1
1
ಮಾಜಿ ಸಚಿವ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ‘ಜೂನಿಯರ್’. ಇತ್ತೀಚಿಗೆ ಈ ಚಿತ್ರವನ್ನು ಜುಲೈ 18 ರಂದು ಬಿಡುಗಡೆ ಮಾಡಲಾಗುತ್ತೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ಇದೀಗ ಸಿನಿಮಾದ ಮೊದಲ ಹಾಡು ರಿಲೀಸಾಗಿದೆ. ಕನ್ನಡ, ತೆಲುಗು ಭಾಷೆಯಲ್ಲಿ ಆದಿತ್ಯ ಮ್ಯೂಸಿಕ್ ಚಾನೆಲ್ ನಲ್ಲಿ ಈ ಸಾಂಗ್ ಬಿಡುಗಡೆಯಾಗಿದೆ.
ಜೂನಿಯರ್ ಚಿತ್ರದ ಮೊದಲ ಲೆಟ್ಸ್ ಲೀವ್ ದಿಸ್ ಮೋಮೆಂಟ್ ಎಂಬ ಲಿರಿಕಲ್ ವಿಡಿಯೋ ರಿಲೀಸ್ ಈವೆಂಟ್ ಅನ್ನು ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು. ಸಮಾಂಭಕ್ಕೆ ನಟ ರವಿಚಂದ್ರನ್, ಬಾಹುಬಲಿ ಹಾಗೂ ಆರ್ಆರ್ಆರ್ ಸಿನಿಮಾ ಖ್ಯಾತಿಯ ಕ್ಯಾಮರಾಮ್ಯಾನ್ ಕೆ.ಕೆ.ಸೆಂಥಿಲ್ ಕುಮಾರ್, ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್, ನಿರ್ಮಾಪಕ ರಜನಿ ಕೊರಾಪಾಟಿ, ನಿರ್ದೇಶಕ ರಾಧಾಕೃಷ್ಣ ಸೇರಿದಂತೆ ಇಡೀ ಚಿತ್ರತಂಡ ಸಾಕ್ಷಿಯಾಗಿತ್ತು.

ಈ ಸಂದರ್ಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ರಾಧಾಕೃಷ್ಣ ಅವರ ಹತ್ತಿರ ಒಳ್ಳೆಯ ಗುಣವಿದೆ. ಅವರು ಕಥೆ ಹೇಳುವಾಗ ಕಿವಿಯಲ್ಲಿ ಪಿಸುಗುಟ್ಟಿದ ರೀತಿ ಇದೆ. ಆ ಕಥೆ ಮನಸ್ಸನ್ನು ತಟ್ಟುತ್ತದೆ. ಇದು ನಿಮಗೆಲ್ಲಾ ಜೂನಿಯರ್. ನನಗೆ ಮಾತ್ರ ಇದು ಮೈ ಜೂನಿಯರ್. ಡಬ್ ಮಾಡುವಾಗ ನೋಡಿ ಇದು ಹ್ಯಾಪಿ ಜರ್ನಿ ಎನಿಸಿತು. ಒಂದು ಸಿನಿಮಾ ಆಗುವಾಗ ಎಷ್ಟು ಟೈಮ್ ತೆಗೆದುಕೊಳ್ಳುತ್ತದೆ ಎನ್ನುವುದು ಮುಖ್ಯವಲ್ಲ. ಬದಲಿಗೆ ಹೇಗೆ ಪ್ರೇಕ್ಷಕರನ್ನು ಕೂರಿಸುತ್ತದೆ ಎನ್ನುವುದು ಮುಖ್ಯ. ಈ ಹುಡ್ಗನಿಗೆ ಕಥೆ ಆರಿಸಿಕೊಳ್ಳುವ ಧೈರ್ಯ ಇದೆ. ತಾನು ಹೀರೋ ಆಗಬೇಕು. ಪಾತ್ರ, ಮೇಕಿಂಗ್, ಮೂಲಕ ಹೀರೋ ಆಗಬೇಕು ಎನ್ನುವ ಏಮ್ ಆತನಲ್ಲಿದೆ. ಹೊಸದಾಗಿ ಬರುವ ಯೂಥ್ಸ್ ಇಂಥ ಫ್ಯಾಮಿಲಿ ಕಾನ್ಸೆಪ್ಟ್, ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುವುದು ತುಂಬಾ ಕಡಿಮೆ ಎಂದರು.
ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮಾತನಾಡಿ, ಈ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ಕಿರೀಟಿ ಒಳ್ಳೆಯ ಕಥೆ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಎಮೋಷನಲ್ ಕಥೆ ಇದೆ. ಪವನ್ ಭಟ್ ಕನ್ನಡದಲ್ಲಿ ಹಾಡು ಹಾಡಿದ್ದಾರೆ. ಇಡೀ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಸೆಂಥಿಲ್ ಈ ಚಿತ್ರಕ್ಕೆ ಕೆಲಸ ಮಾಡಿದ್ದು, ಚಿತ್ರದ ದೊಡ್ಡ ಬಲ ಸಿಕ್ಕಂತಾಗಿದೆ ಎಂದರು.

ನಟ ಕಿರೀಟಿ ಮಾತನಾಡಿ, ಸಿನಿಮಾ ಮೂರು ವರ್ಷ ತಡವಾಗಿದೆ. ಅದಕ್ಕೆ ಕಾರಣ ಫೈಟ್ ಮಾಡುವಾಗ ನನ್ನ ಬೆನ್ನಿಗೆ ಇಂಜೂರಿ ಆಗಿತ್ತು. ಅದು ಬಿಟ್ಟರೆ ಬೇರೆ ಕಾರಣವಿಲ್ಲ.. ರವಿ ಸರ್ ಜೊತೆ ಇಪ್ಪೈದು ದಿನ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರ ಜೊತೆ ತುಂಬಾ ಕಲಿತುಕೊಂಡೆ. ಶ್ರೀಲೀಲಾ, ಜೆನಿಲಿಯಾ ಚಿತ್ರದಲ್ಲಿ ಒಳ್ಳೆಯ ಪಾತ್ರಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ನಿರ್ದೇಶಕ ರಾಧಾಕೃಷ್ಣ ಮಾತನಾಡಿ, ಚಿತ್ರದಲ್ಲಿ ದೊಡ್ಡ ಲೆಜೆಂಡರಿಗಳು ಕೆಲಸ ಮಾಡಿರುವುದು ಜೂನಿಯರ್ ಸೇಫ್ ಎಂದರ್ಥ. ದೇವಿಶ್ರೀ ಅವರ ಜೊತೆ ಕೆಲಸ ಮಾಡಿರುವುದು ನೆನಪಿನಲ್ಲಿ ಉಳಿಯುವಂಥದ್ದು, ಚಿತ್ರದ ಪ್ರತಿ ಫ್ರೇಮ್ ಕೂಡ ಸ್ಪೆಷಲ್ ಅಗಿದೆ ಎಂದು ತಿಳಿಸಿದರು.
ಲೆಟ್ಸ್ ಲೀವ್ ದಿಸ್ ಮೂವೆಂಟ್ ಎಂದು ಕಿರೀಟಿ ಶ್ರೀಲೀಲಾ ಹೆಜ್ಜೆ ಹಾಕಿರುವ ಈ ಹಾಡಿಗೆ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದು, ಕನ್ನಡದಲ್ಲಿ ಪವನ್ ಭಟ್ ಸಾಹಿತ್ಯ ಬರೆದಿದ್ದಾರೆ. ನಕುಲ್ ಅಭಯಂಕರ್ ಧ್ವನಿಯಾಗಿದ್ದಾರೆ. ಮಾಯಾಬಜಾರ್ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಅವರ ನಿರ್ದೇಶನ ಜೂನಿಯರ್ ಸಿನಿಮಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲಂ ಪ್ರೊಡಕ್ಷನ್ ಕಿರೀಟಿಯ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಗ್ ಬಜೆಟ್‌ನಲ್ಲಿ ನಿರ್ಮಿಸಿದೆ. ಬಹುದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದ ಹೈಲೈಟ್.
ಜೂನಿಯರ್ ಸಿನಿಮಾದ ತಾಂತ್ರಿಕ ಬಳಗ ಶ್ರೀಮಂತಿಕೆಯಿಂದ ಕೂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಅವರ ಸಂಗೀತ, ಬಾಹುಬಲಿ ಖ್ಯಾತಿಯ ಕೆ. ಸೆಂಥಿಲ್ ಕುಮಾರ್ ಅವರ ಕ್ಯಾಮರಾ ವರ್ಕ್,
ಪೀಟರ್ ಹೆನ್ಸ್ ಅವರ ಸಾಹಸ ಸಂಯೋಜನೆ ಈ ಸಿನಿಮಾಗಿದೆ. ಸಾಕಷ್ಟು ವಿಶೇಷತೆಯಿಂದ ಕೂಡಿರುವ ಜೂನಿಯರ್ ಜುಲೈ 18ರಂದು ತೆರೆಗಪ್ಪಳಿಸಲಿದೆ.