Popular Posts

ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ವರ್ಣದಲ್ಲಿ “ಜಗಮೆಚ್ಚಿದ ಮಗ” ‌‌‌‌

ವರನಟ ಡಾ||ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ” ಜಗಮೆಚ್ಚಿದ ಮಗ”. ಕಪ್ಪು ಬಿಳುಪಿನಲ್ಲಿದ್ದ ಈ ಚಿತ್ರ ಆಧುನಿಕ ತಂತ್ರಜ್ಞಾನದಿಂದ ಸಿಂಗಾರಗೊಂಡು ವರ್ಣದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಈ ಚಿತ್ರ ಬಿಡುಗಡೆಯಾಗಲಿದೆ. ನಿರ್ಮಾಪಕ ಹಾಗೂ ವಿತರಕರಾಗಿ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವ ಎಸ್. ಉದಯಶಂಕರ್ ಅವರು “ಜಗಮೆಚ್ಚಿದ ಮಗ” ಚಿತ್ರವನ್ನು ವರ್ಣದಲ್ಲಿ ತರುವ ಪ್ರಯತ್ನ ಮಾಡಿದ್ದಾರೆ.
“ನಾನು, ಡಾ|ರಾಜಕುಮಾರ್ ಅವರ ಅಭಿಮಾನಿ. ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದೇನೆ.‌ ಕೆಲವು ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. 1972ರಲ್ಲಿ ತೆರೆಕಂಡಿದ್ದ, ಭಾವನಾ ರಾಯಣ್ ಅವರು ನಿರ್ಮಾಣ ಮಾಡಿದ್ದ, ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದ ಈ ಚಿತ್ರದಲ್ಲಿ ಡಾ||ರಾಜಕುಮಾರ್, ಭಾರತಿ, ಕೆ.ಎಸ್ . ಅಶ್ವತ್, ಎಂ.ವಿ.ರಾಜಮ್ಮ, ನರಸಿಂಹರಾಜು ಮುಂತಾದವರು ಅಭಿನಯಿಸಿದ್ದರು.

ಕಪ್ಪು ಬಿಳುಪಿನಲ್ಲಿದ್ದ ಈ ಚಿತ್ರವನ್ನು ಸಿನಿಮಾಸ್ಕೋಪ್ ಜತೆಗೆ 5.1 ಸೌಂಡ್ ಎಫೆಕ್ಟ್ ಅಳವಡಿಸಿ ಆಧುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಸಿದ್ದಪಡಿಸಿ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇನೆ. ಈವರೆಗೂ “ಸತ್ಯ ಹರಿಶ್ಚಂದ್ರ” ಹಾಗೂ “ಕಸ್ತೂರಿ ನಿವಾಸ” ಚಿತ್ರಗಳು ಕಲರ್ ನಲ್ಲಿ ಬಿಡುಗಡೆಯಾಗಿದ್ದವು. ಈಗ “ಜಗಮೆಚ್ಚಿದ ಮಗ” ಕೂಡ ಕಲರ್ನಲ್ಲಿ ಮೂಡಿಬರುತ್ತಿದೆ. “ಮಂತ್ರಾಲಯ ಮಹಾತ್ಮೆ” ಚಿತ್ರವನ್ನು ಸಹ ಕಲರ್ ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. “ಜಗಮೆಚ್ಚಿದ ಮಗ” ಚಿತ್ರವನ್ನು ಆಧುನಿಕ ತಂತ್ರಜ್ಞಾನದೊಂದಿಗೆ‌ ಬಿಡುಗಡೆ ಮಾಡುವುದು ನನ್ನ ಹಲವು ವರ್ಷಗಳ ಕನಸು. ಆದರೆ, ಐವತ್ತು ವರ್ಷಗಳ ಹಿಂದಿನ ಕಪ್ಪು ಬಿಳುಪು ಚಿತ್ರವನ್ನು ಈಗಿನ ಆಧುನಿಕ ರೀತಿಗೆ ಬದಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ಒಂದುವರೆ ವರ್ಷಗಳಿಂದ ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳೆಲ್ಲಾ ನಡೆದಿದೆ. ಈಗ ಚಿತ್ರ ಹೊಸರೂಪದಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಎಸ್ ಉದಯಶಂಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *