Popular Posts

ಶ್ರೀಅನ್ನದಾನೀಶ್ವರ ಮಹಾತ್ಮೆ ಚಿತ್ರದ ಟ್ರೈಲರ್ ಬಿಡುಗಡೆ

ಮಮತಾ ಎನ್. ಎಸ್. ನಿರ್ಮಾಣದ, ಗೌರಿ ಎಲ್. ರಾಮೇಗೌಡ ಅವರ ನಿರ್ದೇಶನದ, ನಡೆದಾಡುವ ದೇವರು, ಪುಸ್ತಕದ ಜಗದ್ಗುರು, ನಾಡೋಜ ಜಗದ್ಗುರು ಡಾ||ಅನ್ನದಾನೀಶ್ವರ ಮಹಾಸ್ವಾಮಿಗಳ ಜೀವನ ಚರಿತ್ರೆ ಆಧಾರಿತ “ಶ್ರೀಅನ್ನದಾನೀಶ್ವರ ಮಹಾತ್ಮೆ” ಚಿತ್ರದ ಟ್ರೇಲರನ್ನು ಇಟಗಿ ಶ್ರೀಗಳು ಬಿಡುಗಡೆ ಮಾಡಿದರು. ಅಂತಃಪುರ ಶ್ರೀಗಳು ಜ್ಞಾನ ಮೇರುವಾಗಿ ಹಾಡನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ರಮೇಶ್ ಶೆಟ್ಟಿ (ಬೈಂದೂರು), ಪುಷ್ಪಲತಾ, ರಕ್ಷಕ ವಿಜಯಕುಮಾರ್ ಸೂರಿ ಮೆರಾಡೇ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಈ ಚಿತ್ರದಲ್ಲಿ ಹಿರಿಯನಟ ಅಭಿಜಿತ್ ಅವರು ಅನ್ನದಾನೀಶ್ವರ ಶ್ರೀಗಳ‌ ಪಾತ್ರ ನಿರ್ವಹಿಸಿದ್ದು, ಅನ್ನದಾನೀಶ್ವರ ಶಾಖಾಮಠದ ಕುಕುನೂರಿನ ಡಾ||ಮಹದೇವ ದೇವರು ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಕುಮಾರ್ ಬೇವಿನಾಳ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿದ್ದು, ವಿ. ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ನಿರ್ದೇಶಕಿ ಗೌರಿ ಮಾತನಾಡಿ, ನಾನು ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದು, ನಿರ್ದೇಶಕಿಯಾಗಿ ಮೊದಲ ಚಿತ್ರ. ಮೊದಲಿಂದ ದೈವದ ಬಗ್ಗೆ ಒಲವು ಜಾಸ್ತಿ. ರಾಯರ ಭಕ್ತೆ. ಅಭಿಜಿತ್ ಅನ್ನದಾನೀಶ್ವರ ಸ್ವಾಮಿಗಳ ಪಾತ್ರ ನಿರ್ವಹಿಸಿದ್ದು,100ಕ್ಕೂ ಹೆಚ್ಚು ಸ್ವಾಮಿಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ, ಸಿದ್ದಗಂಗಾ ಮತ್ತು ಅನ್ನದಾನೀಶ್ವರ ಮಠಧ 25 ಸಾವಿರ ಮಕ್ಕಳು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಪ್ಪಳ, ಶಿವಯೋಗ ಮಂದಿರ ಮುಂಡರಗಿ ಬೆಂಗಳೂರು, ಶ್ರೀರಂಗಪಟ್ಟಣ ಸಿದ್ದಗಂಗಾ ಮಠದ ಸುತ್ತಮುತ್ತ 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದರು.

ನಟ ಅಭಿಜಿತ್ ರಾವ್ ಮಾತನಾಡಿ ಈ ಚಿತ್ರದಲ್ಲಿ ಎಲ್ಲವನ್ನೂ ಗುರುಗಳು ನನ್ನ ಕೈಯಿಂದ ಮಾಡಿಸಿದ್ದಾರೆ. ಅದು ಗುರುಗಳ ಆಶೀರ್ವಾದ ಹಾಗೂ ಇಚ್ಛೆ ಆಗಿತ್ತು. ಗೌರಿ ಅವರು ನನ್ನಿಂದ ತುಂಬಾ ಚೆನ್ನಾಗಿ ಪಾತ್ರ ಮಾಡಿಸಿದ್ದಾರೆ. ಇಂಥ ಕಥೆ ಮಾಡಬೇಕಾದರೆ ನೇಟಿವಿಟಿ ಬಹಳ ಮುಖ್ಯ. ಛಾಯಾಗ್ರಾಹಕ ಸಿದ್ದರಾಜು ಮತ್ತು ಶಿವಶರಣ ವಿ. ಸುಗ್ನಳ್ಳಿ ಅದ್ಭುತವಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ.‌ ಈ ಪಾತ್ರ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ ಎಂದರು. ಸಂಜಯ್ ಬೇವಿನಾಳ್ ಮಾತನಾಡಿ ಅನ್ನ, ಅರಿವು, ಶಿಕ್ಷಣ ಹಾಗೂ ತ್ರಿವಿಧ ದಾಸೋಹದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿ, ಸಾಹಿತ್ಯ ಲೋಕದಲಿ ತಮ್ಮದೇ ಆದ ಸ್ಥಾನ ಪಡೆದಿರುವ, ಗುರುಗಳ ಬಗ್ಗೆ ಬರೆಯುವುದು ನನಗೆ ಸಿಕ್ಕ ಸೌಭಾಗ್ಯ ಎಂದರು.

ನಟ ಶಿವಕುಮಾರ್ ಆರಾಧ್ಯ, ರತ್ನಮಾಲ ಸುಂದರ್, ಜೂನಿಯರ್ ರಾಜಕುಮಾರ್, ಗಣೇಶ್ ಭಟ್ರು, ಮೂಗು ಸುರೇಶ್, ಡಿಂಗ್ರಿ ನಾಗರಾಜ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *