1
1
ಹಿರಿಯ ನಟ ಕ.ಸುಚೇಂದ್ರ ಪ್ರಸಾದ್ ಅವರು ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಪದ್ಮಗಂಧಿ. ಈ ಚಿತ್ರದ ಕನ್ನಡ, ಸಂಸ್ಕ್ರತ ಮತ್ತು ಹಿಂದಿ ಭಾಷೆಯ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಸಂಗೀತಪ್ರಿಯರ ಗಮನ ಸೆಳೆದಿವೆ. ಮಾಜಿ ಎಂಎಲ್ಸಿ, ಅಂಕಣಕಾರ್ತಿ, ಸಂಸ್ಕ್ರತ ಭೂಮಿಕೆಯಲ್ಲಿ ನಾನಾ ದಿಕ್ಕಿನಲ್ಲಿ ಅಧ್ಯಯನ ನಡೆಸಿರುವ ನಿವೃತ ಪ್ರೊಫೆಸರ್ ಎಸ್.ಆರ್.ಲೀಲಾ ಅವರ ರಚನೆ ಹಾಗೂ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ.

ಪದ್ಮಗಂಧಿ ಚಿತ್ರದಲ್ಲಿ ವಿದ್ಯಾರ್ಥಿಯಾಗಿ ಕು.ಮಹಾಪದ್ಮ, ಗುರುಮಾತೆ ಪಾತ್ರದಲ್ಲಿ ಉಡುಪಿಯ ಪರಿಪೂರ್ಣ ಚಂದ್ರಶೇಖರ್ ಇವರೊಂದಿಗೆ ಶತಾವಧಾನಿ ಡಾ.ಆರ್.ಗಣೇಶ್, ಡಾ.ಗೌರಿ ಸುಬ್ರಹ್ಮಣ್ಯ (ಧರ್ಮಾಧಿಕಾರಿಗಳು, ಮುಕ್ತಿನಾಗ ದೇವಸ್ಥಾನ), ಡಾ.ಪ್ರೇಮಾ, ಡಾ.ಹೇಮಂತ್ ಕುಮಾರ್, ಆಚಾರ್ಯ ಮೃತ್ಯುಂಜಯ ಶಾಸ್ತ್ರಿ, ಜಿ.ಎಲ್. ಭಟ್ (ಶಿಲ್ಪಜ್ಞ), ಮೃತ್ಯುಂಜಯಶಾಸ್ತ್ರಿ, ಪಂಡಿತ ಪ್ರಸನ್ನವೈದ್ಯ, ಡಾ.ದೀಪಕ್ ಪರಮಶಿವನ್, ಹೇಮಂತ್ ಕುಮಾರ.ಜಿ ಈ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ಚಿತ್ರಕ್ಕೆ ಹಿರಿಮೆ ತಂದುಕೊಟ್ಟಿದೆ. ಡಾ.ದೀಪಕ್ ಪರಮಶಿವನ್ ಅವರ ಸಂಗೀತ ಸಂಯೋಜನೆ, ಮನು ಯಪ್ಲಾರ್, ನಾಗರಾಜ್ ಅದ್ವಾನಿ, ಗಿರಿಧರ ದಿವಾನ್ ಅವರ ಛಾಯಾಗ್ರಹಣ, ಎನ್.ನಾಗೇಶ್ ನಾರಾಯಣಪ್ಪ ಅವರ ಸಂಕಲನ. ಈ ಚಿತ್ರಕ್ಕಿದೆ.

ಪದ್ಮಗಂಧಿ ಚಿತ್ರವು ಆದಿಯಿಂದ ಅಂತ್ಯದವರೆಗೂ ಪದ್ಮಗಂಧಿಯ ಪರಿಮಳವನ್ನು ಪಸರಿಸುತ್ತಲೇ ಸಾಗುತ್ತದೆ. ದೈವೀಕ ಗಂಧ ಮೆತ್ತಿಕೊಂಡಿರುವ ಕಮಲದ ಹೂವಿನ ಬಗ್ಗೆಯೇ ಈ ಚಿತ್ರದ ಕಥೆ ಇರುವುದು ವಿಶೇಷ. ನಮ್ಮಲ್ಲಿ ದೈವೀಕ ಅನುಭೂತಿ ಸ್ಪುರಿಸುವ ಕಮಲ ಪುಷ್ಪದ ಬಗ್ಗೆ ಆಳವಾಗಿ ಅರಿವಿನ ಪರಿಧಿಯನ್ನು ವಿಸ್ತಿರಿಸಿಕೊಳ್ಳುತ್ತಾ, ಅದರ ಅಗಾಧತೆ ಮೊಗೆದರೂ ಮುಗಿಯದ ಅಕ್ಷಯ ಪಾತ್ರಯಂತೆ ಭಾಸವಾಗಲಾರಂಭಿಸಿದೆ. ಇದೆಲ್ಲವನ್ನು ಸಂಶೋಧಿಸಿ ವಿಷಯಗಳನ್ನು ಚಿತ್ರದ ಸನ್ನಿವೇಶಗಳಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕರು ನನ್ನ ಮನಸ್ಸಿನಲ್ಲಿರುವಂತೆ ತೆರೆ ಮೇಲೆ ತೋರಿಸಿದ್ದಾರೆ. ನೀವು ನಮ್ಮಂಥ ಸಣ್ಣ ಚಿತ್ರಗಳಿಗೆ ಪ್ರಚಾರ ನೀಡಿದರೆ, ನಮ್ಮ ಶ್ರಮ ಸಾರ್ಥಕವಾದಂತೆ ಎಂದು ನಿರ್ಮಾಪಕಿ ಎಸ್.ಆರ್.ಲೀಲಾ ಆವರು ವೇದಿಕೆಯಲ್ಲಿ ಹೇಳಿದರು.
ಅಂದಹಾಗೆ ಈ ಚಿತ್ರವನ್ನು ಇದೇ ತಿಂಗಳ ಕೊನೆಯಲ್ಲಿ ತೆರೆಗೆ ತರಲು ಸುಚಿತ್ ಫಿಲಂಸ್ನ ವೆಂಕಟ್ಗೌಡ ಅವರು ಯೋಜನೆ ಹಾಕಿಕೊಂಡಿದ್ದಾರೆ.
