಕ್ ಖಾಕಿ ಅವತಾರ ಹಾಗೂ ಭರ್ಜರಿ ಮಾಸ್-ಎಮೋಷನಲ್ ಡ್ರಾಮಾವನ್ನು ಹೊತ್ತು ತರುತ್ತಿರುವ ‘ಬೇಲ್’ ಅಕ್ಟೋಬರ್ 2 ರಂದು ಬೆಳ್ಳಿತೆರೆಗೆ ಬರಲು ಸಂಪೂರ್ಣ ಸಜ್ಜಾಗಿದೆ.

Leave a Reply

Your email address will not be published. Required fields are marked *