1
1
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಟರಾಕ್ಷಸ ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಬಹುಭಾಷೆ ತಾರೆ ಪ್ರಿಯಾಂಕಾ ಮೋಹನ್ , ಅದಿತಿ ಬಾಲನ್ ತಾರಾಬಳಗದಲ್ಲಿರುವ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರತಂಡದಿಂದ ಹೊಸ ಅಪ್ ಡೇಟ್ ಸಿಕ್ಕಿದೆ.
ಸಪ್ತಸಾಗರದಾಚೆ ಎಲ್ಲೋ ಖ್ಯಾತಿಯ ಹೇಮಂತ್ ಎಂ. ರಾವ್ ನಿರ್ದೇಶನದ ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಅದರಂತೆ ನಿರ್ದೇಶಕ ಹೇಮಂತ್ ಕೂಡ ಕೆಲಸ ಮಾಡುತ್ತಿದ್ದಾರೆ. ಸದ್ಯ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ರೆಟ್ರೋ ಹಾರ್ಟ್-ಡಿಸ್ಕೋ ಸೋಲ್ ಎಂಬ ಕ್ಯಾಪ್ಷನ್ ಕೊಟ್ಟು ಹೇಮಂತ್ ರಾವ್ ತೆರೆಹಿಂದಿನ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ.

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡ್ತಿದ್ದು, ಕಲಾ ನಿರ್ದೇಶಕ ವಿಶ್ವಾಸ್ ಕಶ್ಯಪ್ ಭರ್ಜರಿಯಾದ ಸೆಟ್ ಹಾಕಿದ್ದಾರೆ. ಈ ಬಗ್ಗೆ ನಿರ್ದೇಶಕ ಹೇಮಂತ್ ಎಂ ರಾವ್, ಇಮ್ರಾನ್ ಸರ್ದಾರಿಯಾ ಹಾಗೂ ವಿಶ್ವಾಸ್ ಕಶ್ಯಪ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಇಮ್ರಾನ್ ಸರ್ದಾರಿಯಾ ಮಾತನಾಡಿ, “ನಿರ್ದೇಶಕ ಹೇಮಂತ್ ಎಂ. ರಾವ್ ಅವರೊಟ್ಟಿಗೆ ಮೊದಲಬಾರಿಗೆ ಕೆಲಸ ಮಾಡುತ್ತಿದ್ದೇನೆ. ನಾನು ಯಾವಾಗಲೂ ಅವರ ದೃಷ್ಟಿಕೋನ, ಅವರು ತಮ್ಮ ನಟರನ್ನು ಪ್ರಸ್ತುತಪಡಿಸುವ ರೀತಿ ಮತ್ತು ಅವರು ಹೆಣೆಯುವ ಕಥೆಗಳಿಗೆ ಅಭಿಮಾನಿ.
ಮೊದಲಬಾರಿಗೆ ಅವರು ವಿಭಿನ್ನವಾದದ್ದನ್ನು ಮಾಡುತ್ತಿದ್ದಾರೆ. ನಾನು ಅದರ ಭಾಗವಾಗಲು ತುಂಬಾ ಉತ್ಸುಕನಾಗಿದ್ದೇನೆ. ಹಾಡನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬ ಬಗ್ಗೆ ವಿಸ್ತಾರವಾದ ಚರ್ಚೆ ನಡೆಸಿದ್ದೇವೆ. ಇದು ಕೇವಲ ಹಾಡಲ್ಲ. ಆದರೆ ಚಿತ್ರದ ನಿರೂಪಣೆಯಲ್ಲಿ ಒಂದು ಅವಿಭಾಜ್ಯ ತುಣುಕು. ಚರಣ್ ರಾಜ್ ಅವರ ಸಂಗೀತಕ್ಕೆ ನೃತ್ಯ ಸಂಯೋಜನೆ ಮಾಡುವುದು ಒಂದು ಉತ್ತಮ ಅನುಭವ. ನಾನು ಚಿತ್ರದ ಒಂದಷ್ಟು ದೃಶ್ಯಗಳನ್ನು ನೋಡಿದ್ದೇನೆ. ಅದನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾಡಲು ವೈಶಾಕ್ ಜೆ ಫಿಲಂಸ್ ಕಾರಣ. ಇದೊಂದು ಕಮರ್ಷಿಯಲ್ ರೆಟ್ರೋ ನಂಬರ್ ಎಂದರು.

ಈಗಾಗಲೇ ಈ ಸಿನಿಮಾದ ಸೆಟ್ ಗಳು ಚಿತ್ರರಂಗದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಕಲಾನಿರ್ದೇಶಕ ವಿಶ್ವಾಸ್ ಕಶ್ಯಪ್, “ಈ ಸೆಟ್ ನ್ನು ಕರ್ವಿಲಿನಿಯರ್ ಜ್ಯಾಮಿತಿ ವಿನ್ಯಾಸದಲ್ಲಿ ನಿರ್ಮಿಸಿದ್ದಣೆವೆ. ನಾವು ಇಲ್ಲಿವರೆಗೆ ಒಂಬತ್ತು ಬೃಹತ್ ಸೆಟ್ ಗಳನ್ನು ನಿರ್ಮಿಸಿದ್ದೇವೆ. ಇದು ಚಿತ್ರದ ನಿರೂಪಣೆಯಲ್ಲಿ ಆಧಾರ ಸ್ಥಳವಾಗಿದೆ. ಈ ಸೆಟ್ ಭಾರತೀಯ ಚಲನಚಿತ್ರ ಸೆಟ್ ಗಳ ರೆಟ್ರೋ ಯುಗಕ್ಕೆ ಒಂದು ಸಂಕೇತವಾಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಈ ಚಿತ್ರ ನಿರ್ಮಾಣವಾಗಲು ನಿರ್ಮಾಪಕ ಡಾ.ವೈಶಾಕ್ ಜೆ ಗೌಡ ಕಾರಣ ಎಂದರು.
ನಿರ್ದೇಶಕ ಹೇಮಂತ್ ಎಂ ರಾವ್ ಮಾತನಾಡಿ, “ನನ್ನ ಹಿಂದಿನ ಚಿತ್ರಗಳಲ್ಲಿ ಈ ರೀತಿಯ ಹಾಡನ್ನು ಎಂದಿಗೂ ಚಿತ್ರೀಕರಿಸಿಲ್ಲ. ಹೈಪರ್-ಕೊರಿಯೋಗ್ರಾಫ್ ಮಾಡಿದ ಕಾರಣಕ್ಕಾಗಿ ದೊಡ್ಡ ಮಟ್ಟದ ಸೆಟ್ ಅನ್ನು ನಿರ್ಮಿಸಿದ್ದೇವೆ ಮತ್ತು ಇದೊಂದು ಅದ್ಭುತ ಅನುಭವವಾಗಿದೆ ” ಎಂದರು.
666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾಗೆ ಹೇಮಂತ್ ಎಂ ರಾವ್ ನಿರ್ದೇಶನದ ಮಾಡ್ತಿದ್ದು, ವೈಶಾಕ್ ಜೆ ಫಿಲ್ಮ್ಸ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ನಿರ್ಮಿಸುತ್ತಿದ್ದಾರೆ. ಧನಂಜಯ, ಡಾ. ಶಿವ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಪರೇಷನ್ ಡ್ರೀಮ್ ಥಿಯೇಟರ್, ಈ ವರ್ಷದ ದ್ವಿತೀಯಾರ್ಧದಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನ, ಇಂಚರ ಸುರೇಶ್ ಅವರ ವಸ್ತ್ರ ವಿನ್ಯಾಸ ಮತ್ತು ಇಮ್ರಾನ್ ಸರ್ದಾರಿಯಾ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.
ಹೈ ಬಜೆಟ್ ಮತ್ತು ವಿಸ್ತಾರವಾದ ಕ್ಯಾನ್ವಾಸ್‌ನಲ್ಲಿ ನಿರ್ಮಿಸಲಾದ ಈ ಚಿತ್ರವನ್ನು ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.