1
1
ಎಂ.ಎನ್. ಸುರೇಶ್ (ಮೂಗ್ ಸುರೇಶ್) ನಿರ್ದೇಶನದ ಪ್ರಥಮ ಚಿತ್ರ
ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಗುರುತಿಸಿಕೊಂಡಿರುವ ನಟ ಎಂ.ಎನ್. ಸುರೇಶ್ (ಮೂಗ್ ಸುರೇಶ್ ) ಈಗ ನಿರ್ದೇಶಕನಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ” ಕ್ಷಮೆಯಿರಲಿ ತಂದೆ” ಎಂಬ ಚಿತ್ರವನ್ನು ನಿರ್ದೇಶನ ಮಾಡುವ ಜತೆಗೆ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಜೂನ್ 12ರಂದು ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ರಾಮಕೃಷ್ಣ (ಮೇಕಪ್) ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಎನ್ ಎಂ ಸುರೇಶ್, ಈ ಹಿಂದೆ ಕೆಲವು ಚಿತ್ರಗಳಿಗೆ ಸಹ ನಿರ್ಮಾಪಕನಾಗಿದ್ದೆ. ಈ ಚಿತ್ರವನ್ನು ನಾನೇ ನಿರ್ಮಾಣ ಮಾಡಿದ್ದೇನೆ. ಅಲ್ಲದೆ ನಾನೇ ನಿರ್ದೇಶನ ಮಾಡಬೇಕು ಎಂದುಕೊಂಡಿರಲಿಲ್ಲ. ನನ್ನ ಬಗ್ಗೆ ಹತ್ತಿರದಿಂದ ಬಲ್ಲ ಸ್ನೇಹಿತರು ನೀವೇ ನಿರ್ದೇಶನ ಮಾಡಿ ಎಂದರು. ಮೊದಲ ನಿರ್ದೇಶನದ ಚಿತ್ರ, ಬೇರೆಯವರು ದುಡ್ಡು ಹಾಕುವುದು ಬೇಡ ಅಂತ ನಾನು ಕೂಡಿಟ್ಟಿದ್ದ ಫಿಕ್ಸಡ್ ಹಣವನ್ನೇ ಈ ಚಿತ್ರಕ್ಕೆ ಹಾಕಿ ನಿರ್ಮಾಣ ಮಾಡಿದ್ದೇನೆ. ಇದಕ್ಕೆ ನನ್ನ ಕುಟುಂಬದ ಸಹಕಾರವೂ ಇದೆ. ಶೀರ್ಷಿಕೆಯೇ ಹೇಳುವಂತೆ ಇದು ತಂದೆ – ಮಗನ ಬಾಂಧವ್ಯದ ಸುತ್ತ ನಡೆಯುವ ಕಥಾಹಂದರ. ಹರೀಶ್ ಅವರು ಬರೆದ ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ನನ್ನ ಮಗ ಶ್ರೀಮಂತ ಹಾಗೂ ಮಂಜುನಾಥ್ ಹೆಗ್ಡೆ ತಂದೆ ಮಗನಾಗಿ ನಟಿಸಿದ್ದಾರೆ. ರೇಣುಕಾಬಾಲಿ , ವಿನ್ಯಾ ಶೆಟ್ಟಿ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಾನು ಸಹ ಚಿಕ್ಕ ಪಾತ್ರ ಮಾಡಿದ್ದೇನೆ. ಸೂರ್ಯಕಾಂತ್ ಅವರ ಛಾಯಾಗ್ರಹಣ, ಮುತ್ತುರಾಜ್ ಅವರ ಸಂಕಲನ ಹಾಗೂ ಪುಣ್ಯೇಶ್ ಕುಮಾರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರ ಜೂನ್ 12 ರಂದು ತೆರೆಗೆ ಬರಲಿದೆ. ನನ್ನ ಮೊದಲ ನಿರ್ದೇಶನ ಹಾಗೂ ನಿರ್ಮಾಣದ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಾಯಕ ನಟ ಶ್ರೀಮಂತ, ಕಥೆ ಬರೆದಿರುವ ಹರೀಶ್, ಸಂಕಲನಕಾರ ಮುತ್ತುರಾಜ್, ನಟ ಶಿವಕುಮಾರ್ ಆರಾಧ್ಯ ಹಾಗೂ ಕಾರ್ಯಕಾರಿ ನಿರ್ಮಾಪಕಿ ಅಹಲ್ಯ ಸುರೇಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.