1
1

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಬಿಡುಗಡೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಗೀತು ಮೋಹನ್ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಚಿತ್ರವು ಅಂತರರಾಷ್ಟ್ರೀಯ ಮಟ್ಟದ ಡ್ರಗ್ಸ್ ಮಾಫಿಯಾ ಹಾಗೂ ಕಳ್ಳಸಾಗಣೆಯ ಕಥಾಹಂದರ ಹೊಂದಿದೆ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ತಬಾಹಿ ಸಾಂಗ್ ಮೂಲಕ ಗಮನ ಸೆಳೆದಿದ್ದ ಚಿತ್ರತಂಡ ಇದೀಗ ಮತ್ತೊಂದು ರೋಮ್ಯಾಂಟಿಕ್ ವೀಡಿಯೋ ಹಾಡನ್ನು ಬಿಡುಗಡೆ ಮಾಡಿದೆ, ಮಂಗಳವಾರವಷ್ಟೇ ರಿಲೀಸಾಗಿರುವ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ‘ತಬಾಹಿ’ ಹಾಡಿನ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಈಗ ಚಿತ್ರತಂಡ ‘ಮನಮೋಹಕ’ ಎಂಬ ಮಾಂಟೇಜ್ ಶೈಲಿಯ ಡ್ಯುಯೆಟ್ ಸಾಂಗ್ ರಿಲೀಸ್ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ತಾರಾ ಸುತಾರಿಯಾ ನಡುವಿನ ನವಿರಾದ ಪ್ರೀತಿ, ರೋಮ್ಯಾನ್ಸ್ ಮತ್ತು ಆಕರ್ಷಕ ಲುಕ್ ಈ ಹಾಡಿನ ಪ್ರಮುಖ ಹೈಲೈಟ್.
ಈ ರೋಮ್ಯಾಂಟಿಕ್ ಹಾಡಿನಲ್ಲಿ ಯಶ್-ತಾರಾ ಜೋಡಿಯ ಜೊತೆಗೆ, ಯಶ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಯನತಾರಾ ಹಾಗೂ ಪ್ರೇಯಸಿ ಕಿಯಾರಾ ಅಡ್ವಾಣಿ ಅವರ ಕೆಲವು ಸುಂದರ ದೃಶ್ಯಗಳು ಕೂಡ ಇರುವುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಕನ್ನಡದ ಖ್ಯಾತ ಗೀತರಚನೆಕಾರ ಪ್ರಮೋದ್ ಮರವಂತೆ ಈ ಸುಂದರ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ತನಿಷ್ಕ್ ಬಾಗ್ಚಿ, ಫಹೀನ್ ಅಬ್ದುಲ್ಲಾ ಮತ್ತು ಅರ್ಸ್ಲಾಂ ನಿಝಾಮಿ ಸೇರಿ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಗಿದೆ.
ಈಗಾಗಲೇ ರಿಲೀಸ್ ಆಗಿರುವ ಟಾಕ್ಸಿಕ್ ಚಿತ್ರದ ಎಲ್ಲಾ ಹಾಡುಗಳು ಸಿನ ಪ್ರಿಯರ ಮನಗೆದ್ದಿದ್ದು, ಚಿತ್ರತಂಡ ಇನ್ನೂ 3 ವಿಶೇಷ ಹಾಡುಗಳನ್ನು ಬಿಡುಗಡೆ ಮಾಡಲಿದೆ. ಸಿನಿಮಾ ತೆರೆಗೆ ಬರುವ ಮುನ್ನ ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡ ಕುತೂಹಲ ಹೆಚ್ಚಿಸುತ್ತಿದೆ. ʻಕೆವಿಎನ್ʼ ಪ್ರೊಡಕ್ಷನ್ಸ್ ಟಾಕ್ಸಿಕ್ ಚಿತ್ರವನ್ನು ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ತಾಂತ್ರಿಕ ತಜ್ಞರುಗಳು ಕೆಲಸ ಮಾಡಿದ್ದು, ಚಿತ್ರದ ಮೇಕಿಂಗ್ನಲ್ಲಿ ಯಾವುದೇ ಕಾಂಪ್ರಮೈಸ್ ಮಾಡಿಕೊಂಡಿಲ್ಲ ಎಂಬುದು ಹಾಡುಗಳ ಮೂಲಕವೂ ಸಾಬೀತಾಗಿದೆ.