Popular Posts

ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬಕ್ಕೆ ‘ಕಾಕಾ’ ಗ್ಲಿಂಪ್ಸ್

ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ (ಆಗಸ್ಟ್ 22) ಅಂಗವಾಗಿ ‘ಮೆಗಾ 158’ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ‘ವಾಲ್ತೇರು ವೀರಯ್ಯ’ ಚಿತ್ರದ ಯಶಸ್ಸಿನ ನಂತರ ನಟ ಚಿರಂಜೀವಿ ಮತ್ತು ಕಮರ್ಷಿಯಲ್ ನಿರ್ದೇಶಕ ಬಾಬಿ ಕೊಲ್ಲಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಬಹುನಿರೀಕ್ಷಿತ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ.

ಈ ಚಿತ್ರಕ್ಕೆ ‘ಕಾಕಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಗ್ಲಿಂಪ್ಸ್‌ನಲ್ಲಿ ಚಿರಂಜೀವಿ ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಮ್ಮಾಜಿ ಆಕ್ವಾ ಇಂಡಸ್ಟ್ರೀಸ್’ನಲ್ಲಿ ಸತ್ಯಂ ಎಂಬ ಸೌಮ್ಯಗುಣದ ಸೂಪರ್‌ವೈಸರ್ ಆಗಿ ಕೆಲಸ ಮಾಡುವ ಅವರು, ಎಲ್ಲರೂ ತೆರಳಿದ ನಂತರ ನೀರಿನಲ್ಲಿ ಬಚ್ಚಿಟ್ಟಿದ್ದ ಬಂದೂಕುಗಳನ್ನು ಹೊರತೆಗೆಯುತ್ತಾರೆ. ಚಿತ್ರದಲ್ಲಿ ತಂದೆ-ಮಗಳ ಸೆಂಟಿಮೆಂಟ್ ಪ್ರಮುಖ ಹೈಲೈಟ್ ಎಂಬುದು ಸ್ಪಷ್ಟವಾಗುತ್ತದೆ.
ಆರಂಭದಲ್ಲಿ ಸೌಮ್ಯವಾಗಿ ಕಾಣುವ ಚಿರಂಜೀವಿ, ಗ್ಲಿಂಪ್ಸ್‌ನ ಕೊನೆಯಲ್ಲಿ ಗುಂಡಿನ ಮಳೆಯೊಂದಿಗೆ ಶತ್ರುಗಳನ್ನು ಧ್ವಂಸ ಮಾಡುವ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಈ ಚಿತ್ರವನ್ನು 2027ರ ಸಂಕ್ರಾಂತಿಗೆ ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ.

ಈ ಹಿಂದೆ ಸಂಕ್ರಾಂತಿವೇಳೆ ತೆರೆಗೆ ಬಂದಿದ್ದ ‘ವಾಲ್ತೇರು ವೀರಯ್ಯ’ ₹200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿತ್ತು. ಚಿರಂಜೀವಿ ಅವರ ವಿಂಟೇಜ್ ಮಾಸ್ ಎನರ್ಜಿಯನ್ನು ತೆರೆಯ ಮೇಲೆ ತರುವಲ್ಲಿ ನಿರ್ದೇಶಕ ಬಾಬಿ ಯಶಸ್ವಿಯಾಗಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿರುವುದರಿಂದ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿದೆ. ಈಗಾಗಲೇ ಶೇ. 50ರಚ್ಚು ಚಿತ್ರೀಕರಣ ಪೂರ್ಣಗೊಂಡಿದ್ದು, ಸುಮಾರು 40 ದಿನಗಳ ಶೆಡ್ಯೂಲ್‌ ಮುಕ್ತಾಯವಾಗಿದೆ.
ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಈ ಪ್ರಾಜೆಕ್ಟ್ ಮಾಡುತ್ತಿದೆ. ವೆಂಕಟ್ ಕೆ. ನಾರಾಯಣ್ ಅವರು ಅದ್ಧೂರಿ ಬಜೆಟ್‌ನಲ್ಲಿ, ಯಾವುದೇ ರಾಜಿ ಇಲ್ಲದೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹೈ-ವೋಲ್ಟೇಜ್ ಆ್ಯಕ್ಷನ್ ಇರೋ ಈ ಸಿನಿಮಾದಲ್ಲಿ ಮಲಯಾಳಂ ನಟಿ ಅನಸ್ವರ ರಾಜನ್ ಹಾಗೂ ನಿವೇದಾ ಪೇತುರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್.ಎಸ್. ಥಮನ್ ಚಿತ್ರದ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *