1
1
ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಸಂತತಿ ಕಡಿಮೆಯಾಗುತ್ತಿದೆ. ಗ್ರಾಮೀಣ ಅಥವಾ ನಗರ ಪ್ರದೇಶಗಳ ಬಹುತೇಕ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಅದರಲ್ಲೂ ಹೆಣ್ಣು ಹೆತ್ತೋರು ಸರ್ಕಾರಿ ನೌಕರಿ ಇರೋರನ್ನೇ ಹುಡುಕುತ್ತಾರೆ. ಇಂತಹ ಒಂದಷ್ಟು ಅಂಶಗಳನ್ನಿಟ್ಟುಕೊಂಡು ನಿರ್ದೇಶಕ ಆರ್.ಕೆ. ‘ನಾಗುಗೆ ವಧು ಬೇಕಾಗಿದೆ’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಆರ್. ಕೆ. ಅವರೇ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು
ಶ್ರೀಗುರು ರಾಘವೇಂದ್ರ ಕನ್ನಡ ಸಿನಿಮಾಸ್ ನಿರ್ಮಿಸಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದರು. ನಿರ್ದೇಶಕ ಬಹದ್ದೂರ್ ಚೇತನ್ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದರು. ಈ ಚಿತ್ರದಲ್ಲಿರುವ ತಾಯಿ, ಮಗನ ಬಾಂಧವ್ಯದ ಸನ್ನಿವೇಶ ನನ್ನ ಮನಸ್ಸಿಗೆ ಹತ್ತಿರವಾಯಿತು. ಬಹುತೇಕ ಯುವಕರು ಎದುರುಸುತ್ತಿರುವ ಈ ಸಮಸ್ಯೆಯನ್ನು ನಿರ್ದೇಶಕರು ತೆರೆಯಮೇಲೆ ತರೋ ಪ್ರಯತ್ನ ಮಾಡಿದ್ದಾರೆ ಎಂದು ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಸರ್ಕಾರಿ ಕೆಲ್ಸಾನೆ ಬೇಕು, ಅತ್ತೆ ಮಾವ ಇರಬಾರದು. ಬೆಂಗಳೂರಲ್ಲಿ ಸೈಟ್, ಮನೆ ಇರಬೇಕು ಹೀಗೆ ಹಲವಾರು ಬೇಡಿಕೆಗಳನ್ನಿಡುತ್ತಾರೆ. ಈ ಎಲ್ಲ ಅಂಶಗಳ ಜತೆಗೆ ತಾವು ನೋಡಿದ ಕೆಲವು ಪ್ರಕರಣಗಳಿಂದ ಪ್ರೇರಿತನಾಗಿ ಈ ಕಥೆ ಬರೆದಿದ್ದೇನೆ. ಇದೊಂದು ನೈಜಘಟನೆ ಆಧಾರಿತ ಚಿತ್ರ. ಈಗಾಗಲೇ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಮುಂದಿನ ತಿಂಗಳು ಚಿತ್ರವನಗನು ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದೇವೆ. ದತ್ತು ಪೂಜಾರಿ, ಸೋನಿಕಾ ಸೋಮಣ್ಣ, ಚಿತ್ರಾಲ್ ರಂಗಸ್ವಾಮಿ, ಅಪೂರ್ವಶ್ರೀ, ರೇಖಾದಾಸ್, ಬೌಬೌ ಬಿರಿಯಾನಿ ಜಯರಾಮ್ ಇತರರು ಪ್ರಮುಖ ತಾರಾಬಳಗದಲ್ಲಿದ್ದಾರೆ.

ನಾಯಕ ದತ್ತು ಪೂಜಾರಿ ಮಾತನಾಡಿ ಚಿತ್ರದಲ್ಲಿ ನಾನು ನಾಗು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹೆಣ್ಣು ಹುಡುಕಲು ನಾನು ಪಡುವ ಅವಸ್ಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಶ್ರೀಸುರೇಶ್ ಹಾಗೂ ಛಾಯಾಗ್ರಾಹಕ ನಾಗರಾಜ್ ಕೂಡ ವೇದಿಕೆಯಲ್ಲಿದ್ದರು.