Popular Posts

ಲೈಫ್ ಟುಡೇ ಪ್ರೀತಿ ಪ್ರೇಮದ ಕಥೆಯಲ್ಲಿ ವಿಷಾದದ ಛಾಯೆ

ಲೈಫ್ ಟುಡೇ ನಮ್ಮ ಜೀವನದ ತಾರುಣ್ಯದ ಪ್ರೀತಿ, ಪ್ರೇಮ ಮತ್ತು ತಂದೆ, ತಾಯಿಯ ವಾತ್ಸಲ್ಯದ ಮಧ್ಯೆ ನಡೆಯುವ ತಾಕಲಾಟವನ್ನು ಹೇಳುವ ಚಿತ್ರ ಎನ್ನಬಹುದು. ಚಿತ್ರದ ನಾಯಕ ಒಬ್ಬ ಅನಾಥ, ಶಕ್ತಿಶಾಲಿ ಯುವಕ. ಅತನನ್ನು ಕಂಡ ಮಧ್ಯಮ ವರ್ಗದ ಕುಟುಂಬದ ಸುಂದರ ಯುವತಿಯೊಬ್ಬಳಿಗೆ ಆತನ ಮೇಲೆ ಪ್ರೇಮ ಅರಳುತ್ತದೆ. ಪ್ರೀತಿ- ಪ್ರೇಮ ಇದೆಲ್ಲದರಿಂದ ಆದಷ್ಟು ದೂರ ಇರುವ ದೃಢನಿರ್ಧಾರ ತಳೆದ ನಾಯಕ ಕಡೆಗೂ ಸೋಲುತ್ತಾನೆ. ಆಕೆ ತಾರುಣ್ಯದ ಹುಚ್ಚು ಹೊಳೆಯಲ್ಲಿ ಅವನನ್ನು ಮನಸಾರೆ ಪ್ರೀತಿಸುತ್ತಾಳೆ ಮತ್ತು ತನ್ನ ಪ್ರೀತಿಯತ್ತ ಸೆಳೆಯುತ್ತಾಳೆ. ನಾಯಕ ಆಕೆಯ ಪ್ರೇಮದ ಸೆಳೆತಕ್ಕೆ ಸಿಕ್ಕು ತರಗೆಲೆಯಂತಾಗುತ್ತಾನೆ.
ಯುವನಟ ಕಿರಣ್ ಆದಿತ್ಯ ಮತ್ತು ಲೇಖಾ ಚಂದ್ರ ಯುವ ಪ್ರೇಮಿಗಳ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ. ನಾಯಕಿಯ ತಂದೆಯ ಪಾತ್ರ ಮಾಡಿರುವ ತಬಲಾ ನಾಣಿ ಅವರ ಪ್ರವೇಶದಿಂದ ಕಥೆ ಬೇರೊಂದು ತಿರುವು ಪಡೆದುಕೊಳ್ಳುತ್ತದೆ. ಆ ತಂದೆಗೆ ಮಗಳ ಮುಂದಿನ ಜೀವನ ಮುಖ್ಯ. ಆನಂತರ ಮುಂದೆ ಏನೆಲ್ಲ ನಡೆದುಹೋಗುತ್ತದೆ ಎನ್ನುವುದೇ ಲೈಫ್ ಟುಡೇ ಚಿತ್ರದ ಮುಖ್ಯಕಥೆ.

ಚಿತ್ರದ ಮೊದಲಾರ್ಧ ಪ್ರೇಮದ ಹುಚ್ಚಾಟದಲ್ಲಿ ಕಳೆದುಹೋಗುತ್ತದೆ. ಆನಂತರ ಕೊಂಚ ವಿಷಾದ. ನಂತರದಲ್ಲಿ ನಡೆಯುವುದು ಹಾವು ಏಣಿಯಾಟ.
ಘರ್ಷಣೆಯಲ್ಲಿಯೇ ಬಹುತೇಕ ದ್ವಿತೀಯಾರ್ಧ ಚಿತ್ರದ ಕಥೆ ಮುಗಿಯುತ್ತದೆ. ಇದೊಂದು ಪ್ರೀತಿ, ಪ್ರೇಮ, ವಿರಹ, ವಿಧಿ ವಿಪರ್ಯಾಸದ ಕತೆ. ತುಂಬಾ ಹೊಸದು ಅಂತೇನೂ ಇಲ್ಲದಿದ್ದರೂ, ಇರುವ ಕಥೆಯನ್ನು ನಿರ್ದೇಶಕ ಕಾಂತ ಕನ್ನಲ್ಲಿ ಅವರು ಅಚ್ಚುಕಟ್ಟಾಗಿ ಹೇಳಲು ಪ್ರಯತ್ನಿಸಿದ್ದಾರೆ. ಅದಕ್ಕೆ ಪಾತ್ರಧಾರಿಗಳು ಸಹ ಸಾಥ್ ನೀಡಿದ್ದಾರೆ. ಲವ್, ಮದುವೆ, ನಾಯಕಿ ತೆಗೆದುಕೊಳ್ಳುವ ನಿರ್ಧಾರಗಳ ಮಧ್ಯೆ ಸರಿಯಾದ ಸಮತೋಲಿತ ದಾರಿ ಇರಬೇಕು ಎನ್ನುವುದು ಲೈಫ್ ಟುಡೇ ಚಿತ್ರದ ಒಟ್ಟಾರೆ ಆಶಯ.

ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೂರು ಬಾರಿ ಆಲೋಚಿಸಬೇಕು ಎನ್ನುವುದು ಸಿನಿಮಾದ ಮುಖ್ಯ ಸಂದೇಶ. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಇರಬೇಕು ಎನ್ನುವುದು ಮತ್ತೊಂದು ಮೆಸೇಜು. ಇವೆರಡೂ ಅಂಶಗಳ ಮಧ್ಯೆ ಚಿತ್ರದ ಕತೆ ಸಾಗಲಿದೆ. ಲೈಓ್ ಟುಡೇ ಚಿತ್ರ ಹೆಚ್ಚು ಇಷ್ಟವಾಗುವುದು ಅದರ ಹಾಡುಗಳಿಂದ. ಸುಂದರ ಹಾಡುಗಳಿಗೆ ಕಲಾವಿದರ ಅದ್ಭುತ ಅಭಿನಯವೂ ಸಾಥ್ ನೀಡಿದೆ. ಕ್ಯಾಮೆರಾ ವರ್ಕ್ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ. ಪ್ರೀತಿ ಪ್ರೇಮದವಜತೆ ಭಾವನಾತ್ಮಕವಾಗಿಯೂ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಲೈಫ್ ಟುಡೇ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *