1
1
ಕೆರ್ನಳ್ಳಿ ಈಶ್ವರ್ ಅವರು ಕಥೆ, ಚಿತ್ರಕಥೆ, ಸಾಹಿತ್ಯ ರಚಿಸಿ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಧಗೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್ ಬಿಡುಗಡೆ ಹಾಗೂ ಅರವಿಂದ ಪಾಟೀಲ್ ಅವರ ‘ಸುರಕ್ಷಾ ಟೀ’ ಫ್ರಾಂಚೈಸಿ ಮತ್ತು ಡಿಸ್ಟ್ರಿಬ್ಯೂಟರ್ ಲಾಂಚ್ ಕಾರ್ಯಕ್ರಮ ನಡೆಯಿತು.
ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗಂಗಾವತಿ ಪ್ರಾಣೇಶ್, ನಟ ನವೀನ್ ಶಂಕರ್, ನಟಿ ಮಮತಾ ರಾವುತ್, ಕನ್ನಡಸೇನೆ ಅಧ್ಯಕ್ಷ ಕುಮಾರ್, ಚಾಣಾಕ್ಯ ಕೆರಿಯರ್ ಅಕಾಡೆಮಿಯ ಎನ್.ಎಂ. ಬಿರಾದಾರ್, ಬಸವರಾಜ ಮಹಾಮನಿ, ಶ್ರೀಮತಿ ಲತಾ ಕುಂದರಗಿ ಮುಂತಾದವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಮಾತನಾಡಿದ ಸ್ವಾಮೀಜಿಗಳು ನನ್ನ 75 ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೂ ಚಹಾ ಕುಡಿದಿಲ್ಲ. ಭಕ್ತ ಅರವಿಂದ ಪಾಟೀಲ ತಾವು ಉತ್ಪಾದನೆ ಮಾಡಿದ ಸುರಕ್ಷಾ ಚಹಾ ಕುಡಿಯಲು ಕೇಳಿಕೊಂಡರು. ಅವರ ಕೋರಿಕೆ ತಿರಸ್ಕರಿಸಲಾಗದೆ, ಚಹಾ ಸೇವಿಸಿದೆ. ತುಂಬ ರುಚಿಯಾಗಿತ್ತು. ಅಂದಿನಿಂದ ಇದೇ ಟೀ ಕುಡಿಯುತ್ತಿದ್ದೇನೆ. ಧಗೆ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನೂ ರಂಜಿಸಲಿ ಎಂದು ಶುಭ ಹಾರೈಸಿದರು.

ಧಗೆ ಚಿತ್ರದ ನಾಯಕ ಡಾ.ಸಂಗಮೇಶ ಉಪಾಸೆ ತಮ್ಮ ಪಾತ್ರ ಪರಿಚಯ ಮಾಡಿಕೊಂಡು, ಸುರಕ್ಷಾ ಟೀ ಧಗೆ ಚಿತ್ರ ಕಥೆಯ ಭಾಗವಾಗಿದೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ನೋಡಬೇಕು. ಉತ್ತರ ಕರ್ನಾಟಕದಲ್ಲಿ ಯಾರೇ ಮನೆಗೆ ಬಂದರೂ, ಎಲ್ಲೇ ಹೋದರೂ ಮೊದಲು ಚಹಾ ಕುಡಿಯಿರಿ ಎನ್ನುತ್ತಾರೆ. ಈ ಚಿತ್ರವು ನಮ್ಮ ಭಾಷೆ, ಸಂಸ್ಕೃತಿಯನ್ನು ಬಿಂಬಿಸುತ್ತದೆ. ತಮಗೆಲ್ಲರಿಗೂ ಇಷ್ಟವಾಗುತ್ತದೆ ಎಂದರು.
ಈ ಸಿನಿಮಾಕ್ಕೆ ಸಹಕಾರ ನೀಡಿರುವ ಅರವಿಂದ ಪಾಟೀಲ್ ಮಾತನಾಡಿ, ಎಲ್ಲರೂ ಸರ್ಕಾರಿ ನೌಕರಿ ಅಂತ ಹೋದರೆ ಕಷ್ಟವಾಗುತ್ತದೆ. ನಮ್ಮ ಜೀವನವನ್ನು ನಾವು ರೂಪಿಸಿಕೊಳ್ಳಬೇಕು. ಗಂಗಾವತಿ ಪ್ರಾಣೇಶ್ ಅವರ ಸ್ಪೂರ್ತಿಯಿಂದಲೇ ನಾನು ಸುರಕ್ಷಾ ಟೀ ಕಂಪನಿ ಆರಂಭಿಸಿದೆ. ಸ್ವಾಮಿಗಳ ಆರ್ಶಿವಾದರಿಂದ ಅದು ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ. ಇದೀಗ ಫ್ರಾಂಚೈಸಿ ತೆರೆದು ವಿತರಕರಿಗೆ ಜವಬ್ದಾರಿ ನೀಡುತ್ತಿದ್ದೇನೆ. ಇದರಿಂದ ನಿರುದ್ಯೋಗಿಗಳಿಗೆ ಒಂದಷ್ಟು ಕೆಲಸ ಸಿಕ್ಕಂತಾಗುತ್ತದೆ ಎಂದರು.
ಸುರಕ್ಷಾ ಚಹಾ ರುಚಿಯ ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಹೆಸರಲ್ಲೇ ಸುರಕ್ಷತೆ ಅಡಗಿದೆ. ಈ ಸಿನಿಮಾದಲ್ಲಿ ನಾನು ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸುರಕ್ಷಾ ಚಹಾ ಈ ಚಿತ್ರದ ಸನ್ನಿವೇಶಗಳಲ್ಲಿ ಹಾಸು ಹೊಕ್ಕಾಗಿದೆ ಎಂದು ಪದ್ಮಶ್ರೀ ಮಂಜಮ್ಮ ಜೋಗತಿ ಅವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.