Popular Posts

ಹೊಸ ತಂತ್ರಜ್ಞಾನದ AI ಚಿತ್ರ ನಿರ್ಮಾಣಕ್ಕೆ ಮುಂದಾದ ಸ್ಮೈಲ್ ಶ್ರೀನು

ಕನ್ನಡ ಚಿತ್ರರಂಗದಲ್ಲಿ ರೀಲ್ ಕ್ಯಾಮೆರಾದಿಂದ ಡಿಜಿಟಲ್ ಕ್ಯಾಮೆರಾದವರೆಗೆ ಸಿನಿಮಾ ಮಾಡಿ ಗೆದ್ದಿರುವ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಸ್ಮೈಲ್ ಶ್ರೀನು ಅವರು ಇದೀಗ ಎಐ, ವರ್ಚುಯೆಲ್ ಪ್ರೊಡಕ್ಷನ್ ಹಾಗೂ ಹೊಸ ತಂತ್ರಜ್ಞಾನದ ಮೂಲಕ ಮುಂದಿನ ಪೀಳಿಗೆಯ ಚಿತ್ರ ನಿರ್ಮಾಣದತ್ತ ಹೊಸ ಹೆಜ್ಜೆ ಇಡುತ್ತಿದ್ದಾರೆ. ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್, 18 to 25 ಹಾಗೂ ಓ ಮೈ ಲವ್ ಎಂಬ ವಿಭಿನ್ನ ಚಿತ್ರಗಳನ್ನು ಕನ್ನಡಿಗರಿಗೆ ನೀಡಿದ ಸ್ಮೈಲ್ ಶ್ರೀನು ಇದೀಗ ಹೊಸ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಚಿತ್ರ ನಿರ್ಮಾಣದಲ್ಲಿ ಸಾಮಾನ್ಯವಾಗಿ ಎದುರಾಗುವ ಕಲಾವಿದರ, ತಂತ್ರಜ್ಞರ, ಲೊಕೇಶನ್ ಮತ್ತು ಸಮಯ ಈ ಎಲ್ಲ ಸಮಸ್ಯೆಗಳಿಗೆ ಎಐ ತಂತ್ರಜ್ಞಾನ ಭವಿಷ್ಯದಲ್ಲಿ ಹೊಸ ಪರಿಹಾರ ನೀಡಲಿದೆ. “ನಾನು ರೀಲ್, ಡಿಜಿಟಲ್ ಯುಗದಲ್ಲೂ ಸಿನಿಮಾ ಮಾಡಿದ್ದೇನೆ. ಈಗ ಅದನ್ನೆಲ್ಲ ಮೀರಿದ ತಂತ್ರಜ್ಞಾನ ಬಳಸಿಕೊಂಡು ಚಿತ್ರ ಮಾಡುತ್ತಿದ್ದೇನೆ. ತಂತ್ರಜ್ಞಾನದ ಜೊತೆಗೆ ನಾವೂ ಅಪ್ ಡೇಟ್ ಆಗಬೇಕಿದೆ.

ಇದುವರೆಗೆ ಸಿನಿಮಾಗಳಲ್ಲಿ ನಾಯಕನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಆದರೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿರುವ ರಿಯಲ್ ಲೈಫ್ ಹೀರೋಗಳು ಮತ್ತು ಅಸಾಮಾನ್ಯ ವ್ಯಕ್ತಿಗಳ ನೈಜ ಬದುಕಿನ ಕಥೆಗಳು ಅತ್ಯಾಧುನಿಕ ತಂತ್ರಜ್ಞಾನದಡಿ ತೆರೆಯ ಮೇಲೆ ಮೂಡಿ ಬರಲಿದೆ ಎಂದವರು ಹೇಳಿದ್ದಾರೆ.

ಹೊಸ ಹೊಸ ತಂತ್ರಜ್ಞಾನದ ಪರಿಚಯದಿಂದ ಚಿತ್ರ ನಿರ್ಮಾಣದ ಸಮಯ, ವೆಚ್ಚವನ್ನು ಕಡಿಮೆ ಮಾಡಬಹುದು. ‘ಎಐ’ ಕಲಾವಿದರು ಮತ್ತು ತಂತ್ರಜ್ಞರ ಸೃಜನಶೀಲತೆಯನ್ನು ಮತ್ತಷ್ಟು ವಿಸ್ತರಿಸುವ ಸಾಧನ. ಕಡಿಮೆ ಸಂಪನ್ಮೂಲದಲ್ಲಿಯೂ ದೊಡ್ಡ ಮಟ್ಟದ ಮನರಂಜನೆ ನೀಡುವ ವಿಧಾನ ಎನ್ನುವ ಅವರು ಇದೇ ವೇಳೆ, ಭಾರತವಲ್ಲದೆ ವಿದೇಶೀ ಪ್ರೇಕ್ಷಕರ ಗಮನ ಸೆಳೆಯುವಂಥ ಮಹತ್ವದ ಸಿನಿಮಾವೊಂದಕ್ಕೆ ಕೈಹಾಕಿರುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಶೇಷ ಪ್ರಾಜೆಕ್ಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಸ್ಮೈಲ್ ಶ್ರೀನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *