1
1
ಖಾಕಿಯಲ್ಲಿ ಕಿಚ್ಚನ ಖದರ್ ಒಂದೇ ವೇದಿಕೇಯಲ್ಲಿ ಚಿತ್ರರಂಗ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಮಾರ್ಕ್ ಇದೇ ತಿಂಗಳ 25ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಟ್ರೈಲರ್ ಭಾನುವಾರ ಬೆ.11-55ಕ್ಕೆ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಮೈಸೂರು, ದಾವಣಗೆರೆ, ಶಿವಮೊಗ್ಗ, ಚಾಮರಾಜನಗರ ಸೇರಿದಂತೆ ಐದು ಜಿಲ್ಲೆಗಳ ಪ್ರಮುಖ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲೂ ಟ್ರೈಲರ್ ರಿಲೀಸಾಗಿದೆ.
ಬೆಂಗಳೂರಿನ ಸಮಾರಂಭದಲ್ಲಿ ಜೋಗಿ ಪ್ರೇಮ್, ಆರ್.ಚಂದ್ರು, ಎ.ಪಿ.ಅರ್ಜುನ್, ಸಿಂಪಲ್ ಸುನಿ, ಅನೂಪ್ ಭಂಡಾರಿಯಂಥ ಸ್ಟಾರ್ ನಿರ್ದೇಶಕರುಗಳು ಭಾಗಿಯಾಗಿ ಕಿಚ್ಚನಿಗೆ ಶುಭ ಹಾರೈಸಿದರು. ಅಲ್ಲದೆ ಸುದೀಪ್ ಅವರ ಸಿಸಿಎಲ್ ಗೆಳೆಯರಾದ ಜೆಕೆ, ಚಂದನ್,ಡಾರ್ಲಿಂಗ್ ಕೃಷ್ಣ, ಉಗ್ರಂ ಮಂಜು ಕೂಡ ಹಾಜರಿದ್ದು ಶುಭ ಕೋರಿದರು.

ಟ್ರೇಲರ್ ಬಿಡುಗಡೆ ಬಳಿಕ ನಟ ಕಿಚ್ಚ ಸುದೀಪ್ ಮಾತನಾಡಿ, ವಿಜಯ್ ಕಾರ್ತಿಕೇಯ ಹಾಗೂ ಶೇಖರ್ ಚಂದ್ರ ಆರು ತಿಂಗಳು ನಿದ್ರೆ ಮಾಡದೇ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನನ್ನ ಮಾತಿಗೆ ಧೃಡವಾಗಿ ನಿಂತಿದ್ದು ನನ್ನ ಇಡೀ ತಂಡ. ಟೆಕ್ನಿಕಲ್ ಟೀಂ ಹಾಗೂ ಇಡೀ ಕಲಾವಿದರು.
ಒಮ್ಮೆ ವಿಜಯ್ ಜತೆ ಮಾತಾಡ್ತಿರುವಾಗ ಈ ಥಾಟ್ ಹೊಳೆಯಿತು. ಮ್ಯಾಕ್ಸ್, ಮಾರ್ಕ್ ನಲ್ಲಿ ಕೆಲ ತಂತ್ರಜ್ಞರು, ಕಲಾವಿದರು ಅವರೇ ಇರಬಹುದು. ಆದರೆ ಎರಡೂ ಚಿತ್ರಗಳ ಕಥೆ, ನಿರೂಣೆ ಬೇರೆ ಬೇರೆನೇ.
ದೀಪಾವಳಿ ಬಂದರೆ ಕರ್ನಾಟಕದಲ್ಲಿ ಎಲ್ಲರ ಮನೆಯಲ್ಲಿಯೂ ಹಬ್ಬ. ಮಾರ್ಕೆಟ್ ನಲ್ಲಿ ಯಾವತ್ತು ತರಕಾರಿ, ಕಮ್ಮಿಯಾಗಲ್ಲ. ಇನ್ನು ಎರಡು ಸಿನಿಮಾ ರಿಲೀಸಾದಾಗ ಥೇಟರ್ ಗಳು ಹೇಗೆ ಕಡಿಮೆಯಾಗುತ್ತವೆ ಎಂದು 45 ಚಿತ್ರದ ಜತೆ ತಮ್ಮ ಸಿನಿಮಾ ರಿಲೀಸಾಗುತ್ತಿರುವ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಿದರು. ನಂತರ ಶೂಟಿಂಗ್ ಜರ್ನಿ ಬಗ್ಗೆ ಮಾತನಾಡಿದ ಅವರು, ನಾಲ್ಕು ತಿಂಗಳು ಐದು ದಿನ ನಿರಂತರ ಶೂಟಿಂಗ್ ಮಾಡಿದ್ದೇವೆ. 80 ಲೋಕೇಷನ್, 15-20 ಸೆಟ್ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಇಡೀ ಚಿತ್ರರಂಗ ಇವತ್ತು ಈ ವೇದಿಕೆಯಲ್ಲಿದೆ. ಈ ರೀತಿಯ ಕಾರ್ಯಕ್ರಮ ತಿಂಗಳಲ್ಲಿ ಮೂರ್ನಾಲ್ಕು ನಡೆಯುತ್ತಿವೆ. ಇದು ಉತ್ತಮ ಆ ಚಿತ್ರರಂಗಕ್ಕೆ ಮಾದರಿಯಾಗಲಿದೆ. ಇದನ್ನು ಎಲ್ಲ ಸ್ಟಾರ್ಗ ಗಳೂ ಅನುಸರಿಸಲಿ ಎಂದು ಹೇಳಿದರು. ನಿರ್ದೇಶಕ ವಿಜಯ್ ಅವರದ್ದು ಎರಡನೇ ಚಿತ್ರ, ಚೆನ್ನಾಗಿ ಮಾಡಿದ್ದಾರೆ. ಸತ್ಯ ಜ್ಯೋತಿ ಫಿಲಂಸ್ ತಮಿಳುನಾಡಿನಲ್ಲಿ ದೊಡ್ಡ ಬ್ಯಾನರ್. ಅಂಥವರು ಸುದೀಪ್ ಅವರ ಜೊತೆ ಚಿತ್ರ ಮಾಡಿರುವುದು ಖುಷಿಯ ವಿಚಾರ ಎಂದರು.
ವಿಜಯ್ ಕಾರ್ತಿಕೇಯನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಾನವ ಕಳ್ಳ ಸಾಗಾಣಿಕೆಯ ಸುತ್ತ ನಡೆಯುವ ಕಥಾಹಂದರ ಈ ಚಿತ್ರದಲ್ಲಿರೋದು ಟ್ರೈಲರ್ ನೋಡಿದರೆ ಅರ್ಥವಾಗುತ್ತಿದೆ. ಇದರ ಜೊತೆಗೆ ಪೊಲಿಟಿಕಲ್ ಡ್ರಾಮಾ ಅಂಶಗಳನ್ನು ಸೇರಿಸಿ ಟ್ರೇಲರ್ ಕಟ್ ಮಾಡಲಾಗಿದೆ.
ಪೊಲೀಸ್ ಅಜಯ್ ಮಾರ್ಕಂಡೇಯ ಅಲಿಯಾಸ್ ‘ಮಾರ್ಕ್’ ಆಗಿ ಕಿಚ್ಚ ಅಬ್ಬರಿಸಿದ್ದಾರೆ. ಯೋಗಿ ಬಾಬು, ಮಹಾಂತೇಶ್ ಹಿರೇಮಠ್, ನವೀನ್ ಚಂದ್ರ, ಗುರು ಸೋಮಸುಂದರಂ, ಸಂಪತ್ ಮೈತ್ರೇಯ ಮತ್ತು ರೋಶಿನಿ ಪ್ರಕಾಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ, ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸತ್ಯಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮಾರ್ಕ್ ಸಿನಿಮಾ ನಿರ್ಮಾಣವಾಗಿದೆ. ಸುದೀಪ್ ಕೂಡ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
ಕೆಆರ್ ಜಿ ಜೊತೆಗೂಡಿ ಮಾರ್ಕ್ ವಿತರಣೆ ಮಾಡಲಿದ್ದಾರೆ ಪ್ರಿಯಾ ಸುದೀಪ್. ವಿಶೇಷತೆ ಏನೆಂದರೆ ಮಾರ್ಕ್ ಚಿತ್ರವನ್ನು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ವಿತರಣೆ ಮಾಡಲಿದ್ದಾರೆ. ಈ ಮೂಲಕ ನಿರ್ಮಾಣದ ಜೊತೆ ವಿತರಣೆಗೂ ಪ್ರಿಯಾ ಕಾಲಿಟ್ಟದ್ದಾರೆ. ಕೆಆರ್ ಜೆ ಜೊತೆಗೂಡಿ ಪ್ರಿಯಾ ಸುದೀಪ್ ಅವರು, ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಮಾರ್ಕ್ ವಿತರಣೆ ಮಾಡಲಿದ್ದಾರೆ.