1
1
‘ಹನುಮಾನ್’ ಚಿತ್ರದ ಅದ್ಭುತ ಯಶಸ್ಸಿನ ನಂತರ ನಟ ತೇಜ ಸಜ್ಜಾ ಮತ್ತೊಂದು ಸೀಪರ್ ಫ್ಯಾಂಟಸಿ ಚಿತ್ರದಲ್ಲಿ ನಟಿಸಿದ್ದಾರೆ. ಆ ಚಿತ್ರದ ಹೆಸರು ಮಿರಾಯ್’. ಸೌತ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ, ಈ ಚಿತ್ರದ ಮೂಲಕ ತೇಜ ಸಜ್ಜಾ ಮತ್ತೊಮ್ಮೆ ಸೂಪರ್ ಯೋಧನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರನ್ನು ಹೊಸ ಅವತಾರದಲ್ಲಿ ನೋಡಲು ಪ್ರೇಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ತೆಲುಗು, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದೇ ತಿಂಗಳ 12ರಂದು ಮಿರಾಯ್ ದೇಶಾದ್ಯಂತ ತೆರೆಗೆ ಬರುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ನಾಯಕ ತೇಜ ಸಜ್ಜಾ ಮಿರಾಯ್ ಚಿತ್ರದ ಬಗ್ಗೆ, ತಮ್ಮ ಪಾತ್ರದ ಕುರಿತಂತೆ ಮಾಧ್ಯಮದೊಂದಿಗೆ ಮಾತುಕತೆ ನಡೆಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಮಿರಾಯ್ ಚಿತ್ರದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ತೇಜ ಸಜ್ಜಾ ಮಿರಾಯ್ ದೊಡ್ಡ ಸಿನಿಮಾ. ಚಿತ್ರಕ್ಕಾಗಿ ನಾವೆಲ್ಲ ತುಂಬಾ ಪರಿಶ್ರಮ ಹಾಕಿ ಕೆಲಸ ಮಾಡಿದ್ದೇವೆ. ನಿಮ್ಮ ಬೆಂಬಲ ಈ ಚಿತ್ರದ ಮೇಲೆ ಇರಲಿ ಎಂದರು. ಕನ್ನಡದಲ್ಲಿಯೇ ಮಾತು ಆರಂಭಿಸಿದ ನಾಯಕ ತೇಜ ಸಜ್ಜಾ, ನಾನಿನ್ನೂ ಕನ್ನಡ ಕಲಿಯುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಿ. ಮಿರಾಯಿ, ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಸಹ ಚಿತ್ರ ಇಷ್ಟವಾಗುತ್ತದೆ. ಆಕ್ಷನ್, ಎಮೋಷನ್ ಜೊತೆಗೆ ಇತಿಹಾಸದ ಕಥೆಯನ್ನು ಮಿರಾಯ್ ನಲ್ಲಿ ಕಟ್ಟಿಕೊಡಲಾಗಿದೆ ಎಂದರು.
ತೇಜ ಸಜ್ಜಾ ಸೂಪರ್ ಯೋಧನಾಗಿ ಜನರನ್ನು ರಕ್ಷಿಸಲು ಹೋರಾಡುವ ಯುವನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೇಜ ಸಜ್ಜಾ ವಿರುದ್ಧ ಟಾಲಿವುಡ್ ನಟ ಮಂಚು ಮನೋಜ್ ಖಳನಾಯಕನಾಗಿ ಅಬ್ಬರಿಸಿದ್ದಾರೆ. ರಿತಿಕಾ ನಾಯಕ್ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ಕಾರ್ತಿಕ್ ಘಟ್ಟಮನೇನಿ ಅವರು ‘ಮಿರಾಯ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘ಮಿರಾಯ್’ ಚಿತ್ರವನ್ನು ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಟಿ.ಜಿ. ವಿಶ್ವಪ್ರಸಾದ್ ಅವರು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸದ್ದು ಮಾಡುತ್ತಿರುವ ‘ಮಿರಾಯ್’ ಸೆಪ್ಟೆಂಬರ್ 12ರಂದು ಕೇವಲ 2Dಯಲ್ಲಷ್ಟೇ ಅಲ್ಲ 3D ಫಾರ್ಮಾಟ್‌ನಲ್ಲಿ ಬರೋಬ್ಬರಿ ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ಈ ಸಿನಿಮಾವನ್ನು ವಿಕೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಹೊಂಬಾಳೆ ಫಿಲಂಸ್ ರಿಲೀಸ್ ಮಾಡುತ್ತಿದೆ.