Popular Posts

“NH 66” ನಲ್ಲಿ ಶೃತಿ ಹರಿಹರನ್ ಜರ್ನಿ

ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್. ನಿರ್ಮಿಸಿ, ನಿರ್ದೇಶಿಸಿರುವ “NH 66” ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.‌ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ, ಈಗ ಶೃತಿ ಹರಿಹರನ್ ಅವರ ಫಸ್ಟ್ ಲುಕ್ ಹೊರತಂದಿದೆ. “NH 66”, ಹೆಸರೇ ಹೇಳುವಂತೆ ಒಂದು ಜರ್ನಿ ಕಥೆಯಾಗಿದೆ. “One highway many secrets” ಎಂಬ ಅಡಿಬರಹ ಈ ಚಿತ್ರಕ್ಕಿದೆ. ಮೂರು ಮುಖ್ಯ ಪಾತ್ರಗಳ ಸುತ್ತ ನಡೆಯುವ ಒಂದು ರೋಮಾಂಚನಕಾರಿ ಕಥೆಯನ್ನು ನಿರ್ದೇಶಕರು ಹೆಣೆದಿದ್ದಾರೆ. ಮಂಗಳೂರಿನಿಂದ ಮುಂಬೈಗೆ ಸಾಗುವ ಮಾರ್ಗದಲ್ಲಿ ನಡೆಯುವ ಜರ್ನಿ ಕಥೆಯಾಗಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಒಬ್ಬ ಕ್ಯಾಬ್ ಚಾಲಕನಾಗಿ ಅಭಿನಯಿಸಿದ್ದಾರೆ. ಶೃತಿ ಹರಿಹರನ್ ಅವರದು ಪಯಣಿಗರ ಪಾತ್ರ. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶೃತಿ ಹರಿಹರನ್, “NH 66” ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರ ನಿರ್ವಹಿಸಿದ್ದಾರೆ.

ಇತ್ತೀಚೆಗಷ್ಟೇ ಶೃತಿ ಹರಿಹರನ್ ಅವರ ಫಸ್ಟ್ ಲುಕ್ ರಿಲೀಸಾಗಿದ್ದು, ಫಸ್ಟ್ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಬಗ್ಗೆ ಇರುವ ನಿರೀಕ್ಷೆಯೂ ಹೆಚ್ಚಾಗಿದೆ. ಈಗಾಗಲೇ‌ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

ಗುರುರಾಯರ ಪರಮಭಕ್ತರಾದ ನಿರ್ಮಾಪಕ ಟಿ.ಆರ್.ಮಂಜುನಾಥ್ ರಾಯರ ಅನುಗ್ರಹದಿಂದ ಹಾಗೂ ಚಿತ್ರತಂಡದ ಸಹಕಾರದಿಂದ ನಾವು ಅಂದುಕೊಂಡ ಹಾಗೆ ಚಿತ್ರ ಮೂಡಿಬಂದಿದೆ ಎನ್ನುತ್ತಾರೆ‌. ಟಿ.ಆರ್.ಮಂಜುನಾಥ್ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುನೀತ್ ಹಲಗೇರಿ ಅವರ ಛಾಯಾಗ್ರಹಣ ಇರುವ “NH 66” ಚಿತ್ರಕ್ಕೆ ಸ್ವಾಮಿನಾಥನ್ ಅವರ ಸಂಗೀತ ಸಂಯೋಜನೆಯಿದೆ.

Leave a Reply

Your email address will not be published. Required fields are marked *