Popular Posts

ಬಂಜೆಯ ಮಡಿಲು ತುಂಬಿದ ‘ಬ್ರಹ್ಮಕಮಲ’

ಚಿತ್ರ: ಬ್ರಹ್ಮಕಮಲ
ನಿರ್ದೇಶನ: ಸಿದ್ದು ಪೂರ್ಣಚಂದ್ರ
ಸಂಗೀತ: ಅನಂತ್ ಆರ್ಯನ್
ಛಾಯಾಗ್ರಹಣ: ಲೋಕೇಂದ್ರ ಸೂರ್ಯ
ತಾರಾಗಣ: ಅದ್ವಿತಿ ಶೆಟ್ಟಿ, ಸಿದ್ದು ಪೂರ್ಣಚಂದ್ರ, ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,
ಬಲ ರಾಜವಾಡಿ ಇತರರು.

ನಮ್ಮ ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ನೋವಿನ ಮನ ಮಿಡಿಯುವ ಕಥೆಯನ್ನು ನಿರ್ದೇಶಕ ಸಿದ್ದು ಪೂರ್ಣಚಂದ್ರ, ಬ್ರಹ್ಮ ಕಮಲ ಚಿತ್ರದಲ್ಲಿ ತೆರೆದಿಟ್ಟಿದ್ದಾರೆ.

ಮಕ್ಕಳಾಗದ ಮಹಿಳೆ ಸಮಾಜ ಮತ್ತು ತನ್ನ ಕುಟುಂಬದ ಜನರಿಂದ ಏನೆಲ್ಲ ಅವಮಾನ, ಅಪಮಾನಗಳನ್ನು ಎದುರಿಸಬೇಕಾಗುತ್ತೆ, ಅದಕ್ಕೆ ಪರಿಹಾರವಾಗಿ ಆಕೆ ಕೈಗೊಂಡ ಕಠಿಣ ನಿರ್ಧಾರವೇನು, ಅಲ್ಲದೆ ತನ್ನ ಮಗುವನ್ನು ಉಳಿಸಿಕೊಳ್ಳಲು ಹೆಣ್ಣೊಬ್ಬಳು ಏನೆಲ್ಲ ಯಾತನೆ ಅನುಭವಿಸುತ್ತಾಳೆ ಎಂಬುದನ್ನು ಅದ್ವಿತಿ ಶೆಟ್ಟಿ ಮತ್ತು ಋತುಚೈತ್ರ ಅವರ ಪಾತ್ರಗಳ ಮೂಲಕ ನಿರ್ದೇಶಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಮಕ್ಕಳಾಗದ ಹೆಣ್ಣು ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುವುದು ಇತ್ತೀಚೆಗೆ ಹೆಚ್ಚಾಗಿದೆ. ಅದನ್ನು ಕೆಲವರು ಮುಕ್ತವಾಗಿ ಹೇಳಿಕೊಂಡರೆ, ಕೆಲವರು ಗೌಪ್ಯವಾಗಿಟ್ಟಿರುತ್ತಾರೆ. ಇದೇ ಕಂಟೆಂಟ್ ಮೇಲೆ ಬ್ರಹ್ಮಕಮಲ ಚಿತ್ರದ ಕಥೆಯಿದೆ.

ಅಪೇಕ್ಷಾ (ಅದ್ವಿತಿ) ಮತ್ತು ರಮಣ್​ (ಸಿದ್ದು) ಮದುವೆಯಾಗಿ ಎಂಟು ವರ್ಷಗಳಾದರೂ ಮಕ್ಕಳಾಗಿರಲ್ಲ. ಅತ್ತೆಯ ಕಾಟ ತಾಳದೆ ಗಂಡನ ಮನೆ ತೊರೆದು ಬೇರೆ ಮನೆಯಲ್ಲಿ ವಾಸವಿದ್ದ ಅಪೇಕ್ಷಾ ಮುಂದೆ ಗರ್ಭಿಣಿಯಾಗ್ತಾಳೆ, ಅದ್ದೂರಿಯಾಗಿ ಸೀಮಂತ ಕೂಡ ಮಾಡಿಕೊಳ್ತಾಳೆ. ಮತ್ತೊಂದೆಡೆ ವೆಲ್ಡಿಂಗ್​ ಶಾಪ್​ನಲ್ಲಿ ಕೆಲಸ ಮಾಡುವ ರವಿ(ಲೋಕೇಂದ್ರ ಸೂರ್ಯ) ಆತನ ಪತ್ನಿ ಗೌರಿ(ಋತು ಚೈತ್ರ)ಯ ಕಥೆ ತೆರೆದುಕೊಳ್ಳುತ್ತದೆ. ಗರ್ಭಿಣಿಯಾಗಿದ್ದ ಗೌರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ರವಿ ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಹಣ ಅವಶ್ಯಕತೆಯಿಂದ ರವಿ, ಪತ್ನಿಗೆ ತಿಳಿಸದೇ ತನ್ನ ಮಗುವನ್ನು ಅಪೇಕ್ಷಾಗೆ ನೀಡಲು ಒಪ್ಪಿ ಹಣ ಪಡೆದಿರುತ್ತಾನೆ. ಹೀಗೆ ಸಾಗುವ ಕಥೆ ಮುಂದೆ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಆಟೋ ಚಾಲಕನ ಮನೆಯಲ್ಲಿ ಬಂಧಿಯಾದ ಗೌರಿ ಅಲ್ಲೇ ಮಗುವಿಗೆ ಜನ್ಮ ನೀಡುತ್ತಾಳೆ. ಅಪೇಕ್ಷಾ ತನ್ನಾಸೆಯಂತೆ ಆ ಮಗುವನ್ನು ಪಡೆದಳೇ, ಆಕೆಯ ಗಂಡ, ಅತ್ತೆ ಮಾವ ಆಕೆಯನ್ನು ಮನೆಗೆ ಸೇರಿಸಿದರೇ, ಈ ಎಲ್ಲ ಪ್ರಶ್ನೆಗಳಿಗೆ ಬ್ರಹ್ಮಕಮಲ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉತ್ತರವಿದೆ.

ಮಗುವಿಗಾಗಿ ತವಕಿಸುವ ಮಹಿಳೆಯಾಗಿ ಅದ್ವಿತಿ ಶೆಟ್ಟಿ, ಮೂಗಿ ಗೌರಿಯಾಗಿ ಋತು ಚೈತ್ರ ಅವರ ನಟನೆ ಈ ಚಿತ್ರದ ಹೈಲೈಟ್​. ಹೆಣ್ಣುಮಕ್ಕಳಿಗೆ ಹೆಚ್ಚು ಕನೆಕ್ಟ್ ಆಗುವ ಎಮೋಷನಲ್​ ಡ್ರಾಮಾ ಇದಾಗಿದ್ದು ಫ್ಯಾಮಿಲಿ ಸಮೇತ ಥೇಟರಿಗೆ ಹೋಗಿ ನೋಡಲು ಬ್ರಹ್ಮಕಮಲ ಉತ್ತಮ ಆಯ್ಕೆ.

Leave a Reply

Your email address will not be published. Required fields are marked *