1
1

ಮೊಗಾಚಿ ಲಾರಂ ಕ್ರಿಯೇಶನ್ ಅಡಿಯಲ್ಲಿ ತಯಾರಾಗಿರುವ ನೀನಿದ್ದರೆ ಎಂಬ ಆಲ್ಬಂ ಸಾಂಗ್ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಹಿರಿಯ ನಟ ರಮೇಶ್ ಭಟ್ ಅವರು ಹಾಡನ್ನು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡುತ್ತಾ, ನಿರ್ಮಾಪಕರು ನನ್ನನ್ನು ಫಾದರ್ ಅಂತ ಸಂಭೋದಿಸುತ್ತಾರೆ. ಆದರೆ ನನಗೆ ಅವರು ಗಾಡ್‌ಫಾದರ್. ಮಂಗಳೂರಿಗೆ ಶೂಟಿಂಗಿಗೆ ಹೋದಾಗ, ತಪ್ಪದೆ ಭೇಟಿಯಾಗುವುದು ಅಲ್ಲದೆ ಉಡುಗೊರೆ ನೀಡುತ್ತಾರೆ. ಇಂಥವರ ಋಣ ತೀರಿಸಲು ಬ್ಯುಸಿ ಇದ್ದರೂ ಬಂದಿರುವೆ ಎಂದರು. ಇದೇ ಸಮಯದಲ್ಲಿ ಟೆನ್ನಿಸ್ ಕೃಷ್ಣ ಮತ್ತು ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಉಪಸ್ಥಿತರಿದ್ದರು. ಮಂಗಳೂರು ಮೂಲದ ನೂರ್ ಬಟ್ ಅವರು ಈ ಹಾಡನ್ನು ನಿರ್ಮಿಸಿದ್ದು, ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ ಅವರು ಸಾಹಿತ್ಯ ರಚಿಸಿ ಸಂಗೀತದ ಜತೆ ನಿರ್ದೇಶನ ಮಾಡಿದ್ದಾರೆ.

ನಾಯಕಿಯ ನೆನಪಿನಾಳದ ಮಾತುಗಳು, ಭಾವನೆಗಳನ್ನು ಈ ಹಾಡಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ತಾಯಿ, ಮಗಳು ಇಬ್ಬರೂ ನಟಿಸಿರುವುದು ವಿಶೇಷ. ನಾಯಕನಾಗಿ ಅವಿಲ್ ರೋಡ್ರೀಗಸ್, ನಾಯಕಿಯಾಗಿ ಕೆರನ್ ಪಿಂಟೋ ಹಾಗೂ ಪ್ರೇಯಸಿಯಾಗಿ ಸ್ಮಿತಾ ಪಿಂಟೋ ಅಭಿನಯಿಸಿದ್ದಾರೆ. ಲಕ್ಷೀಕಾಂತ್ ಅವರ ಛಾಯಾಗ್ರಹಣ, ರಾಜೇಶ್ ಚೌಹಾಣ್ ಅವರ ಸಂಕಲನವಿದ್ದು, ಶಿಲ್ಪ ಕುಟೀನ್ ಹಾಡಿದ್ದಾರೆ. ಹಿಮಗಿರಿ ಎಸ್ಟೇಟ್ ಸುತ್ತಮುತ್ತ ಹಾಡಿನ ಚಿತ್ರೀಕರಣ ನಡೆಸಲಾಗಿದೆ.
ನಿರ್ದೇಶಕ ವಿನ್ಸೆಂಟ್ ಮಾತನಾಡುತ್ತ ಇದೇ ಹಾಡಿನ ಕಾನ್ಸೆಪ್ಟ್ ಇಟ್ಟುಕೊಂಡು ಸಿನಿಮಾ ಮಾಡುವ ಯೋಜನೆಯೂ ಇದೆ. ಅದಕ್ಕೂ ನಿರ್ಮಾಪಕರು ಒಪ್ಪಿಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಮೂರು ತಿಂಗಳಲ್ಲಿ ಚಿತ್ರವೂ ಸೆಟ್ಟೇರಲಿದೆ. ಹನ್ನೊಂದು ವರ್ಷದ ಪ್ರತಿಭೆ ಕೆಮರಿಲ್ ಪಿಂಟೋ ಈ ಹಾಡಿಗೆ ಡ್ರಮ್ ಬಾರಿಸಿದ್ದಾನೆ ಎಂದು ಆತನನ್ನು ಪರಿಚಯಿಸಿದರು.