1
1
ರೇಟಿಂಗ್ : 4 /5
ಚಿತ್ರ : ತೀರ್ಥರೂಪ ತಂದೆಯವರಿಗೆ
ನಿರ್ದೇಶಕ : ರಾಮೇನಹಳ್ಳಿ ಜಗನ್ನಾಥ್
ನಿರ್ಮಾಣ : ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್
ಸಂಗೀತ : ಜೋ ಕೋಸ್ಟ,
ಛಾಯಾಗ್ರಹಣ : ದೀಪಕ್ ಯರಗೇರಾ
ತಾರಾಗಣ : ನಿಹಾರ್ ಮುಕೇಶ್ , ರಚನಾ ಇಂದರ್, ಸಿತಾರಾ(ಹಾಲುಂಡ ತವರು)
ರಾಜೇಶ್ ನಟರಂಗ, ರವೀಂದ್ರ ವಿಜಯ್, ಅಜಿತ್ ಹಂಡೆ ಹಾಗೂ ಇತರರು..
ಜೀವನದಲ್ಲಿ ತಂದೆ, ತಾಯಿಯ ಮೌಲ್ಯ, ಸಂಬಂಧಗಳ ಹುಡುಕಾಟ, ಯವ್ವನದ ಅಮಲಲ್ಲಿ ಮಗಳು ಮಾಡುವ ಒಂದು ತಪ್ಪು ಆ ಸುಂದರ ಕುಟುಂಬವನ್ನು ಹೇಗೆ ಛಿದ್ರ ಛಿದ್ರ ಮಾಡಿತು, ಮಾನ ಮರ್ಯಾದೆಯನ್ನೇ ಬದುಕಾಗಿಸಿಕೊಂಡ ತಂದೆ, ಮಗನ ನಡುವಿನ ಪಯಣದ ಕಥೆಯನ್ನು ನಿರ್ದೇಶಕ ರಾಮೇನಳ್ಳಿ ಜಗನ್ನಾಥ್ ಅವರು ತಮ್ಮ ತೀರ್ಥರೂಪ ತಂದೆಯವರಿಗೆ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ.
ತನ್ನ ಅರ್ಥಪೂರ್ಣ ವಿಡಿಯೋ ಬ್ಲಾಗ್ಸ್ ಮೂಲಕ ತನ್ನದೇ ಅಭಿಮಾನಿ ವರ್ಗವನ್ನು ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಸಿಕೊಂಡ ನಾಯಕ ಪೃಥ್ವಿ (ನಿಹಾರ್ ಮುಖೇಶ್) ಗೆಳೆಯರ ಬಳಗದ ಜತೆ ಖುಷಿಯಾಗಿರುತ್ತಾನೆ. ಗಂಡನಿಂದ ದೂರಾಗಿ ಮುತ್ತಿನಂಥ ಮಗನನ್ನು ಬೆಳೆಸಿದ ಜಾನಕಿ (ಸಿತಾರ) ಕಂಡರೆ ಪೃಥ್ವಗೆ ಕೋಪವಿರುತ್ತದೆ. ಅದಕ್ಕೆ ಕಾರಣ ಆಕೆ ಶಿವಶಂಕರ(ರಾಜೇಶ್ ನಟರಂಗ)ನ ಜತೆ ಇಟ್ಟಿಕೊಂಡಿರುವ ಸಲುಗೆ. ಅದನ್ನು ಬೇರೆ ಥರ ತಿಳಿದುಕೊಂಡ ಜನರು ಫೃಥ್ಬಿಯನ್ನ ಆಗಾಗ ರೇಗಿಸುತ್ತಲೇ ಇರುತ್ತಾರೆ.

ಇದರಿಂದ ಪೃಥ್ವಿ ಗೊಂದಲಕ್ಕೀಡಾಗಿರುತ್ತಾನೆ. ಇದವನಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಈ ನಡುವೆ ಪೃಥ್ವಿಯ ವಿಡಿಯೋಗಳ ಅಭಿಮಾನಿ ಅಕ್ಷರ (ರಚನಾ ಇಂದರ್) ಭೇಟಿಯಾಗುತ್ತಾಳೆ , ಪರಿಚಯ ಪ್ರೀತಿಯಾಗುತ್ತೆ. ಒಮ್ಮೆ ಆಕೆ ಪೃಥ್ವಿಯನ್ನು ಮನೆಗೆ ಕರೆದುಕೊಂಡು ಹೋದಾಗ, ಆಕೆ ಪತ್ರಕರ್ತ ರವಿ ರಾಮನಾಥಪುರ (ಅಜಿತ್ ಹಂಡೆ) ಅವರ ಮಗಳೆಂದು ತಿಳಿಯುತ್ತೆ. ನಂತರ ಪೃಥ್ವಿ ಆಕೆಯಿಂದ ದೂರ ಉಳಿಯಲು ಪ್ರಯತ್ನಿಸುತ್ತಾನೆ. ಅದಕ್ಕೆ ಕಾರಣ ರವಿ ತಮ್ಮ ಪತ್ರಿಕೆಯಲ್ಲಿ ಬರೆದ ಲೇಖನ. ಭೌತಶಾಸ್ತ್ರ ಉಪನ್ಯಾಸಕ ( physics teacher ) ಶಿವಶಂಕರ್ (ರವೀಂದ್ರ ವಿಜಯ್) ಅವರ ಮಗಳು ರಮ್ಯ ತನ್ನ ಲವರ್ ಜತೆ ಏಕಾಂತದಲ್ಲಿದ್ದ ವಿಡಿಯೋವನ್ನು ಆ ಪ್ರೇಮಿಯೇ ಹೊರಬಿಟ್ಟಿರುತ್ತಾನೆ. ಅದನ್ನು ರವಿ ತನ್ನ ಪತ್ರಿಕೆಯಲ್ಲಿ ಪ್ರಕಟೆಸುತ್ತಾನೆ. ನಂತರ ಸಮಾಜದಲ್ಲಿ ತಲೆಎತ್ತಿ ಬದುಕಲಾಗದೆ ಅವಮಾನದಿಂದ ಮಡದಿ, ಮಕ್ಕಳನ್ನ ಬಿಟ್ಟು
ಶಿವಶಂಕರ್ ದೇಶಾಂತರ ಹೋಗುತ್ತಾನೆ. ನಂತರ ರವಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮಾಪಣೆ ಪತ್ರ ಪ್ರಕಟಿಸುತ್ತಾನೆ. ಆದರೆ ಹೋದ ಮಾನ ಮರಳಿ ಬರಲಾರದು. ಆ ಪತ್ರಕರ್ತನ ಮಗಳೇ ಅಕ್ಷರ. ರವಿ ಸಾಯುವ ಮುನ್ನ ಬರೆದ ಪತ್ರ ಅಕ್ಷರ ಕೈ ಸೇರುತ್ತದೆ. ಹಾಗೆಯೇ ಪೃಥ್ವಿಗೆ ತಾನು ಶಿವಶಂಕರನ ಮಗ ಎಂಬ ಸತ್ಯ ತಿಳಿಯುತ್ತದೆ. ತನ್ನ ತಂದೆಯನ್ನು ಹೇಗಾದರೂ ಪತ್ತೆ ಹಚ್ಚಲೇಬೇಕೆಂದು ನಿರ್ಧರಿಸಿದ ಪೃಥ್ವಿಗೆ, ಆ ಹುಡುಕಾಟದ ಹಾದಿಯಲ್ಲಿ ಏನೇನೆಲ್ಲಾ ಸಿಗುತ್ತದೆ ಎನ್ನುವುದೇ ತೀರ್ಥರೂಪ ತಂದೆಯವರಿಗೆ ಚಿತ್ರದ ಕಥಾಹಂದರ.
ಇಡೀ ಕಥೆಯನ್ನ ಕಟ್ಟಿಕೊಟ್ಟಿರುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸವರ ಯೋಚನೆ, ಆಲೋಚನೆ ಅದ್ಭುತವಾಗಿದೆ. ಸಂಬಂಧಗಳ ನಂಟು , ಪ್ರೀತಿಯ ಸೆಳೆತ, ಪಶ್ಚಾತಾಪದ ಕೊರಗು ಹೀಗೆ ಒಂದಷ್ಟು ಸೂಕ್ಷ್ಮವಿಚಾರಗಳ ಸುತ್ತ ಹೆಣೆದಿರುವ ಚಿತ್ರಕಥೆ ನೋಡುಗರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇನ್ನು ಮಲೆನಾಡ ಸೊಬಗನ್ನು ಸುಂದರವಾಗಿ ಸೆರೆ ಹಿಡಿದಿರುವ ಅದ್ಭುತವಾದ ಫೋಟೋಗ್ರಫಿ, ಹಾಡುಗಳಿಗೆ ಸುಮಧುರವಾದ ಸಂಗೀತ ಹಾಗೂ ಚಿತ್ರದ ಎಡಿಟಿಂಗ್ ಗಮನ ಸೆಳೆಯುತ್ತದೆ. ನಾಯಕನಾಗಿ ನಿಹಾರ್ ಮುಕೇಶ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಟಿ ರಚನಾ ಇಂದರ್ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಹಿರಿಯ ನಟಿ ಸೀತಾರ ತಾಯಿಯಾಗಿ ಮನ ಮುಟ್ಟುವಂತೆ ಅಭಿನಯಿಸಿದ್ದಾರೆ. ಹಾಗೆಯೇ ರಾಜೇಶ ನಟರಂಗ ಕೂಡ ಎಂದಿನಂತೆ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಇಡೀ ಚಿತ್ರದ ಹೈಲೈಟ್ ಎಂದರೆ ರವೀಂದ್ರ ವಿಜಯ್ ಅವರ ಪಾತ್ರ, ತುಂಬಾ ಅದ್ಭುತವಾಗಿದೆ.
ಅಜಿತ್ ಹಂಡೆ , ಗಿರಿ ಶಿವಣ್ಣ , ಅಶ್ವಿತಾ .ಆರ್. ಹೆಗ್ಡೆ ಸೇರಿದಂತೆ ಎಲ್ಲರೂ ತಂತಮ್ನ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕ್ಲಾಸ್, ಮಾಸ್ ಹೀಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನು ಈ ಚಿತ್ರ ಕಾಡುತ್ತದೆ.