Popular Posts

ಡಿಸೆಂಬರ್ 11ಕ್ಕೆ ಬೆಲ್‌ ಬಾಟಮ್ ನಿರ್ಮಾಪಕರ ‘ಹುಬ್ಬಳ್ಳಿ ಹಂಟರ್ಸ್’

ಹರಿಪ್ರಿಯಾ ಅಭಿನಯದ ಯಶಸ್ವೀ ‘ಬೆಲ್ ಬಾಟಮ್’ ಚಿತ್ರ ನಿರ್ಮಿಸಿದ ಸಂತೋಷ್ ಕುಮಾರ್ ಕೆ.ಸಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ದಿಗಂತ್ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರ ನಿರ್ದೇಶಿಸಿದ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಇದೇ ವರ್ಷ ಡಿಸೆಂಬರ್ 11ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
ಉತ್ತರ ಕರ್ನಾಟಕದ ಸೊಗಡು ಮತ್ತು ಸಂಸ್ಕೃತಿಯನ್ನು ಒಳಗೊಂಡ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹುಬ್ಬಳ್ಳಿಯಲ್ಲೇ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಲಾಗಿತ್ತು. ಕಥೆಯ ನೈಜತೆಗೆ ಧಕ್ಕೆ ಬಾರದಂತೆ ಮೊದಲ ಹಂತದಲ್ಲಿ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ ಮತ್ತು ನಂತರ ಶಿರಸಿ ಹಾಗೂ ಧಾರವಾಡದ ಸುಂದರ, ನೈಜ ತಾಣಗಳಲ್ಲೇ ಚಿತ್ರೀಕರಣ ನಡೆಸಿರುವುದು ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.

ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಚೇತನ್ ಮಾರಂಬೀಡ್, ಪವನ್ ಕುಲಕರ್ಣಿ, ಸುಮಿತ್ ಸಂಕೋಜಿ, ನಮನ್ ಅರೋರ, ಧನ್ಯಶ್ರೀ ಸುಜಿತ್, ವನು ಪಾಟೀಲ್ ದೀಪಕ್ ರಾವ್, ಶಿವು ಗುಂಡಣ್ಣನವರ್, ವಿನಯ್ ದೊಡ್ಡಮನಿ, ಪವನ್ ಅಣ್ಣೆಗೇರಿ ನಟಿಸಿದ್ದಾರೆ. ಅಲ್ಲದೆ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್ ರಂಥ ಹಿರಿಯ ಕಲಾವಿದರು ಈ ಚಿತ್ರದಲ್ಲಿರುವುದು, ಸಿನಿಮಾದ ತೂಕ ಹೆಚ್ಚಿಸಿದೆ. ಈ ಚಿತ್ರದಲ್ಲಿ ಹಲವಾರು ಕಂಟೆಂಟ್ ಕ್ರಿಯೇಟರ್ಸ್‌ ಬಣ್ಣ ಹಚ್ಚಿರುವುದು ವಿಶೇಷ.

ನಿರ್ದೇಶಕರೇ ಕಥೆ ಬರೆದಿದ್ದು, ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಸಂಭಾಷಣೆ ಹೆಣೆದಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿದ್ದು, ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಹಾಗೂ ಪ್ರಸನ್ನ ಕೇಶವ ಅವರ ಸಂಗೀತ ನಿರ್ದೇಶನ, ಸುಜಿತ್ ಶ್ರೀಧರ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಶೀಘ್ರದಲ್ಲೇ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

Leave a Reply

Your email address will not be published. Required fields are marked *