1
1
ಇತ್ತೀಚೆಗೆ ತನ್ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಕಂಟೆಂಟ್ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದಂಥ ಚಿತ್ರ ಎಲ್ಟು ಮುತ್ತಾ. ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ ಕೀರ್ತಿ ಹೈ 5 ಸ್ಟುಡಿಯೋಸ್ ಗೆ ಸಲ್ಲುತ್ತದೆ. ಅದೇ ಹೈ 5 ಸ್ಟುಡಿಯೋಸ್ ಇದೀಗ ವಿಭಿನ್ನವಾದ ಮ್ಯೂಸಿಕ್ ಆಲ್ಬಮ್ ಒಂದನ್ನು ಹೊರತಂದಿದೆ. ಅದರ ಹೆಸರು ಅಲೆಯ ವೈಖರಿ. ಹೈ 5 ಮ್ಯೂಸಿಕ್ ಹಾಗೂ ಎ.ಕೆ. ಸಾಂಗ್ ಕ್ರಾಫ್ಟ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವ ‘ಅಲೆಯ ವೈಖರಿ’ ಮ್ಯೂಸಿಕ್ ಆಲ್ಬಮ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಅಲೆಯ ವೈಖರಿ ಹಾಡು ತನ್ನ ಮೇಕಿಂಗ್ ಹಾಗೂ ಬಿಜಿಎಂ ಮೂಲಕವೇ ಬಿಗ್ ಸೌಂಡ್ ಮಾಡುತ್ತಿದೆ. ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಅವರ ಪುತ್ರ ಸಾಗರ್ ಗುರುರಾಜ್ ಈ ಹಾಡಿಗೆ ರಾಗಸಂಯೋಜನೆ ಮಾಡಿದ್ದಾರೆ. ಅಲ್ಲದೆ ಅಜಿತ್ ಕೇಶವ ಅವರು ಗೀತರಚನೆ ಮಾಡುವ ಜತೆಗೆ ಈ ಹಾಡಿಗೆ ತಾವೇ ದನಿಯಾಗಿದ್ದಾರೆ. ಅವರಜತೆ ಸರಿಗಮಪ ಸೀಸನ್ 1 ವಿಜೇತ ಚಿನ್ಮಯ್ ಅತ್ರೆಯಸ್ ಅವರು ದನಿಗೂಡಿಸಿದ್ದಾರೆ. ಸ್ಮೈಲ್ ಬಾಕ್ಸ್ ಫೋಟೋಗ್ರಫಿಯ ರೂವಾರಿ ಮಧು ಜೆ.ಎಂ. ಅವರು ಈ ಹಾಡಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಈ ಹಾಡಲ್ಲಿ ಅಜಿತ್ ಕೇಶವ, ಚಿನ್ಮಯ್ ಅತ್ರೆಯಸ್, ಸಾಗರ್ ಗುರುರಾಜ್ ಹಾಗೂ ಸರವಣ ಗೌತಮ್ ಅಭಿನಯಿಸಿದ್ದಾರೆ. ಹೈ ಫೈವ್ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿರುವ ಈ ಹಾಡನ್ನು ಈಗಾಗಲೇ ಚಿತ್ರರಂಗದ ಹಲವು ಸ್ಟಾರ್ಗಳು ಹಾಗೂ ತಾರೆಯರು ವೀಕ್ಷಿಸಿ ಇದನ್ನು ಇಂಗ್ಲಿಷ್ ಪಾಪ್ ಹಾಡಿಗೆ ಹೋಲಿಕೆ ಮಾಡುವ ಮೂಲಕ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಪಾಪ್ ಕ್ಷೇತ್ರದಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸುತ್ತಿರುವ ಅಲೆಯ ವೈಖರಿ ಹಾಡು ಇದೀಗ ಸಂಗೀತ ಪ್ರಿಯರೆಲ್ಲರ ಮನಸನ್ನು ಸೂರೆಗೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಸತ್ಯ ಎಸ್.ಶ್ರೀನಿವಾಸನ್ ನಮ್ಮ ಹೈ 5 ಸ್ಟುಡಿಯೋಸ್ ವತಿಯಿಂದ ಸಿನಿಮಾ ನಿರ್ಮಾಣ ಅಲ್ಲದೆ ಪ್ರತಿಭೆ ಇರುವ ಗಾಯಕರಿಗೆ, ವಿಶೇಷವಾಗಿ ಪಾಪ್ ಹಾಗೂ ಜಾನಪದ ಶೈಲಿಯ ಹಾಡುಗಳಿಗೆ ಪ್ರೋತ್ಸಾಹ ನೀಡುವ ಆಶಯ ಹೊಂದಿರುವುದಾಗಿ ತಿಳಿಸಿದರು. ಹಾಗೇ ಅಜಿತ್ ಕೇಶವ ಹಾಗೂ ಅವರ ತಂಡ ಮಾಡಿರುವ ಅಲೆಯ ವೈಖರಿ ಹಾಡನ್ನು ತಮ್ಮ ಹೈ 5 ಮ್ಯೂಸಿಕ್ ಅಡಿಯೋ ಮೂಲಕ ಬಿಡುಗಡೆ ಮಾಡಿರುವುದು ಹೆಚ್ಚಿನ ಸಂತೋಷ ತಂದುಕೊಟ್ಟಿದೆ ಎಂದರು.