Popular Posts

ಡಿ. 11ಕ್ಕೆ ದರ್ಶನ್ ಅಭಿನಯದ “ದಿ ಡೆವಿಲ್”

ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಮಿಲನ ಖ್ಯಾತಿಯ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ “ದಿ ಡೆವಿಲ್” ಇದೇ ತಿಂಗಳ 11 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಚಿತ್ರತಂಡದ ಸದಸ್ಯರು “ದಿ ಡೆವಿಲ್” ಚಿತ್ರದ ಕುರಿತಂತೆ ಮಾತನಾಡಿದರು.

ಡಿ. 11 ರಂದು ನಮ್ಮ “ದಿ ಡೆವಿಲ್” ಚಿತ್ರ ಬಿಡುಗಡೆಯಾಗುತ್ತಿದೆ. ರಿಲೀಸ್ ಗೆ ಇಷ್ಟು ಹತ್ತಿರದಲ್ಲಿ ನಾವು ಪತ್ರಿಕಾಗೋಷ್ಠಿ ಮಾಡಲು ಕಾರಣವಿದೆ. ದರ್ಶನ್ ಬಂದೇ ಬರುತ್ತಾರೆ, ಅವರ ಜೊತೆಗೇ ಪತ್ರಿಕಾಗೋಷ್ಠಿ ಮಾಡೋಣ ಎಂಬ ಉದ್ದೇಶದಿಂದ ತಡವಾಯಿತು. ದರ್ಶನ್ ಅವರ ಅನುಪಸ್ಥಿತಿ ನಮಗೆಲ್ಲ ಬಹಳ ಕಾಡುತ್ತಿದೆ. ದರ್ಶನ್ ನನ್ನೊಂದಿಗಿದ್ದರೆ, ಒಂದು ರೀತಿ ಆನೆಬಲ. ಈ ಚಿತ್ರದ ಬಗ್ಗೆ ದರ್ಶನ್ ಜೊತೆಗೆ 2018 ರಲ್ಲೇ ಚರ್ಚಿಸಿದ್ದೆ. ಆನಂತರ ಕೋವಿಡ್ ಬಂತು. ಆಮೇಲೆ “ಕಾಟೇರ” ಶುರುವಾಯಿತು. ಎರಡು ವರ್ಷಗಳ ಹಿಂದೆ ಆರಂಭವಾದ “ದಿ ಡೆವಿಲ್” ಚಿತ್ರವೀಗ ರಿಲೀಸ್ ಹಂತಕ್ಕೆ ಬಂದಿದೆ. ದರ್ಶನ್ ಸೇರಿದಂತೆ ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಅವರ ಸಂಗೀತದ ಐದು ಹಾಡುಗಳು ಚಿತ್ರದಲ್ಲಿದೆ. “ಸರಿಗಮ” ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಈಗಾಗಲೇ ಎಲ್ಲರ ಮನ ಗೆದ್ದಿದೆ. ಡಿಸೆಂಬರ್ 5 ರಂದು ಟ್ರೈಲರ್ ಕೂಡ ರಿಲೀಸಾಗಲಿದೆ. ವಿಜಯಲಕ್ಷ್ಮಿ, ದಿನಕರ್ ಹಾಗೂ ದರ್ಶನ್ ಅಭಿಮಾನಿಗಳು ನಮಗೆ ತುಂಬಾ ಸಹಕಾರ ನೀಡಿದ್ದಾರೆ. ಸುಪ್ರೀತ್ ಹಾಗೂ ಗಂಗಾಧರ್ ಅವರು ವಿತರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ಮಾಧ್ಯಮದ ಮಿತ್ರರು ಮೊದಲಿನಿಂದಲೂ ನೀಡಿದ್ದಾರೆ. ಅದೇ ಪ್ರೋತ್ಸಾಹ ಮುಂದೆಯೂ ಇರಲಿ ಎಂದು ನಿರ್ದೇಶಕ ಪ್ರಕಾಶ್ ವೀರ್ ಹೇಳಿದರು.

ನಿರ್ದೇಶಕರ ಪತ್ನಿ ಹಾಗೂ ಎಕ್ಸಿಕ್ಯುಟಿವ್ ಪ್ರೊಡ್ಯುಸರ್ ತಶ್ವಿನಿ ವೀರ್ ಮಾತನಾಡುತ್ತ ಎರಡು ವರ್ಷಗಳಿಂದ ನಮ್ಮ ಮನೆಯಲ್ಲಿ “ದಿ ಡೆವಿಲ್” ಚಿತ್ರದ ಕುರಿತೇ ಮಾತು. ಈ ಚಿತ್ರ ನಮಗೆ ಮಗು ಇದ್ದ ಹಾಗೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂದರೆ ಕಲಾವಿದರು ಹಾಗೂ ತಂತ್ರಜ್ಞರೆ ಕಾರಣ ಎಂದರು.

ನಾಯಕಿ ರಚನಾ ರೈ ಮಾತನಾಡುತ್ತ ಈ ಸಂದರ್ಭದಲ್ಲಿ ನನಗೆ ಅವಕಾಶ ನೀಡಿದ ಜೈ ಮಾತಾ ಕಂಬೈನ್ಸ್ ಸಂಸ್ಥೆಗೆ, ನಿರ್ದೇಶಕ ಪ್ರಕಾಶ್ ವೀರ್ ಹಾಗೂ ದರ್ಶನ್ ಅವರಿಗೆ ಧನ್ಯವಾದ ಹೇಳುತ್ತೇನೆ. ಈ ಚಿತ್ರದಲ್ಲಿ ನಟಿಸುವಾಗಲೇ, ಎರಡು ಚಿತ್ರಗಳನ್ನು ಕೈ ಬಿಟ್ಟಿದ್ದೇನೆ ಎಂದರು.
ನಟಿ ಶರ್ಮಿಳಾ ಮಾಂಡ್ರೆ ಮಾತನಾಡುತ್ತ ಹಿಂದೆಯೇ ಪ್ರಕಾಶ್ ಅವರ ಜೊತೆ ಕೆಲಸ ಮಾಡಬೇಕಿತ್ತು. ಅದಕ್ಕೀಗ ಕಾಲ ಕೂಡಿ ಬಂದಿದೆ. ದರ್ಶನ್ ಅವರ ಜೊತೆಗೆ “ನವಗ್ರಹ” ಚಿತ್ರದಲ್ಲಿ ನಟಿಸಿದ್ದೆ. ಹದಿನೆಂಟು ವರ್ಷಗಳ ನಂತರ ಮತ್ತೊಮ್ಮೆ ಅವರ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು.
ನಟ ಅಚ್ಯುತಕುಮಾರ್ ಮಾತನಾಡುತ್ತ ಪ್ರಕಾಶ್ ವೀರ್ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದೆಂದರೆ ಒಂದು ರೀತಿ ಖುಷಿ. ದರ್ಶನ್ ಅವರ ಜೊತೆಗೆ ನಾನು ನಟಿಸಿರುವ ನಾಲ್ಕನೇ ಚಿತ್ರ ಎಂದು ಹೇಳಿದರು.

“ಜಗ್ಗುದಾದ” ನಂತರ ದರ್ಶನ್ ಅವರ ಜೊತೆಗೆ ಅಭಿನಯಿಸಿರಲಿಲ್ಲ. ಈ ಚಿತ್ರದಲ್ಲಿ ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ‌. ಚಿಕ್ಕದಾದರೂ ಎಲ್ಲರ ಮನಸ್ಸಿನಲ್ಲಿ ಉಳಿಯುವ ಪಾತ್ರ ಎಂದರು ನಟ ಶೋಭ್ ರಾಜ್. ನಾನು ಈ ಚಿತ್ರದಲ್ಲಿ ದರ್ಶನ್ ಅವರ ಜೊತೆಗೆ ಮೊದಲ ಬಾರಿಗೆ ನಟಿಸಿದ್ದೇನೆ. ಆದರೆ ಅವರ ಜೊತೆ ಕುಳಿತು ಸಿನಿಮಾ ನೋಡಲು ಆಗುತ್ತಿಲ್ಲ ಎಂದು ತಿಳಿಸಿದ ಹುಲಿ ಕಾರ್ತಿಕ್ ಭಾವುಕರಾದರು.

ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ಬೆ.6.30 ರಿಂದಲೇ ಮೊದಲ ಪ್ರದರ್ಶನ ಆರಂಭವಾಗಲಿದೆ ಎಂದು ವಿತರಣೆಯಲ್ಲಿ ಸಹಕಾರ ನೀಡುತ್ತಿರುವ ಸುಪ್ರೀತ್ ತಿಳಿಸಿದರು.

ಚಿತ್ರದಲ್ಲಿ ನಟಿಸಿರುವ ಸೋನಿಯಾ, ಯುವರಾಜ್, ಸಂಕಲನಕಾರ ಹರೀಶ್ ಕೊಮ್ಮೆ, ಸಾಹಿತಿ ಪ್ರಮೋದ್ ಮರವಂತೆ, ಅನಿರುದ್ಧ್ ಶಾಸ್ತ್ರಿ, ಸಂಭಾಷಣೆಕಾರ ಕಾಂತರಾಜ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, “ಸರಿಗಮಪ” ಮ್ಯೂಸಿಕ್ ಸಂಸ್ಥೆಯ ಆನಂದ್, ಅಭಯ್ ಸತೀಶ್ ಗೌಡ, ತಿಲಕ್ ಶಂಕರ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಸುಧಾಕರ್ ಎಸ್. ರಾಜ್ ಈ ಚಿತ್ರದ ಛಾಯಾಗ್ರಾಹಕರು.

Leave a Reply

Your email address will not be published. Required fields are marked *