1
1
ಹೊಂಬಾಳೆ ಫಿಲಂಸ್ ನಿರ್ಮಾಣದ ಮುಂದಿನ ಚಿತ್ರದಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ನಟಿಸಲಿದ್ದಾರೆ. ವಿಜಯ್ ಕಿರಗಂದೂರು ನಿರ್ಮಿಸಲಿರುವ ಹೊಸ ಚಿತ್ರವನ್ನು ಟಿ. ಜೆ. ಜ್ಞಾನವೇಲ್ ನಿರ್ದೇಶನ ಮಾಡಲಿದ್ದಾರೆ. ಅಲ್ಲದೆ ಸೂರ್ಯ ಜತೆ ಕಯಾದು ಲೋಹರ್ ನಾಯಕಿಯಾಗಿ ನಟಿಸಲಿದ್ದಾರೆ. ಸ್ಟ್ರಾಂಗ್ ಕಂಟೆಂಟ್ ಹಾಗೂ ಭವ್ಯ ದೃಶ್ಯವೈಭವದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಲಈ ಕಾಂಬಿನೇಶನ್ ಸಜ್ಜಾಗಿದೆ.
ತಮಿಳು ಚಿತ್ರರಂಗದ ಯಶಸ್ವಿ ನಟರಲ್ಲಿ ಒಬ್ಬರಾದ ಸೂರ್ಯ, ಕಳೆದ ಎರಡು ದಶಕಗಳಿಂದ ತಮ್ಮ ವೈವಿಧ್ಯಮಯ ಪಾತ್ರಗಳು ಮತ್ತು ಧೀಮಂತ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಎರಡು ರಾಷ್ಟ್ರ ಪ್ರಶಸ್ತಿಗಳು ಹಾಗೂ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು, ಕೇವಲ ನಟನೆಯಷ್ಟೇ ಅಲ್ಲದೆ ಉತ್ತಮ ಸಂದೇಶವಿರುವ ಸಿನಿಮಾಗಳನ್ನು ನಿರ್ಮಿಸಿ, ಗುರುತಿಸಿಕೊಂಡಿದ್ದಾರೆ. ಟಿ. ಜೆ. ಜ್ಞಾನವೇಲ್ ಕೂಡ ಜೈ ಭೀಮ್ ನಿರ್ದೇಶಿಸುವ ಮೂಲಕ ದೇಶಾದ್ಯಂತ ಪ್ರಶಂಸೆ ಗಳಿಸಿದ್ದಾರೆ. ಸಾಮಾಜಿಕ ಕಳಕಳಿ, ಭಾವನಾತ್ಮಕ ಆಳ ಮತ್ತು ದಿಟ್ಟ ಕಥಾಹಂದರ ಹೆಣೆಯುವಲ್ಲಿ ಜ್ಞಾನವೇಲ್ ಗುರುತಿಸಿಕೊಂಡಿದ್ದಾರೆ.

‘ಕೆ.ಜಿ.ಎಫ್’, ‘ಕಾಂತಾರ’ ಮತ್ತು ‘ಸಲಾರ್’ ನಂತಹ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆದಿರೋ ಹೊಂಬಾಳೆ ಫಿಲಂಸ್ ಪ್ರಾದೇಶಿಕ ಗಡಿಗಳನ್ನು ಮೀರಿ, ವಿಭಿನ್ನ ಆಲೋಚನೆಗಳ ತಂತ್ರಜ್ಞರನ್ನು ಮುನ್ನಲೆಗೆ ತರುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕಥೆಗಳನ್ನು ಈ ಸಂಸ್ಥೆ ನಿರಂತರವಾಗಿ ಬೆಂಬಲಿಸುತ್ತಾ ಬಂದಿದೆ.
“ಚಿತ್ರರಂಗದ ಮೇಲಿನ ಪ್ರೀತಿ ಹಾಗೂ ಒಂದೇ ರೀತಿಯ ಯೋಚನೆಯಿಳ್ಳವರು ಒಂದಾದಾಗಲೇ ಅತ್ಯುತ್ತಮ ಸಿನಿಮಾ ಮೂಡಿಬರಲು ಸಾಧ್ಯ ಎಂದು ಹೊಂಬಾಳೆ ಫಿಲಂಸ್ ಸದಾ ನಂಬುತ್ತದೆ. ಸೂರ್ಯ ಮತ್ತು ಟಿ. ಜೆ. ಜ್ಞಾನವೇಲ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ತಲುಪುವಂತಹ ಪ್ರಾಮಾಣಿಕ ಹಾಗೂ ಅರ್ಥಪೂರ್ಣ ಕಥೆ ಹೇಳುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.”
ವಿಜಯ್ ಕಿರಗಂದೂರು, ಸಂಸ್ಥಾಪಕರು, ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಸಾಯಿ ಅಭ್ಯಂಕರ್ ಅವರ ಸಂಗೀತ ನಿರ್ದೇಶನ, ಎಸ್. ಆರ್. ಕದಿರ್ ಅವರ ಛಾಯಾಗ್ರಹಣವಿದೆ. ಜೂನ್ 29, 2026 ರಂದು ಚೆನ್ನೈನ ಪಾರ್ಕ್ ಹ್ಯಾಟ್‌ನಲ್ಲಿ ಈ ಚಿತ್ರದ ಮುಹೂರ್ತ ನಡೆದಿದೆ. ಚಿತ್ರತಂಡದ ಜತೆ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭವು, ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಒಕ್ಕೂಟಕ್ಕೆ ಸಾಕ್ಷಿಯಾಯಿತು. ಪ್ರತಿಭಾವಂತ ನಟ, ಭರವಸೆಯ ನಟಿ, ದೀರ್ಘದೃಷ್ಟಿಯುಳ್ಳ ನಿರ್ದೇಶಕ ಹಾಗೂ ಯಶಸ್ವಿ ನಿರ್ಮಾಣ ಸಂಸ್ಥೆ ಜತೆಯಾಗಿರುವ ಈ ಚಿತ್ರ ಜಗತ್ತಿನಾದ್ಯಂತ ಎಲ್ಲಾ ತಲೆಮಾರಿನ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಉಳಿಯುವ ಭರವಸೆ ಮೂಡಿಸಿದೆ.