1
1
ಹನ್ನೆರಡನೇ ಶತಮಾನದಲ್ಲಿ ತನ್ನ ವಚನಗಳ ಮೂಲಕ ನೀತಿ ಬೋಧನೆ ಮಾಡಿದ ಶಿವಶರಣೆ ಅಕ್ಕಮಹಾದೇವಿ. ಆ ಮಹಾನ್ ಸಂತಳ ಜೀವನಕಥೆ “ಜಗನ್ಮಾತೆ ಅಕ್ಕಮಹಾದೇವಿ” ಈವಾರ ಬೆಳ್ಳಿತೆರೆಯ ಮೇಲೆ ಮೂಡಿಬಂದಿದೆ. ಶ್ರೀ ಅಕ್ಕ ಮಹಾದೇವಿ ವಚನಗಳ ಮೂಲಕವೇ ನೀತಿಕಥೆಗಳನ್ನು ಹೇಳುತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದವರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ-ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಎಂಬ ಪುಟ್ಟ ಗ್ರಾಮದ, ವೀರಶೈವ ಜನಾಂಗದ ನಿರ್ಮಲ ಶೆಟ್ರು ಮಗಳಾಗಿ ಜನಿಸಿದವಳೇ ಮಹಾದೇವಿ.
ಚಿಕ್ಕವಳಿದ್ದಾಗಿನಿಂದಲೂ ಆಚಾರ, ವಿಚಾರದ ಜತೆ ಶಿವನಾಮ ಸ್ಮರಣೆ ಮಾಡುತ್ತಲೇ ಬೆಳೆದ ಈಕೆ ದೇವ ಶ್ರೀಚನ್ನಮಲ್ಲಿಕಾರ್ಜುನನ ಪರಮ ಭಕ್ತೆಯಾಗುತ್ತಾಳೆ. ಮಹಾದೇವಿಯ ಅಂದಕ್ಕೆ ಮಾರುಹೋದ ಜೈನ ಧರ್ಮದ ಕೌಶಿಕ ಮಹಾರಾಜ ಆಕೆಯನ್ನು ಇಷ್ಟಪಟ್ಟು ಮದುವೆಯಾಗಲು ಮುಂದಾಗುತ್ತಾನೆ. ಆಕೆ ಒಪ್ಪದಿದ್ದಾಗ ಬಲವಂತವಾಗಿ ವರಿಸಲು ಮುಂದಾಗುತ್ತಾನೆ. ಆತನನ್ನು ಮದುವೆಯಾಗಲು ಇಷ್ಟವಿಲ್ಲದ ಮಹಾದೇವಿ, ಹಣೆಗಾದರೂ ತಪ್ಪಿಸಿಕೊಂಡರೆ ಸಾಕೆಂದು ಕೆಲ ಶರತ್ತುಗಳನ್ನು ಹಾಕುತ್ತಾಳೆ. ಅವನ್ನೆಲ್ಲ ಪಾಲಿಸುವುದಾದರೆ ಮಾತ್ರ ಮದುವೆಗೆ ಒಪ್ಪಿಕೊಳ್ಳುವುದಾಗಿ ಹೇಳಿ, ಅರಮನೆಗೆ ಬರುತ್ತಾಳೆ. ಆದರೆ ಕೌಶಿಕ ಮಹಾರಾಜ ಆತುರದಿಂದ ಆಕೆಯನ್ನು ಮುಟ್ಟಲು ಹೋದಾಗ ವಿವಸ್ತ್ರಳಾದ ಆಕೆ ಈ ನಶ್ವರ ಕಾಯವನ್ನು ತಾನೆ ನೀ ಇಷ್ಟಪಟ್ಟಿದ್ದು ಎಂದು ಹೇಳುತ್ತಾಳೆ, ಇದರಿಂದ ಕೌಶಿಕ ಮಹಾರಾಜನಿಗೆ ಜ್ಞಾನೋದಯವಾಗುತ್ತದೆ. ಅಲ್ಲಿಂದ ಕೇಶರಾಶಿಯಿಂದ ಮೈ ಮುಚ್ವಿಕೊಂಡ ಮಹಾದೇವಿ ಚನ್ನಮಲ್ಲಿಕಾರ್ಜುನನ್ನು ಅರಸಿ ಶ್ರೀಶೈಲಕ್ಕೆ ಹೊರಡುತ್ತಾಳೆ. ಆ ಮಾರ್ಗದಲ್ಲಿ ಕಿನ್ನರ ಬೊಮ್ಮಯ್ಯನ ಸಹಾಯದಿಂದ ಬಸವಕಲ್ಯಾಣಕ್ಕೆ ಅಗಮಿಸುವ ಮಹಾದೇವಿ ಅಲ್ಲಿನ ಅನುಭವ ಮಂಟಪದಲ್ಲಿ ಬಸವಣ್ಣ, ಅಲ್ಲಮ ಪ್ರಭುವನ್ನು ಸಂಧಿಸುತ್ತಾಳೆ. ಅಲ್ಲಿ ಚೆನ್ನಬಸವಣ್ಣ, ಸಿದ್ಧರಾಮ ಮೊದಲಾದ ಶಿವಶರಣರೊಡನೆ ಕಲ್ಯಾಣ ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅಲ್ಲಮಪ್ರಭು ಈಕೆಯಲ್ಲಿದ್ದ ಜ್ಞಾನ ಭಂಡಾರಕ್ಕೆ ಮನಸೋತು ಅಕ್ಕ ಎಂದು ಸಂಬೋಧಿಸುತ್ತಾನೆ. ಅಲ್ಲಿಂದ ಆಕೆ ಆಕ್ಕಮಹಾದೇವಿ ಆಗಿ ತನ್ನ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾಳೆ.

ತ್ರಿಕೂಡ ಪರ್ವತಕ್ಕೆ ತೆರಳಿ ಅಲ್ಲಿ ಶಿವಧ್ಯಾನದಲ್ಲಿ ತಲ್ಲೀನಳಾಗುತ್ತಾಳೆ. ಚಿತ್ರದಲ್ಲಿ ಅಕ್ಕ ಮಹಾದೇವಿಯಾಗಿ ನಟಿ ಸುಲಕ್ಷಾ ಖೈರಾ ಅದ್ಭುತವಾಗಿ ನಟಿಸಿದ್ದಾರೆ. ಅವರ ಭಾವಪೂರ್ಣ ಅಭಿನಯವೇ ಚಿತ್ರದ ಹೈಲೈಟ್. ಅಲ್ಲಮ ಪ್ರಭುವಾಗಿ ಸುಚೇಂದ್ರ ಪ್ರಸಾದ್,ಕೌಶಿಕ ಮಹಾರಾಜ ಹಾಗೂ ಬಸವಣ್ಣನ ಪಾತ್ರದಲ್ಲಿ ವಿಷ್ಣುಕಾಂತ್ , ಮಂತ್ರಿ ವಸಂತಕನಾಗಿ ತಬಲಾನಾಣಿ ಎಲ್ಲರೂ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ರವಿ ಸುವರ್ಣ ಅವರ ಕ್ಯಾಮೆರಾ ವರ್ಕ ಕಥೆಗೆ ಪೂರಕವಾಗಿದೆ, ಪಳನಿ ಸೇನಾಪತಿ ಅವರ ಸಂಗೀತದಲ್ಲಿ ವಚನಗಳನ್ನು ನಿರೂಪಿಸಲಾಗಿದ್ದು ಕೇಳಲು ಸೊಗಸಾಗಿವೆ.
ಮನಸುಗಳ ಮಾತು ಮಧುರ, ಗಂಗಾ ಕಾವೇರಿ, ಕಲ್ಯಾಣ ಕುವರದಂಥ ಚಿತ್ರಗಳನ್ನು ನಿರ್ದೇಶಿಸಿದ ವಿಷ್ಣುಕಾಂತ್.ಬಿ.ಜೆ ತಮ್ಮ ಭರತ್ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ,
ಗುಲ್ಬರ್ಗ, ಬೀದರ್, ಶ್ರೀಶೈಲಂನ ಕಾಡುಗುಡ್ಡದ ಸರೋವರದ ಪರಿಸರದಲ್ಲಿ ಚಿತ್ರೀಕರಿಸಲಾಗಿದ್ದು, ಅಕ್ಕಮಹಾದೇವಿಯ ಶಿವಶರಣೆಯ ಇತಿಹಾಸ ತಿಳಿದುಕೊಳ್ಳಲು ಒಮ್ಮೆ ಈ ಚಿತ್ರವನ್ನ ಥೇಟರಿನಲ್ಲಿ ಕಣ್ತುಂಬಿಕೊಳ್ಳಬಹುದು.