Popular Posts

ಆ್ಯಕ್ಷನ್ ಡ್ರಾಮಾ “ರಂಗಸ್ಥಳ” ಚಿತ್ರದ ಟೀಸರ್ ಬಿಡುಗಡೆ

ಅಘೋರ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಡಾ||ರೇವಣ್ಣ ಹಾಗೂ ಮೋಹನ್ ಕುಮಾರ ಎಮ್. ಎಲ್. ನಿರ್ಮಿಸುತ್ತಿರುವ, ನಿತಿನ್ ಭಾರದ್ವಾಜ್ ನಿರ್ದೇಶನದ, ಗಿರ್ಕಿ ಖ್ಯಾತಿಯ ವಿಲೋಕ್ ರಾಜ್ ನಾಯಕನಾಗಿ ನಟಿಸುತ್ತಿರುವ “ರಂಗ ಸ್ಥಳ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಆಕ್ಷನ್ ಡ್ರಾಮ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದ್ದು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಸಧ್ಯ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

“ರಂಗಸ್ಥಳ” ಆಕ್ಷನ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಅಡ್ಕತೋಡಿ ಗ್ರಾಮಕ್ಕೆ ಒಬ್ಬ ಅಪರಿಚಿತ ವ್ಯಕ್ತಿಯ ಆಗಮನವಾಗುತ್ತದೆ. ಗ್ರಾಮದ ಇತಿಹಾಸದಲ್ಲಿ ಹಲವಾರು ವರ್ಷಗಳಿಂದ ಹುದುಗಿದ್ದ ಕರಾಳ ರಹಸ್ಯವೊಂದನ್ನು ಬಯಲಿಗೆಳೆಯುತ್ತಾನೆ.
ಈ ಅಪರಿಚಿತನ ನಿಗೂಢತೆ ಗ್ರಾಮದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಂತೆ ನಾಯಕ ಹಾಗೂ ಸ್ನೇಹಿತರು ಆತನ ವಿರುದ್ಧ ತಿರುಗಿಬೀಳುತ್ತಾರೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಥೆ.

ಮೂಲತಃ ಪುತ್ತೂರಿನವರಾದ ನಿರ್ದೇಶಕ ನಿತಿನ್ ಭಾರದ್ವಾಜ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಂಗೀತ, ಯಕ್ಷಗಾನ ಕಲೆಯ ವಾತಾವರಣದಲ್ಲಿ ಬೆಳೆದ ಇವರು ಸಿನಿಮಾ ಮೇಲಿನ ಆಸಕ್ತಿಗಾಗಿ ವೈದ್ಯಕೀಯ ವಿದ್ಯಾಭ್ಯಾಸವನ್ನು ತೊರೆದು, ಚೆನ್ನೈನ ಎಲ್.ವಿ. ಪ್ರಸಾದ್ ಫಿಲ್ಮ್ ಅಂಡ್ ಟಿವಿ ಅಕಾಡೆಮಿಯಲ್ಲಿ ಚಲನಚಿತ್ರ ಶಿಕ್ಷಣ ಪಡೆದಿದ್ದಾರೆ. ಬಳಿಕ ಕಿರುಚಿತ್ರ ಹಾಗೂ ಜಾಹೀರಾತುಗಳ ನಿರ್ದೇಶನ ಮಾಡಿದ್ದಾರೆ. ಇದೀಗ ‘ರಂಗಸ್ಥಳ’ದ ಮೂಲಕ ಸಿನಿಮಾ ನಿರ್ದೇಶಕನಾಗಿ ಹಿರಿತೆರೆಗೆ ಪ್ರವೇಶ ಮಾಡಿದ್ದಾರೆ.

ಗಿರ್ಕಿ, ಡಾಟರ್ ಆಫ್ ಪಾರ್ವತಮ್ಮ ಚಿತ್ರಗಳಲ್ಲಿ ನಟಿಸಿರುವ ವಿಲೋಕ್ ರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಮನೋಜ್ ಕೆ.ಜಯನ್ ಖಳನಾಗಿ ಕಾಣಿಸಿಕೊಂಡಿದ್ದಾರೆ. ಕಣ್ಣೂರಿನ ಉದ್ಯಮಿ ಪಾತ್ರ ಅವರದು. ಒಂದು ಉದ್ದೇಶದೊಂದಿಗೆ ಕರ್ನಾಟಕಕ್ಕೆ ಬಂದು ನೆಲೆಸುವ ಆತನ ಸುತ್ತ ಚಿತ್ರದ ಕಥೆ ಸಾಗುತ್ತದೆ. ಶಿಲ್ಪಾ ಕಾಮತ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದು, ಬಿ. ಸುರೇಶ್, ಸಂಧ್ಯಾ ಅರೆಕೆರೆ, ಹರಿಣಿ ಶ್ರೀಕಾಂತ್, ಕುಶಾಲ್ ಬಿ.ಕೆ., ಸೌಮ್ಯ ಪೂಜಾರಿ ಹಾಗೂ ರಾಧೇಶ್ ಶೆಣೈ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಎನೋಶ್ ಒಲಿವೆರ ಹಾಗೂ ಮನಯ್ ಕೆ. ಮಾರುತಿ ಅವರ ಛಾಯಾಗ್ರಹಣ ಹಾಗೂ ಜ್ಯೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ “ರಂಗಸ್ಥಳ” ಚಿತ್ರಕ್ಕಿದೆ.

Leave a Reply

Your email address will not be published. Required fields are marked *