1
1
ಮನೋಜ್ ಅಣ್ಣಯ್ಯ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ‘ಅನಿರೀಕ್ಷಿತ ಅತಿಥಿಗಳು’ ಇದೇ ತಿಂಗಳ 18ರಂದು ತೆರೆ ಕಾಣಲಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರನ್ನು ನಟ ಪ್ರಮೋದ್ ಶೆಟ್ಟಿ ಅವರು ಬಿಡುಗಡೆ ಮಾಡಿದರು. ಈ ಟೀಮ್ ನನಗೆ ರಂಗಭೂಮಿ ದಿನಗಳಿಂದಲೇ ಪರಿಚಯ. ಅದರಲ್ಲೂ ಅನಿರೀಕ್ಷಿತ ಅತಿಥಿಗಳು ಚಿತ್ರದ ಬಗ್ಗೆ ಬೇರೆ ಬೇರೆ ಸಿನಿಮಾ ತಂತ್ರಜ್ಞರು ಹೊಗಳಿ ಮಾತನಾಡುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ ಎಂದರು.
ಟ್ರೇಲರ್ ನಲ್ಲಿ ಕಾಡಿನ ಮಧ್ಯೆ ಇರುವ ಒಂಟಿ ಮನೆಯೊಂದನ್ನು ಕಂಡ ಪ್ರಮೋದ್ ಶೆಟ್ಟಿ “ಇದೇ ಮನೆಯಲ್ಲಿ ರಿಷಬ್ ನಟನೆಯ ‘ಹೀರೋ’ ಸಿನಿಮಾದ ಚಿತ್ರೀಕರಣ ನಡೆದಿತ್ತು. ಅದು ನಮಗೆ ಗೆಲುವು ತಂದುಕೊಟ್ಟಿತ್ತು. ಆ ಮನೆಯಲ್ಲಿ ಅಂಥ ಪಾಸಿಟಿವ್ ಎನರ್ಜಿ ಇದೆ. ನಿಮಗೂ ಅದರ ಗೆಲವು ಸಿಗಲಿ” ಎಂದು ಶುಭ ಹಾರೈಸಿದರು.
ಅನಿರೀಕ್ಷಿತ ಅತಿಥಿಗಳು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಮನೋಜ್ ಅಣ್ಣಯ್ಯ ಮಾತನಾಡಿ ನಮ್ಮ ಚಿತ್ರವನ್ನು ನೋಡುತ್ತಿರುವ ಪ್ರೇಕ್ಷಕರು ತಮ್ಮ ಬದುಕಿನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ, ಮಾತ್ರವಲ್ಲ ನಮ್ಮ ಬದುಕಿನಲ್ಲಿ ಇಂಥ ಕೆಲವು ಘಟನೆಗಳು ನಡೆಯಬಾರದು ಎಂದಾದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎನ್ನುವ ಸಂದೇಶವೂ ಅನಿರೀಕ್ಷಿತ ಅತಿಥಿಗಳು ಚಿತ್ರದಲ್ಲಿದೆ ಎಂದರು.

ಚಿತ್ರದ ನಿರ್ಮಾಪಕ ಬಿ. ವಿನೋದ್ ಕುಮಾರ್ ಮಾತನಾಡಿ ಸಿನಿಮಾದಲ್ಲಿ ಅಭಿನಯಿಸುವ ಆಸಕ್ತಿ ನನಗೆ ಮೊದಲಿಂದಲೂ ಇತ್ತು. ಅದಕ್ಕೆ ತಕ್ಕಂತೆ ಈ ಚಿತ್ರದ ಮೂಲಕ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶವೂ ಲಭಿಸಿದೆ ಎಂದರು.
ಸಾಹಸ ನಿರ್ದೇಶಕ ಶ್ರೀರಾಮ್ ಅವರ ಸಂಯೋಜನೆಯ 4 ಆಕ್ಷನ್ ಚಿತ್ರದಲ್ಲಿವೆ. ಕ್ಲೈಮ್ಯಾಕ್ಸ್ ಸೀನ್ ಅದ್ಭುತವಾಗಿ ಮೂಡಿಬಂದಿದೆ. ಪ್ರಧಾನ ಪಾತ್ರಧಾರಿ ಜಗ್ಗಿಗೆ ನಿಜವಾಗಿಯೂ ಒಂದಷ್ಟು ಏಟಾಗಿತ್ತು ಎಂದು ಶ್ರೀರಾಮ್ ತಿಳಿಸಿದರು.
ಮೈತ್ರಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜತೆ ನಟಿಸಿದ್ದ ಜಗ್ಗಿಗೆ ನಾಯಕನಾಗಿ ನಟಿಸುವ ಆಸೆಯಿತ್ತು. ಅದನ್ನು ಪುನೀತ್ ಅವರಲ್ಲಿ ಹೇಳಿಕೊಂಡಾಗ ಅವರು “ದೇವ್ರಿದ್ದಾನೆ ಹೀರೋ ಆಗ್ತೀಯ ಎಂದಿದ್ದರು” ಎಂದು ಜಗ್ಗಿ ಸ್ಮರಿಸಿಕೊಂಡರು. 109 ಕೆ.ಜಿ ಆಗಿದ್ದ ನಾನು ಈ ಚಿತ್ರಕ್ಕಾಗಿ 72 ಕೆ.ಜಿ. ಆಗಿದ್ದೇನೆ. ನಾಯಕನಾಗುವ ಕನಸು ನನಸಾಗಿದೆ ಎಂದರು.

ಮತ್ತೊಂದು ಪ್ರಧಾನ ಪಾತ್ರ ಶಕ್ತಿಯಾಗಿ ನಟಿಸಿರುವ ವಿವೇಕ್ ಸಿಂಹ ಮಾತನಾಡಿ ಈ ಹಿಂದೆ ‘ಚೂರಿಕಟ್ಟೆ’, ‘ಸ್ಪೂಕಿ ಕಾಲೇಜ್’ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದೆ. ಈ ಚಿತ್ರದಲ್ಲಿ ಪ್ರಧಾನ ಪಾತ್ರದ ಅವಕಾಶ ದೊರಕಿದೆ ಎಂದರು.
ಚಿತ್ರದ ನಾಯಕಿ ಸಂಪ್ರತಿ ಆಳ್ವಾ ಮಾತನಾಡಿ ತನಗೆ ಈ ಪಾತ್ರ ಸಿಗಲು ನಟಿ ಹರಿತ ಶಾ ಕಾರಣ ಎಂದರು. ನಟ ದೈವಿಕ್ ಮಾತನಾಡಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೆ. ನಟನಾಗಿ ಇದು ಮೊದಲ ಚಿತ್ರ ಎಂದರು. ಕಲಾವಿದರಾದ ಶ್ರೀದತ್ತ, ದಯ ಪಲ್ಲವಗೆರೆ ಛಾಯಾಗ್ರಾಹಕ ಎರಿಕ್ , ಸಂಗೀತ ನಿರ್ದೇಶಕ ಸ್ವಾಮಿನಾಥನ್ ಮೊದಲಾದವರು ವೇದಿಕೆ ಮೇಲೆ ಅನಿರೀಕ್ಷಿತ ಅತಿಥಿಗಳು ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡರು.